ಗದಗದಲ್ಲಿ ವಿಶ್ವ ಗ್ರಾಹಕರ ದಿನಾಚರಣೆ-2026
ಗದಗ: ಯುವ ಜನತೆಯಲ್ಲಿ ಗ್ರಾಹಕ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಹಾಗಾಗಿ "ಸುರಕ್ಷಿತವಾದ ಉತ್ಪನ್ನಗಳನ್ನು ಖರೀದಿಸಿದಾಗ ಮಾತ್ರ, ಆತ್ಮವಿಶ್ವಾಸದ ಗ್ರಾಹಕರು ಆಗಲಿಕ್ಕೆ ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ. ಆರ್. ಹೇಳಿದರು.
ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಹಾಗೂ ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯ, ಗದಗ ಇವರ ಸಂಯುಕ್ತಾಶ್ರಯದಲ್ಲಿ ಮಾರ್ಚ 25 ರಂದು ಬುಧವಾರ ನಾಗಾವಿಯ ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯ ಕೌಶಲ್ಯ ವಿಕಾಸ ಭವನ ಗ್ರಾಮ ಗಂಗೋತ್ರಿ ಆವರಣದಲ್ಲಿ ವಿಶ್ವ ಗ್ರಾಹಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾಮಟ್ಟದಲ್ಲಿ ಗ್ರಾಹಕರ ಹಿತರಕ್ಷಣೆಗಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (DD Food), ಆಹಾರ ಸುರಕ್ಷತಾ ಅಧಿಕಾರಿ (ಅಂಕಿತ ಅಧಿಕಾರಿ) ಮತ್ತು ತೂಕ ಮಾಪನ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಇವರ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಯಾವುದೇ ವಸ್ತುವನ್ನು ಖರೀದಿಸುವಾಗ ಐಎಸ್‌ಐ (ISI), ಎಫ್‌ಎಸ್‌ಎಸ್‌ಎಐ (FSSAI) ಮುದ್ರೆಗಳು ಮತ್ತು ಮುಕ್ತಾಯ ದಿನಾಂಕವನ್ನು (Expiry Date) ಕಡ್ಡಾಯವಾಗಿ ಪರೀಕ್ಷಿಸಬೇಕು ಹಾಗೂ ಕಡ್ಡಾಯವಾಗಿ ಜಿಎಸ್‌ಟಿ (GST) ಒಳಗೊಂಡ ರಶೀದಿಯನ್ನು ಕೇಳಿ ಪಡೆಯಬೇಕು. ಆನ್‌ಲೈನ್ ವೇದಿಕೆಗಳಲ್ಲಿ ವಸ್ತುಗಳನ್ನು ಖರೀದಿಸುವಾಗ ಅಧಿಕೃತ ರಶೀದಿಗಳು ಸರಿಯಾಗಿ ಲಭ್ಯವಿರುವುದಿಲ್ಲ, ಹಾಗಾಗಿ ಗ್ರಾಹಕರು ಹೆಚ್ಚು ಜಾಗರೂಕರಾಗಿರಬೇಕು ಎಂದರು.
ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆಹಾರ ವಿತರಿಸುವ ಮುನ್ನ ಅಂಕಿತ ಅಧಿಕಾರಿಗಳಿಂದ (Food Safety Officer) ಆಹಾರದ ಮಾದರಿಯನ್ನು ತಪಾಸಣೆ ಮಾಡಿಸುವುದು ಕಡ್ಡಾಯವಾಗಿದೆ. ಕಲಬೆರಕೆ ಆಹಾರ ಅಥವಾ ತೂಕದಲ್ಲಿ ಮೋಸವಾದರೆ ಗ್ರಾಹಕರು ಯಾವುದೇ ಹಿಂಜರಿಕೆಯಿಲ್ಲದೆ ಕೇವಲ ಸಣ್ಣ ಕಾಗದದ ಮೂಲಕವಾದರೂ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಬಹುದು ಎಂದು ತಿಳಿಸಿದರು.
ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎ.ಜಿ. ಮಾಲ್ದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ವಸ್ತುವನ್ನು ಖರೀದಿಸಿದರೂ ರಶೀದಿ ಪಡೆಯುವುದು ಗ್ರಾಹಕರ ಮೊದಲ ಕರ್ತವ್ಯ. ರಶೀದಿ ಇಲ್ಲದೆ ವಂಚನೆಗೊಳಗಾದರೆ, ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಒಂದನ್ನು ಕೊಂಡರೆ ಎರಡು ಉಚಿತ' ಎಂಬಂತಹ ಆಮಿಷಗಳಿಗೆ ಒಳಗಾಗುವ ಮುನ್ನ ಎಚ್ಚರ ವಹಿಸಬೇಕು. ಸಾಮಾನ್ಯವಾಗಿ ಅವಧಿ ಮುಗಿಯುತ್ತಿರುವ ಹತ್ತಿರವಿರುವ ವಸ್ತುಗಳನ್ನು ಈ ರೀತಿ ಮಾರಾಟ ಮಾಡಲಾಗುತ್ತದೆ. ವಸ್ತುಗಳ ಉತ್ಪಾದನಾ ದಿನಾಂಕ, ಮುಕ್ತಾಯ ದಿನಾಂಕ, ತೂಕ ಮತ್ತು ಅಳತೆಯನ್ನು ಪರಿಶೀಲಿಸುವುದು ಗ್ರಾಹಕರ ಮಾಹಿತಿ ಹಕ್ಕಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದ ಕುಲಪತಿಗಳು (ಪ್ರ) ಮತ್ತು ಕುಲಸಚಿವ ಪ್ರೊ. ಡಾ. ಸುರೇಶ ವಿ ನಾಡಗೌಡರ, ಡಿ ವೈ ಎಸ್ ಪಿ ಮಹಾಂತೇಶ್ ಸಜ್ಜನ್ , ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಎಸ್.ಜಿ.ಪಲ್ಲೇದ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಹಿಳಾ ಸದಸ್ಯರಾದ ಶ್ರೀಮತಿ ಯಶೋಧಾ ಪಾಟೀಲ, ಜಿಲ್ಲಾ ಕಾನೂನು ಪ್ರಾಧಿಕಾರ ಸದಸ್ಯ ಗುರುರಾಜ್.ಬಿ.ಗೌರಿ ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದ ಭೋದಕ ಹಾಗೂ ಭೋದಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಮಧು ಪ್ರಾರ್ಥನಾ ಗೀತೆ ಹಾಡಿದರು. ಆಹಾರ , ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಎಸ್.ಡಿ, ಪಾಟೀಲ ಸ್ವಾಗತಿಸಿದರು. ಸಾವಿತ್ರಿ ಪೂಜಾರ ಕಾರ್ಯಕ್ರಮ ನಿರೂಪಿಸಿದರು.