ಗದಗ ತಾಲೂಕಿನ ಹುಲಕೋಟಿ ಕೈಲಾಸಾಶ್ರಮದ 34 ನೇ ವಾರ್ಷಿಕೋತ್ಸವದ ಕಾರ್ಯಕ್ರಮ ಬುಧವಾರ ಜರುಗಿದ. ನಿರ್ಭಯಾನಂದ ಶ್ರೀಗಳು, ಶಾಂತವೀರ ಶರಣರು, ಫಕೀರೇಶ್ವರ ಶ್ರೀಗಳು, ನೀಲಮ್ಮತಾಯಿ ಅಸುಂಡಿ, ಡಿ.ಆರ್. ಪಾಟೀಲ ಇತರರು ಇದ್ದರು. 
ರಾಜ್ಯ

ಹುಲಕೊಟಿ ಗ್ರಾಮದ ಶ್ರೀ ಕೈಲಾಸ ಆಶ್ರಮದ 34ನೇ ವಾರ್ಷಿಕೋತ್ಸವದ

ಶಿವಾನಂದ ಹಿರೇಮಠ
ಗದಗ: ಭಾರತೀಯ ಸನ್ಯಾಸದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಕಂಡು ಬರುವ ಸನ್ಯಾಸಿ ಮಹರ್ಷಿ ಯಾಜ್ಞವಲ್ಕರು.ಯಾಜ್ಞವಲ್ಕರಿಂದ ಬುದ್ಧನವರೆಗೆ ಅಂತಹ ಸನ್ಯಾನಿಗಳು ಕಂಡುಬರಲಿಲ್ಲವಾದರೂ ಯಾಜ್ಞವಲ್ಕರು, ಬುದ್ಧ ಹಾಗೂ ಶಂಕರಾಚಾರ್ಯರು ಸನ್ಯಾಸ ಪರಂಪರೆಯನ್ನು ಅದ್ಭುತವಾಗಿ ಬೆಳೆಸಿದರು ಎಂದು ಗದಗ-ವಿಜಯಪುರದ ರಾಮಕೃಷ್ಣ ವಿವೇಕಾನಂದಾಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಹೇಳಿದರು.
ತಾಲೂಕಿನ ಹುಲಕೊಟಿ ಗ್ರಾಮದ ಶ್ರೀ ಕೈಲಾಸ ಆಶ್ರಮದ 34ನೇ ವಾರ್ಷಿಕೋತ್ಸವದ ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡಿದ ಅವರು, ಸನ್ಯಾಸತ್ವಕ್ಕೆ ಪ್ರಮುಖವಾಗಿ ಬೇಕಾದುದು ಪರಮ ವೈರಾಗ್ಯ. ಭಾರತೀಯ ಪರಂಪರೆಯಲ್ಲಿ ಒಬ್ಬೊಬ್ಬ ಮನುಷ್ಯನು ಮೊಟ್ಟಮೊದಲು ತಪಸ್ವಿಯಾಗಬೇಕು. ತಪಸ್ಸಿನಿಂದ ಪಡೆದುಕೊಂಡ ವಸ್ತುವನ್ನು ಆನಂದಿಸುವುದರ ಜೊತೆಗೆ ಮತ್ತೊಬ್ಬರಿಗೆ ಹಂಚುವ ಗುಣವನ್ನು ಬೆಳೆಸಿಕೊಳ್ಳಬೇಕು. ರಾಮಕೃಷ್ಣ ಪರಮಹಂಸರು 12 ವರ್ಷಗಳಿಂದ ಮಾಡಿದ ತಪಸ್ಸನ್ನು ಸ್ವಂತಕ್ಕೆ ಉಪಯೋಗಿಸದೇ ಸ್ವಾಮಿ ವಿವೇಕಾನಂದರಿಗೆ ಧಾರೆಯೆರೆದರು. ನಂತರ ಸ್ವಾಮಿ ವಿವೇಕಾನಂದರು ಯುವಕರಿಗೆ ಚೈತನ್ಯದ ಚಿಲುಮೆಯಾಗಿ ವಿಶ್ವಕ್ಕೆ ಬೆಳಕಾದರು ಎಂದು ವಿವರಿಸಿದರು.
ಬಳಗಾನೂರು ಚಿಕೇನಕೊಪ್ಪದ ಚನ್ನವೀರ ಶರಣರ ಮಠದ ಶಿವಶಾಂತವೀರ ಶರಣರು ಮಾತನಾಡಿ, ಗುರು ಮಾನವನನ್ನು ಸಜ್ಜನನನ್ನಾಗಿ ಮಾಡುವುದರ ಜೊತೆಗೆ ಜನನ-ಮರಣ ಭಾಧೆಯನ್ನು ಮುಕ್ತಗೊಳಿಸಿ ದೇವರು ಇದ್ದಾನೆ ಎಂಬುದನ್ನು ತೋರಿಸುವ ಶಕ್ತಿಯಾಗಿದ್ದಾನೆ. ಗುರು ಮನುಷ್ಯನನ್ನು ಹರನನ್ನಾಗಿಸುವ ಹಾಗೂ ಭವಬಂಧನ ಬಿಡಿಸಿ ಪರಮ ಸುಖ ನೀಡುವ ಶಕ್ತಿ ಗುರುವಿನಲ್ಲಿದೆ. ಅಂತಹ ಗುರುಪರಂಪರೆಯನ್ನು ಅರ್ಥೈಸಿಕೊಂಡು ನಾವೆಲ್ಲರೂ ಬದುಕಬೇಕು ಎಂದು ಹೇಳಿದರು.
ಫಕೀರೇಶ್ವರ ಮಹಾಸಂಸ್ಥಾನ ಮಠದ ಶ್ರೀ ಫಕೀರೇಶ್ವರ ಸ್ವಾಮೀಜಿ ಮಾತನಾಡಿ, ಭಾರತ ದೇಶವು ಆಧ್ಯಾತ್ಮಿಕ ಲೋಕದ ಕೊಂಡಿಯಾಗಿದ್ದು, ಮಾನವ ಕುಲವನ್ನು ಒಂದು ಮಾಡಲು ಅನೇಕ ಪರಂಪರೆಗಳು ಹುಟ್ಟಿಕೊಂಡು ಬಂದಿವೆ. ಗುರು ಜ್ಞಾನ ಭಾಸ್ಕರನಾಗಿದ್ದು, ಶಿಷ್ಯನ ಅಜ್ಞಾನ ಕಳೆದು ಸುಜ್ಞಾನ ಬಿತ್ತಿ ಉದ್ಧಾರ ಮಾಡುತ್ತ ಬಂದಿದ್ದಾನೆ ಎಂದು ಹೇಳಿದರು.
ಸೂಫಿ ಸಂತರ ಸಾಲಿನಲ್ಲಿ ಬರುವ ಫಕೀರ ಸ್ವಾಮಿಗಳು ಹಲವಾರು ಶಾಖಾ ಮಠಗಳನ್ನು, ಶಾಖಾ ಮಸೀದಿಗಳನ್ನು ನಿರ್ಮಾಣ ಮಾಡುವ ಮೂಲಕ ಭಾವೈಕ್ಯತೆ ಸಂದೇಶಗಳನ್ನು ಪಸರಿಸಿ ಸಮಾಜದಲ್ಲಿ ಸಾಮರಸ್ಯ ಭಾವನೆಗಳನ್ನು ಬಿತ್ತಿದ್ದಾರೆ ಎಂದು ಹೇಳಿದರು.
ಅಣ್ಣಿಗೇರಿಯ ರುದ್ರಮುನೀಶ್ವರ ದಾಸೋಹ ಮಠದ ಡಾ. ಶಿವಕುಮಾರ ಸ್ವಾಮೀಜಿ ಮಾತನಾಡಿ, ಜಗತ್ತಿನ ಅಜ್ಞಾನ ಕಳೆಯಲು, ಅನಂತ ದುಃಖಗಳ ನಿವಾರಣೆಗೆ ಅನೇಕ ಪರಂಪರೆಗಳು ಹುಟ್ಟಿಕೊಂಡು ಬಂದಿವೆ.
ದುರ್ಗುಣಗಳ ಸಂಹಾರ ಮಾಡಲು ಬಂದಿರುವ ಅವತಾರವೇ ಜಗದ್ಗುರು ಸಿದ್ಧಾರೂಢರ ಪರಂಪರೆ ಎಂದು ಬಣ್ಣಿಸಿದರು.
93 ವರ್ಷಗಳ ಕಾಲ ಬದುಕಿದ ಗುರು ಸಿದ್ಧಾರೂಢರು 44 ವರ್ಷಗಳ ಕಾಲ ದೇಶದುದ್ದಕ್ಕೂ ಸಂಚರಿಸಿ ನಂತರ ಹುಬ್ಬಳ್ಳಿಗೆ ಬಂದು ನೆಲೆಯೂರಿದರು. 14 ಭಾಷೆಗಳು ಕರಗತ ಮಾಡಿಕೊಂಡಿದ್ದ ಸಿದ್ಧಾರೂಢರು 27 ಶಿಷ್ಯಪರಂಪರೆಯನ್ನು ಹೊಂದಿದ್ದರು. ಆ ಶಿಷ್ಯಪರಂಪರೆಯ ಭಾಗವೇ ರುದ್ರಮುನೀಶ್ವರ ದಾಸೋಹ ಮಠವಾಗಿದೆ ಎಂದು ಬಣ್ಣಿಸಿದರು.
ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನದ ಪೀಠಾಧಿಪತಿ ಸಚ್ಚಿದಾನಂದ ಪ್ರಣವಸ್ವರೂಪ ಆಚಾರ್ಯ ಮಹಾಮಂಡಲೇಶ್ವರ ಜಗದ್ಗುರು ಜಯೇಂದ್ರಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹೊಸಳ್ಳಿ ಬೂದೀಶ್ವರ ಸಂಸ್ಥಾನ ಮಠದ ಅಭಿನವ ಬೂದಿಶ್ವರ ಸ್ವಾಮೀಜಿ, ಅಧ್ಯಾತ್ಮ ವಿದ್ಯಾಶ್ರಮದ ಡಾ. ನೀಲಮ್ಮತಾಯಿ, ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ಸಂಚಾಲಕಿ ಬಹ್ಮಕುಮಾರಿ ಜಯಂತಿ ಅಕ್ಕನವರು ಸಮ್ಮುಖ ವಹಿಸಿ “ನಮ್ಮ ಪೀಠದ ಗುರು ಪರಂಪರೆ" ವಿಷಯದ ಕುರಿತು ಮಾತನಾಡುವರು.
ಮಾಜಿ ಶಾಸಕ ಡಿ.ಆರ್. ಪಾಟೀಲ, ಮುಖಂಡರಾದ ಎಸ್.ಕೆ. ಪಾಟೀಲ, ರವಿ ಎಂ. ಮೂಲಿಮನಿ, ಕೆ.ಆರ್. ಪ್ರಭು, ಎನ್.ಆರ್. ಸಾವಕಾರ, ಹಯಗ್ರೀವಾಚಾರ, ಸಿ.ಬಿ. ಕರಿಕಟ್ಟಿ, ಎಂ.ಡಿ. ದುರ್ಗಣ್ಣವರ, ಶಿವರತ್ನಕುಮಾರ ಪಾಟೀಲ, ಡಿ.ಜಿ. ಜೋಗಣ್ಣವರ ಸೇರಿ ಹಲವರು ಪಾಲ್ಗೊಂಡಿದ್ದರು. ಈಲ್ಲ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ ಎಚ್. ಪಾಟೀಲ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಜೆ.ಕೆ. ಜಮಾದಾರ ನಿರೂಪಿಸಿದರು.
ಸಂಜೆ 6ಕ್ಕೆ ಜಗನ್ಮಾತೆ ಶ್ರೀ ರಾಜರಾಜೇಶ್ವರಿ ಮತ್ತು ಶ್ರೀಗಳವರ ಹೂವಿನ ಪಲ್ಲಕ್ಕಿಯಲ್ಲಿ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.