ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಸೋಮವಾರ ಜರುಗಿದ ಕೆ.ಎಚ್. ಪಾಟೀಲ 101ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ದಿನೇಶ ಗುಂಡೂರಾವ ಮಾತನಾಡಿದರು.
ದಿವಂಗತ ಕೆ.ಎಚ್. ಪಾಟೀಲರ ಸ್ಮರಣಾರ್ಥವಾಗಿ ಗದಗದಲ್ಲಿ ಕೈಗೊಳ್ಳಲಾಗುತ್ತಿರುವ ಜನಪರ ಕಾರ್ಯಕ್ರಮಗಳು ಜಿಲ್ಲೆಯ ಆರೋಗ್ಯ ಸೇವೆಗೆ ಮಹತ್ವದ ಹೆಜ್ಜೆಯಾಗಿವೆ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ ಗುಂಡೂರಾವ ಹೇಳಿದರು.
ನಗರದ ಕಾಟನ್ಸೇಲ್ ಸೋಸೈಟಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಕೆ.ಎಚ್. ಪಾಟೀಲರ 101ನೇ ಜಯಂತೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಾಸಕ ಹಾಗೂ ಸಚಿವ ಎಚ್.ಕೆ. ಪಾಟೀಲರು ಜನರ ಅಗತ್ಯಗಳನ್ನು ಮನಗಂಡು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರುತ್ತಿರುವುದು ಶ್ಲಾನೀಯ ಎಂದರು.
ಈ ಸಂದರ್ಭದಲ್ಲಿ 100 ಉಚಿತ ಮೊಣಕಾಲು ಬದಲಾವಣೆ ಶಸ್ತ್ರಚಿಕಿತ್ಸೆ, 12 ಉಚಿತ ಕಿಡ್ನಿ ಶಸ್ತ್ರಚಿಕಿತ್ಸೆ, ಹೆಣ್ಣುಮಕ್ಕಳಿಗೆ ಉಚಿತ ಹೆರಿಗೆ ಯೋಜನೆ ಹಾಗೂ ಸಾವಿರಕ್ಕೂ ಹೆಚ್ಚು ವಿವಿಧ ಶಸ್ತ್ರಚಿಕಿತ್ಸೆಗಳ ಮೂಲಕ ಜನರಿಗೆ ಸಹಾಯ ಮಾಡುವ ಕಾರ್ಯಕ್ರಮಗಳನ್ನು ಆರಂಭಿಸಲಾಗಿದೆ. ಇದೇ ವೇಳೆ ಸುಮಾರು 300 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿರುವುದು ಜಿಲ್ಲೆಯ ಆರೋಗ್ಯ ಸೇವೆಯನ್ನು ಇನ್ನಷ್ಟು ಬಲಪಡಿಸುವ ಮಹತ್ವದ ಕ್ರಮವಾಗಿದೆ ಎಂದರು.
ಎಚ್.ಕೆ. ಪಾಟೀಲರು ಯಾವುದೇ ಪ್ರಚಾರಕ್ಕಾಗಿ ಅಲ್ಲದೆ ತಮ್ಮ ತಂದೆ ಕೆ.ಎಚ್. ಪಾಟೀಲರ ಆದರ್ಶಗಳನ್ನು ಮುಂದುವರಿಸುವ ಉದ್ದೇಶದಿಂದ ಜನಸೇವೆ ಮಾಡುತ್ತಿದ್ದಾರೆ. ಸಹಕಾರ ಕ್ಷೇತ್ರ ಮತ್ತು ಸಾಮಾನ್ಯ ಜನರ ಹಿತದೃಷ್ಟಿಯೀಂದ ಅವರು ಕೆಲಸ ಮಾಡುತ್ತಿರುವುದು ಎಲ್ಲರಿಗೂ ಪ್ರೇರಣೆ ಆಗಿದೆ. ಜನರಿಗೆ ಸುಲಭವಾಗಿ ನ್ಯಾಯ ದೊರಕುವಂತೆ ಹೊಸ ಕಾನೂನುಗಳನ್ನು ತರಲು ಎಚ್.ಕೆ. ಪಾಟೀಲರು ಸಚಿವ ಸಂಪುಟದಲ್ಲಿ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಧ್ವನಿ ಇಲ್ಲದವರ ಪರವಾಗಿ ಅವರು ಧೈರ್ಯವಾಗಿ ಮಾತಾಡುತ್ತಿದ್ದಾರೆ. ಇಂತಹ ಜನಪರ ಕಾರ್ಯಕ್ರಮಗಳು ಮುಂದುವರಿಯಲಿ ಮತ್ತು ಎಚ್.ಕೆ. ಪಾಟೀಲರು ಇನ್ನಷ್ಟು ದೊಡ್ಡ ಜವಾಬ್ದಾರಿಗಳನ್ನು ನಿರ್ವಹಿಸುವ ಅವಕಾಶ ಪಡೆಯಲಿ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ವೇದಿಕೆಯಲ್ಲಿ ಭಾಷಣದ ವೇಳೆ ಕಿಡ್ನಿ ಟ್ರಾನ್ಸಪ್ಲಾಂಟ್ ನಂತರ ರೋಗಿಗಳಿಗೆ ಔಷಧಿಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಔಷಧಿ, ಮಾತ್ರೆ ನೀಡುವ ಯೋಜನೆ ಜಾರಿ ಆಗಬೇಕು ಕಾನೂನು ಸಚಿವ ಎಚ್.ಕೆ. ಪಾಟೀಲ ಮನವಿ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ದಿನೇಶ ಗುಂಡೂರಾವ ಅವರು, ಸರ್ಕಾರ ಯಾವ ರೀತಿಯಲ್ಲಿ ನೆರವು ನೀಡಬಹುದು ಎಂಬ ಬಗ್ಗೆ ಅಧಿಕಾರಿಗಳೊಂದಿಗೆ ಚಚಿರ್ಸಿ ಕ್ರಮ ಕೈಗೊಳ್ಳುವುದು ಎಂದರು.