ಗದಗ ನಗರದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ವಸಂತ ಪಡಗದ, ಸಿದ್ದಣ್ಣ ಪಲ್ಲೇದ, ಮೋಹನ ವರವಿ, ಮುತ್ತಣ್ಣ ಪಡಗದ, ಸಂಗಪ್ಪ ದೊಡ್ಡಣ್ಣವ್ವರ, ಕುಮಾರ ಕಣವಿ, ಪ್ರವಿಣ ಕರೀಬಿಷ್ಠಿ, ಷಣ್ಮುಖ, ಅರುಣ ಹೊಂಬಾಳಿ, ಬಸವರಾಜ ತುಪ್ಪದ, ಪಂಚಾಕ್ಷರಿ ಅಂಗಡಿ, ಮಹೇಶ ಗಾಣಿಗೇರ, ರಜತ್ ಭೀಮಕರ ಇತರರು ಇದ್ದರು
ರಕ್ತದಾನದಿಂದ ರಕ್ತದೊತ್ತಡ, ಮಧುಮೇಹದಂತಹ ರೋಗಗಳು ನಿಯಂತ್ರಣಕ್ಕೆ ಬರುವುದರ ಜತೆಗೆ ಆತ್ಮತೃಪ್ತಿ ಸಿಗುತ್ತದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ಧಣ್ಣ ಪಲ್ಲೇದ ಹೇಳಿದರು.
ಬಜೆಪಿ ಯುವ ನಾಯಕ, ಕಳಸಾ ಬಂಡೂರಿ ಹೋರಾಟ ವೇದಿಕೆ ಅಧ್ಯಕ್ಷ ವಸಂತ ಪಡಗದ ಹುಟ್ಟುಹಬ್ಬದ ನಿಮಿತ್ಯ ಅಂಬಿಕಾ ರಕ್ತನಿಧಿ ಹಾಗೂ ಬಾಲ ವಿನಾಯಕ ರಕ್ತದಾನ ಕೇಂದ್ರ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಕ್ತ ತಪಾಸಣೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದೇಶದಲ್ಲಿ ಪ್ರತಿವರ್ಷ 41 ದಶಲಕ್ಷ ಯುನಿಟ್ ರಕ್ತದ ಕೊರತೆ ಎದುರಾಗುತ್ತಿದೆ. ಸಮಯಕ್ಕೆ ಸರಿಯಾಗಿ ರಕ್ತ ಸಿಗದೆ ವಿವಿಧ ಕಾಯಿಲೆಗಳಿಂದ ರೋಗಿಗಳು ಬಳಲುತ್ತಿದ್ದಾರೆ. ಅಪಘಾತದಿಂದ ಗಾಯಾಳುಗಳು ಮೃತಪಡುತ್ತಿದ್ದಾರೆ. ಅಮೂಲ್ಯವಾದ ಜೀವಗಳನ್ನು ಉಳಿಸಲು ರಕ್ತದಾನ ಮಾಡುವುದು ಅತಿ ಅಗತ್ಯವಾಗಿದ್ದು, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ಕರೆ ನೀಡಿದರು.
ವಸಂತ ಪಡಗದ ಮಾತನಾಡಿ, ಜನಸಾಮಾನ್ಯರಲ್ಲಿ ರಕ್ತದಾನದ ಬಗ್ಗೆ ತಪ್ಪು ಕಲ್ಪನೆಗಳಿದ್ದು ಹೋಗಲಾಡಿಸಬೇಕು. ಹೆಚ್ಚು ಜನರು ಸೇರುವ ಧಾಮಿರ್ಕ ಕೇಂದ್ರಗಳಲ್ಲಿ ನಿಯಮಿತವಾಗಿ ರಕ್ತದಾನ ಶಿಬಿರ ಆಯೋಜಿಸಿದರೆ ದೇಶದಲ್ಲಿನ ರಕ್ತದ ಕೊರತೆ ನೀಗಿಸಬಹುದು. ಧಾಮಿರ್ಕ ಕೇಂದ್ರಗಳು ಪೂಜೆ ಪ್ರಾರ್ಥನೆಗಳಿಗೆ ಸೀಮಿತವಾಗಿರದೆ ಸಮಾಜ ಮುಖಿಯಾಗಿ ಸ್ಪಂದಿಸಬೇಕು ಎಂದರು.
ಮುಖಂಡ ವಿನೋದ ಮೊರಬದ ಮಾತನಾಡಿ, ಒಬ್ಬರ ರಕ್ತದಾನದಿಂದ ಮೂವರ ಪ್ರಾಣ ಉಳಿಸಬಹುದು. ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಮನುಷ್ಯ ದಾನ ಮಾಡಿದರಷ್ಟೇ ರಕ್ತದ ಉತ್ಪಾದನೆ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ 150 ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ರಕ್ತದಾನ ಮಾಡಿದವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಶರಣು ಮರಿಗೌಡರ, ಜಯಪ್ಪ ಕುರ್ತಕೋಟಿ, ಮಂಜುನಾಥ ರಾಯಚೂರು, ಮೋಹನ ವರವಿ, ಮುತ್ತಣ್ಣ ಪಡಗದ, ಸಂಗಪ್ಪ ದೊಡ್ಡಣ್ಣವ್ವರ, ಕುಮಾರ ಕಣವಿ, ಪ್ರವಿಣ ಕರೀಬಿಷ್ಠಿ, ಷಣ್ಮುಖ, ಅರುಣ ಹೊಂಬಾಳಿ, ಬಸವರಾಜ ತುಪ್ಪದ, ಪಂಚಾಕ್ಷರಿ ಅಂಗಡಿ, ಮಹೇಶ ಗಾಣಿಗೇರ, ರಜತ್ ಭೀಮಕರ ಇತರರು ಇದ್ದರು