ಗದಗ: 72 ಸಾವಿರ ಕೋಟಿ ಕೊರತೆ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ 1.32 ಲಕ್ಷ ಕೋಟಿ ಸಾಲ ಮಾಡುವುದೇ ಸಾಧನೆ ಎನ್ನುವುದನ್ನು ಬಜೆಟ್ ನಲ್ಲಿ ಒತ್ತಿ ಹೇಳಿದ್ದಾರೆ. ಇದು ದಿಕ್ಕು ದೆಸೆ ಇಲ್ಲದ ಬಜೆಟ್ ಆಗಿದೆ ಎಂದು ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ.ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಗ್ಯಾರಂಟಿಗಳ ಹೊರೆಯಿಂದ ಒದ್ದಾಡುತ್ತಿರುವ ಸರ್ಕಾರ ಕೃಷಿಗೆ ಕೇವಲ 17780 ಕೋಟಿ ರೂ. ನಿಗದಿ ಮಾಡುವ ಮೂಲಕ ಕೃಷಿ ವಲಯವನ್ನು ಸಂರ್ಪೂಣವಾಗಿ ನಿರ್ಲಕ್ಷಿಸಿದೆ. ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ, ಮಹದಾಯಿ ಯೋಜನೆಗಳ ಕುರಿತಂತೆ ಯಾವುದೇ ಸ್ಪಷ್ಟತೆ ಇಲ್ಲ. ಮುಂಬರುವ ಸ್ಥಳಿಯ ಚುನಾವಣೆ ದೃಷ್ಟಿಯಿಂದ ಇಂದಿರಾ ಕಿಟ್, ಕ್ಯಾಂಟೀನ್ ಇತ್ಯಾದಿಗೆ ಆದ್ಯತೆ ನೀಡಿದೆ ಎಂದು ತಿಳಿಸಿದ್ದಾರೆ.
ಅನ್ನದಾತರು, ಕೃಷಿ ಕಾಮಿರ್ಕರು, ಉದ್ಯಮಿಗಳ ಯಾವುದೇ ಬೇಡಿಕೆಗೆ ಸ್ಪಂದಿಸಿಲ್ಲ. ಕೇಂದ್ರ ಸರ್ಕಾರವನ್ನು ತೆಗಳಲು, ದೂಷಿಸಲು ಹೆಚ್ಚು ಒತ್ತು ನೀಡುವ ಮೂಲಕ ಬಜೆಟ್ ನಲ್ಲಿ ಕೆಟ್ಟ ಸಂಪ್ರದಾಯ ಹಾಕಿದ ದೇಶದ ಮೊದಲ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆಗೆ ಸಿದ್ದರಾಮಯ್ಯ ಪಾತ್ರವಾಗಿದ್ದಾರೆ. ಉತ್ತರ ಕರ್ನಾಟಕಕ್ಕೆ ಯಾವುದೇ ಹೇಳಿಕೊಳ್ಳುವ ಯೋಜನೆಗಳು ಈ ಬಜೆಟ್ ನಲ್ಲಿ ಪ್ರಕಟ ಆಗದಿರುವುದು ಈ ಭಾಗದ ಸಚಿವರು, ಕಾಂಗ್ರೆಸ್ ಶಾಸಕರು ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಇದಾಗಿದೆ. ನಾಡಿನ ಜನತೆ ಈ ಬಜೆಟ್ ಭಾರೀ ನಿರಾಸೆ ಹುಟ್ಟಿಸಿದೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿರುವ ನಾಡಿನ ಜನತೆ ಕೂಡ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಇದುವರೆಗಿನ ಕರ್ನಾಟಕ ರಾಜ್ಯದ ಒಟ್ಟು ಸಾಲ 8 ಲಕ್ಷ 25 ಸಾವಿರ ಕೋಟಿ ರೂ.ಗಳು. ಅದರಲ್ಲಿ ಸನ್ಮಾನ್ಯ ಸಿದ್ದರಾಮಯ್ಯನವರು ಮಾಡಿದ ಸಾಲ 5 ಲಕ್ಷ 55 ಸಾವಿರ ಕೋಟಿ ರೂ. ಗಳಾಗಿದೆ. ಇದೊಂದು ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಇಟ್ಟುಕೊಂಡು ಮಾಡಿದಂತ ಆಯವ್ಯಯವಲ್ಲ. ಕೇವಲ ತೃಷ್ಟೀಕರಣದ ಹಾಗೂ ಅಲ್ಪಸಂಖ್ಯಾತರನ್ನು ಓಲೈಸುವ ಬಜೆಟ್ ಆಗಿದೆ ಎಂದು ಸಿ.ಸಿ.ಪಾಟೀಲ ತಿಳಿಸಿದ್ದಾರೆ.