ವಿಜಯವಾಣಿ ಸುದ್ದಿಜಾಲ ಗದಗ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದ ಎದುರು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿರುವುದು ಹಾಗೂ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುವವರೊಂದಿಗೆ ಕೈ ಜೋಡಿಸಿರುವುದನ್ನು ಖಂಡಿಸಿ ಶುಕ್ರವಾರ ಜಿಲ್ಲಾ ಬಿಜೆಪಿ ವತಿಯಿಂದ ಗದಗ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ಜರುಗಿತು. ಪ್ರತಿಭಟನೆಯಲ್ಲಿ ಮಾನವ ಸರಪಳಿ ನಿಮಿರ್ಸಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿದರು.
ದೇಶದಲ್ಲಿ ಅಶಾಂತಿ ಸೃಷ್ಟಿಸುವ ಹಾಗೂ ದೇಶವಿರೋಧಿ ಚಟುವಟಿಕೆಗಳಿಗೆ ಕಾಂಗ್ರೆಸ್ ನಾಯಕರು ಬೆನ್ನಲುಬಾಗಿ ನಿಂತು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿದಲ್ಲದೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ತಮ್ಮ ಆಕ್ರೋಶವನ್ನು ಹೊರಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಯುವ ಮುಖಂಡ ಉಮೇಶಗೌಡ ಪಾಟೀಲ, ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುವಂತಹ ಶಕ್ತಿಗಳನ್ನು ಪ್ರೋತ್ಸಾಹಿಸುತ್ತಿವೆ. ದೇಶದ ಪ್ರಧಾನಿಯವರ ನಿವಾಸದ ಎದುರು ಈ ರೀತಿ ಪ್ರತಿಭಟನೆ ನಡೆಸಿ ಭದ್ರತೆಗೆ ಧಕ್ಕೆ ತರುವುದು, ಆ ಮೂಲಕ ದೇಶದಲ್ಲಿ ಅರಾಜಕತೆ ಇದೆ ಎಂದು ಸಾಬೀತು ಮಾಡಲು ಈ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎಂ.ಎಸ್.ಕರಿಗೌಡ್ರ ಮಾತನಾಡಿ, ದೇಶ ಒಂದಾಗಿರುವುದು ಇವರಿಗೆ ಬೇಕಾಗಿಲ್ಲ. ವಿದೇಶದಿಂದ ಹಣ ಪಡೆದು ದೇಶದ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರನ್ನು ನೇರವಾಗಿ ಎದುರಿಸಲಾಗದೇ ಹಲವಾರು ಟುಕುಡೆ ಗ್ಯಾಂಗ್ ನವರು ಸೇರಿಕೊಂಡು ಕಾಕ್ರೋಚ್ ಪಾಟಿರ್ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಅಧ್ಯಕ್ಷ ರಾಜು ಕುರುಡಗಿ, ದೇಶದ ಆಂತರಿಕ ಭದ್ರತೆಗೆ ಕಾಂಗ್ರೆಸ್ ಶಾಪವಾಗಿದೆ. ನೀಟ್ ಪ್ರತಿಭಟನೆ ಹೆಸರಲ್ಲಿ ದೇಶದ್ರೋಹಿಗಳ ಜತೆ ಕಾಂಗ್ರೆಸ್ ಕೈಜೋಡಿಸಿದ್ದು ಬಹಿರಂಗಗೊಂಡಿದೆ ಎಂದು ಆರೋಪಿಸಿದರು.
ನಗರಸಭೆಯ ಸದಸ್ಯ ಅನಿಲ ಅಬ್ಬಿಗೇರಿ, ರಾವೇಂದ್ರ ಯಳವತ್ತಿ ಮುಂತಾದವರು ಮಾತನಾಡಿದರು. ಪ್ರತಿಭಟನಾ ನಿರತರು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ಸಾಲು ಸಾಲು ಘೋಷಣೆಗಳನ್ನು ಕೂಗಿದರು. ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಹಾಗೂ ದೇಶವಿರೋಧಿ ಕೃತ್ಯಗಳಲ್ಲಿ ತೊಡಗಿಕೊಳ್ಳುವವರ ವಿರುದ್ಧ ಕೇಂದ್ರ ಸರ್ಕಾರ ಸೂಕ್ತ ತನಿಖೆ ನಡೆಸಿ, ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಕಳಕಪ್ಪ ಬಂಡಿ, ಅಶೋಕ ನವಲಗುಂದ, ಎಂ.ಎಂ.ಹಿರೇಮಠ, ವಿಜಯಕುಮಾರ ಗಡ್ಡಿ, ಜಯಶ್ರೀ ಉಗಲಾಟ, ಅರವಿಂದ ಹುಲ್ಲೂರ, ಶಿವರಾಜಗೌಡ ಹಿರೇಮನಿಪಾಟೀಲ, ಸೋಮು ಹುಡೇದಮನಿ, ವಿನಾಯಕ ಮಾನ್ವಿ, ಶಶಿಧರ ದಿಂಡೂರ ಹಲವರು ಇದ್ದರು.