ಬಸ್ ನಿಲುಗಡೆ ವಿಚಾರವಾಗಿ ಕೆಎಸ್‌ಆರ್‌ಟಿಸಿ ಸಂಸ್ಥೆಯ ಮಹಿಳಾ ಕಂಡಕ್ಟರ್ ಮೇಲೆ ವಿದ್ಯಾರ್ಥಿಗಳ ಪೋಷಕರು ಹಲ್ಲೆ ನಡೆಸಿದ ಘಟನೆ ಗದಗ–ಮುಂಡರಗಿ ರಸ್ತೆಯ ಪಾಪನಾಶಿ ಟೋಲ್ ಸಮೀಪ ನಡೆದಿದೆ.
ಈ ಘಟನೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಗದಗ ಸಾರಿಗೆ ಘಟಕಕ್ಕೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ (ಸಂಖ್ಯೆ: KA-26-F-852) ಬೆಳಿಗ್ಗೆ ಸುಮಾರು 9:30ರ ವೇಳೆಗೆ ಗದಗ ನಗರದಿಂದ ಕದಾಂಪುರ ಮಾರ್ಗವಾಗಿ ಶಿಂಗಟರಾಯನಕೇರಿ ಗ್ರಾಮಕ್ಕೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.
ಈ ವೇಳೆ ಪಾಪನಾಶಿ ಟೋಲ್ ಬಳಿ ಒಂದಿಷ್ಟು ವಿದ್ಯಾರ್ಥಿಗಳು ಬಸ್ ಹತ್ತಿದ್ದಾರೆ. ಆದರೆ, ಆ ಸ್ಥಳದಲ್ಲಿ ಬಸ್ ನಿಲುಗಡೆಗೆ ಅಧಿಕೃತ ಅನುಮತಿ ಇಲ್ಲದ ಕಾರಣ, ಮಹಿಳಾ ಕಂಡಕ್ಟರ್ ಅವರು ವಿದ್ಯಾರ್ಥಿನಿಯರನ್ನು ಬಸ್‌ನಿಂದ ಇಳಿಸಲು ಸೂಚಿಸಿ, ಬಸ್ ಮುಂದಕ್ಕೆ ಚಲಾಯಿಸುವಂತೆ ಚಾಲಕನಿಗೆ ಸೂಚಿಸಿದ್ದಾರೆ.
ಈ ವಿಷಯ ತಿಳಿದ ವಿದ್ಯಾರ್ಥಿನಿ ತಂದೆ ಪ್ರಕಾಶ ಮತ್ತು ಮಿತ್ರ ನೀಲಪ್ಪ ಬಸ್‌ನ್ನು ಬೆನ್ನಟ್ಟಿ ಬಂದು, ಪಾಪನಾಶಿ ಟೋಲ್ ಬಳಿ ಅಡ್ಡಗಟ್ಟಿ ನಿಲ್ಲಿಸಿ, ಬಸ್‌ನಲ್ಲಿದ್ದ ಮಹಿಳಾ ಕಂಡಕ್ಟರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಮೊಬೈಲ್ ಕಸಿದುಕೊಂಡು, ಅಲ್ಲದೇ ನೀಲಪ್ಪ ಎಂಬುವರು ಅವರ ಕಪಾಳಕ್ಕೆ ಹೊಡೆದು ಹಲ್ಲೆ ನಡೆಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆಯ ನಂತರ ಮಹಿಳಾ ಕಂಡಕ್ಟರ್ ಅವರು ಗದಗ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಹಿಳಾ ಕಂಡಕ್ಟರ್ ಜಿಮ್ಸ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಘಟನೆ ಗದಗ ಗ್ರಾಮೀ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಸರ್ಕಾರಿ ಸಾರಿಗೆ ಸಂಸ್ಥೆಯ ಮಹಿಳಾ ಸಿಬ್ಬಂದಿಯ ಮೇಲೆ ನಡೆದ ಹಲ್ಲೆ ಖಂಡನೀಯವಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿಬರುತ್ತಿದೆ.
ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದವರು ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಎನ್ನಲಾಗಿದೆ. ಹಾಗಾಗಿ ಸಂಧಾನ ನಡೆಸಿ ಪ್ರಕರಣಕ್ಕೆ ಅಂತ್ಯ ಹೇಳಲು ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ದೂರು ದಾಖಲಿಸದಂತೆ ಮಹಿಳಾ ಕಂಡಕ್ಟರ್ ಮೇಲೆ ಸ್ಥಳೀಯ ರಾಜಕೀಯ ಮುಖಂಡರು ಒತ್ತಡ ಹೇರಿದ್ದರು ಎನ್ನಲಾಗಿದ್ದು, ದೂರು ದಾಖಲಿಸಿದರೆ ಸಾರಿಗೆ ಇಲಾಖೆಯಲ್ಲಿ ನೀನು(ಮಹಿಳಾ ಕಂಡಕ್ಟರ್) ಸೇವೆ ಸಲ್ಲಿಸುವುದು ಕಠಿಣ ಆಗುತ್ತದೆ ಎಂದು ಧಮಕಿ ಹಾಕಿದ್ದಾರೆ ಎಂಬ ಆರೋಪವು ಕೇಳಿಬಂದಿದೆ. ಇದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂಬುದು ತನಿಖೆ ನಂತರವೇ ತಿಳಿದು ಬರಲಿದೆ