ಗದಗ: ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಸೋಮವಾರ ಭೀಕರ ಅಪಘಾತವೊಂದು ಸಂಭವಿಸಿದ್ದು, ಮಹಿಳೆಯೊಬ್ಬರ ಮೇಲೆ ಬಸ್ ಹರಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ.
ಅಪಘಾತದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆಯಲ್ಲಿ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗಾ ಗ್ರಾಮದ ನಿವಾಸಿ ಶಾಂತವ್ವ ಸಿದ್ದಪ್ಪ ಕೋರ್ತಿ (46) ಗಂಭಿರವಾಗಿ ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕಳುಹಿಸಲಾಗಿದೆ.
ಮೂವರು ಮಹಿಳೆಯರು ಬಸ್ ನಿಲ್ದಾಣದಿಂದ ಹೊರಹೊಗುತ್ತಿದ್ದಾಗ, ನಿಲ್ದಾಣದ ಪ್ಲಾಟ್‌ಫಾರಂ ಕಡೆಗೆ ಬರುತ್ತಿದ್ದ ಬಸ್, ಏಕಾಏಕಿ ವೇಗವಾಗಿ ಮಹಿಳೆಯರತ್ತ ನುಗ್ಗಿದೆ. ಮೂವರು ಮಹಿಳೆಯರ ಪೈಕಿ ಶಾಂತವ್ವಳ ಮೇಲೆ ಬಸ್ ಹರಿದು, ಎರಡೂ ಕಾಲುಗಳು ನುಜ್ಜುಗುಜ್ಜಾಗಿವೆ. ಘಟನೆಗೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.
ಘಟನೆಯಲ್ಲಿ ಮತ್ತೊಬ್ಬ ಮಹಿಳೆಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಸಾರ್ವಜನಿಕರು, ಬಸ್ ನಿಲ್ದಾಣದ ಅಧಿಕಾರಿಗಳು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಬೆಟಗೇರಿ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.