ಗದಗ: ರಾಜ್ಯದ ಕಾಂಗ್ರೆಸ್ ಸರ್ಕಾರವು ಸಾವಿರ ದಿನಗಳ ಆಡಳಿತ ಪೂರೈಸಿದ ಸಂಭ್ರಮದಲ್ಲಿ ನಡೆಸಿದ ಸಮಾವೇಶವು ಸಾಧನೆಗಳ ಸಮಾವೇಶವಲ್ಲ, ಬದಲಾಗಿ ಹಗರಣಗಳ ಸಮಾವೇಶ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ಆರೋಪಿಸಿದರು.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 178 ಕೋಟಿ ರೂಪಾಯಿಗಳನ್ನು 700ಕ್ಕೂ ಹೆಚ್ಚು ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ವಿಧಾನಸೌಧದಲ್ಲಿ ಇದು 178 ಕೋಟಿ ಅಲ್ಲ, 90 ಕೋಟಿ ರೂಪಾಯಿ ಎಂದು ಒಪ್ಪಿಕೊಂಡಿದ್ದಾರೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಗಳಿಗೆ ಇಷ್ಟೊಂದು ದೊಡ್ಡ ಮೊತ್ತದ ಹಣದ ವರ್ಗಾವಣೆ ಬಗ್ಗೆ ಅರಿವಿಲ್ಲ ಎಂದರೆ, ಜನರೇ ಇದನ್ನು ಯಾವ ರೀತಿಯ ಸಾಧನೆ ಎಂದು ತೀರ್ಮಾನಿಸಬೇಕು ಎಂದರು.
ರಾಜ್ಯ ಸರಕಾರ ವಕ್ಫ್ ಮಂಡಳಿಗೆ 4 ಕೋಟಿ ರೂ., 9 ನಿಗಮಗಳಲ್ಲಿ 42 ಕೋಟಿ ರೂ. ದುರ್ಬಳಕೆಯಾಗಿದೆ. 700 ಕೋಟಿ ರೂ.ಗಳ ಅಬಕಾರಿ ಹಗರಣದಿಂದಾಗಿ ಇಬ್ಬರು ಸಚಿವರ ತಲೆದಂಡವಾಗಿದೆ. ಬೋವಿ ನಿಗಮದಲ್ಲಿ 60 ಕೋಟಿ ರೂ. ಹಗರಣ ನಡೆದಿದೆ. ಇಷ್ಟೆಲ್ಲಾ ಅವಾಂತರಗಳ ನಡುವೆ ಸರ್ಕಾರ ಯಾವುದಕ್ಕಾಗಿ ಸಂಭ್ರಮಿಸುತ್ತಿದೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಆರೋಪಿಸಿದರು.
ಅಲ್ಲದೇ, ಆರ್ ಸಿಬಿ ಸಂಭ್ರಮಾಚರಣೆಯ ವೇಳೆ 11 ಜನರ ಸಾವಿಗೆ ಸರ್ಕಾರದ ಬೇಜವಾಬ್ದಾರಿಯೇ ಕಾರಣ. ರಾಜ್ಯದ ಮುಖ್ಯ ಕಾರ್ಯದರ್ಶಿಗಳು, ಪೊಲೀಸರು ಬಂದೋಬಸ್ತ್ ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದರೂ ಸರ್ಕಾರ ಹಠಕ್ಕೆ ಬಿದ್ದವರಂತೆ ಕಾರ್ಯಕ್ರಮಕ್ಕೆ ಅವಕಾಶ ನೀಡಿತು ಎಂದು ಕಿಡಿಕಾರಿದರು.
ಎಸ್ ಸಿಪಿ, ಟಿಎಸ್ ಪಿ ಹಣ ದುರ್ಬಳಕೆ:
ಸಿದ್ದರಾಮಯ್ಯನವರು ಹಿಂದೆ ಎಸ್ ಸಿಪಿ ಮತ್ತು ಟಿಎಸ್ ಪಿ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಅದನ್ನು ನಾನು ಸ್ವಾಗತಿಸುತ್ತೆನೆ. ಆದರೆ ಇಂದು ಅದೇ ಯೋಜನೆಯ ಹಣವನ್ನು ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಶೇ. 15ರಷ್ಟು ಮೀಸಲಾತಿ ನೀಡಿರುವುದು ಹಾಗೂ ನರೇಗಾ ಯೋಜನೆಯ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಸರ್ಕಾರದ ದ್ವಂದ್ವ ನೀತಿಯನ್ನು ತೋರಿಸುತ್ತದೆ ಎಂದು ದೂರಿದರು.
ಗೃಹ ಇಲಾಖೆ ಸಂಪೂರ್ಣ ವೈಫಲ್ಯ:
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನಾಸೀರ್ ಹುಸೇನ್ ಮತ್ತು ಆತನ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದಾಗ ಯಾವುದೇ ಕಠಿಣ ಕ್ರಮ ಜರುಗಿಸಲಿಲ್ಲ. ಗೃಹ ಸಚಿವರು ಸಂಪೂರ್ಣ ವೈಫಲ್ಯ ಕಂಡಿದ್ದಾರೆ. ಸಿಎಂ ತವರು ಜಿಲ್ಲೆಯಲ್ಲಿ ಡ್ರಗ್ಸ್ ಫ್ಯಾಕ್ಟರಿಯನ್ನು ಮಹಾರಾಷ್ಟ್ರ ಪೊಲೀಸರು ಪತ್ತೆ ಹಚ್ಚುವಂತಾಗಿದೆ. ನಮ್ಮ ಪೊಲೀಸರಿಗೆ ಸಾಮರ್ಥ್ಯ ಇಲ್ಲ ಎಂದಲ್ಲ, ಸರ್ಕಾರ ಅವರ ಕೈಗಳನ್ನು ಕಟ್ಟಿ ಹಾಕಿದೆ. ಆ ಮೂಲಕ ದೇಶದಲ್ಲಿ ರಾಜ್ಯದ ಪೊಲೀಸರ ಮಾನ ಹರಾಜು ಹಾಕುವ ಕೆಲಸ ಮಾಡುತ್ತಿದೆ ಎಂದರು.
ಹಾವೇರಿಯಲ್ಲಿ ನಡೆದ ಸರಕಾರದ ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಅಕ್ಕಪಕ್ಕದಲ್ಲಿ ಕುಳಿತಿದ್ದರೂ ಪರಸ್ಪರ ಮಾತನಾಡಲಿಲ್ಲ. ಸಿಎಂ ಭಾಷಣ ಶುರುವಾಗುತ್ತಿದ್ದಂತೆ ಡಿ.ಕೆ. ಶಿವಕುಮಾರ್ ಅವರು ವೇದಿಕೆಯಿಂದ ಹೊರನಡೆದರು ಎನ್ನುವುದನ್ನು ಮಾಧ್ಯಮವೊಂದರ ವರದಿಯಿಂದ ಗೊತ್ತಾಗಿದೆ. ಇದು ಅವರ ನಡುವಿನ ಅಸಮಾಧಾನಕ್ಕೆ ಸಾಕ್ಷಿ. ಈ ಸರಕಾರಕ್ಕೆ ಸಾವಿರ ದಿನಗಳ ಕ್ವಾಂಟಿಟಿಗಿಂತ ಆಡಳಿತದ ಕ್ವಾಲಿಟಿ ಮುಖ್ಯ ಎಂಬುದೇ ಮರೆತುಹೋಗಿದೆ. ಸಾವಿರ ದಿನಗಳ ಈ ಸಮಾವೇಶ ಅಸಹ್ಯಕರ ಪದ್ಧತಿ ಎಂದು ಲೇವಡಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಬಿಜೆಪಿ ಮುಖಂಡರಾದ ಎಂ.ಎಸ್.ಕರಿಗೌಡ್ರ, ಎಂ.ಎಂ. ಹಿರೇಮಠ, ಜಗನ್ನಾಥಸಾ ಭಾಂಡಗೆ ಇತರರು ಉಪಸ್ಥಿತರಿದ್ದರು.