ವಿಜಯವಾಣಿ ವಿಶೇಷ ಗದಗ: ನಿಧಿ ಸಿಕ್ಕ ನಂತರ ಲಕ್ಕುಂಡಿ ಚಿತ್ರಣವೇ ಬದಲಾಗುತ್ತಿದೆ. ದೇವಾಲಯ, ಬಾವಿಗಳು, ಪ್ರಾಚ್ಯಾವಶೇಷಗಳ ಉತ್ಖನನ, ಸಂಗ್ರಹಾಲಕ್ಕೆ ಸರ್ಕಾರ ಅನುದಾನ ಒದಗಿಸುವು ಮೂಲಕ ಲಕ್ಕುಂಡಿ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತಿದೆ. ಅದರ ಭಾಗವಾಗಿ ಲಕ್ಕುಂಡಿಯಲ್ಲಿ ಪಂಚದೇವಾಲಯ ಮತ್ತು ಬಾವಿಗಳ ಅನಾವರಣ ನಡೆದಿದ್ದು, ಹುದುಗಿ ಹೋಗಿರುವ ದೇವಾಲಯ ಬಾವಿಗಳನ್ನು ಜಗತ್ತಿಗೆ ಪರಿಚಯಿಸುವ ಕೆಲಸ ನಡೆಯುತ್ತಿದೆ.
ಐತಿಹಾಸಿಕ ಲಕ್ಕುಂಡಿಯ ಗತ ವೈಭವದ ಮರು ಅನ್ವೇಷಣೆಯ ಭಾಗವಾಗಿ ಇಲ್ಲಿನ ಪಂಚ ದೇವಸ್ಥಾನಗಳು ಹಾಗೂ ಪಂಚ ಬಾವಿಗಳ ಅನಾವರಣಗೊಳಿಸುವ ಕಾರ್ಯಕ್ಕೆ ಪುರಾತತ್ವ ಇಲಾಖೆ ಮತ್ತು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಯೋಜನೆ ರೂಪಿಸಿದೆ.
ಲಕ್ಕುಂಡಿ ಗ್ರಾಮದಲ್ಲಿ 101 ದೇವಸ್ಥಾನಗಳು, 101 ಬಾವಿಗಳಿದ್ದವು ಎಂಬ ಮಾಹಿತಿ ಇತಿಹಾಸದಲ್ಲಿ ಉಲ್ಲೇಖವಾಗಿದೆ. ಅದರಲ್ಲಿ ಈಗ ಉಳಿದಿರುವುದು ಬೆರಳೆಣಿಕೆಯಷ್ಟು ಮಾತ್ರ. ಪ್ರಾಚ್ಯ ಅವಶೇಷಗಳು, ಸ್ಮಾರಕಗಳ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ಕೊರತೆ, ಸ್ಮಾರಕಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸರ್ಕಾರಗಳಿಂದ ಹಣ ಸಿಗದ ಕಾರಣ ಹಲವು ದೇವಸ್ಥಾನಗಳು ಮತ್ತು ಬಾವಿಗಳು ಹಾಳಾಗಿದ್ದವು. ಅಂತಹವುಗಳ ಪೈಕಿ ಈಗ ಐದು ಬಾವಿ, ಐದು ದೇವಸ್ಥಾನಗಳನ್ನು ಗುರುತಿಸಿ, ಅವುಗಳನ್ನು ಸ್ವಚ್ಛಗೊಳಿಸಿ ಜಗತ್ತಿಗೆ ಪರಿಚಯಿಸುವ ಉದ್ದೇಶವನ್ನು ಪ್ರಾಧಿಕಾರ ಹೊಂದಿದೆ.
ಮೊದಲ ಹಂತದಲ್ಲಿ ಲಕ್ಕುಂಡಿ ಗ್ರಾಮದಲ್ಲಿನ ವಿದ್ಯಾಶಂಕರಲಿಂಗ ದೇವಾಲಯ, ಸೋಮನಕಟ್ಟಿ ಸೋಮಲಿಂಗೇಶ್ವರ ದೇವಾಲಯ, ಚೌಕಿಮಠದ ಈಶ್ವರ ದೇವಾಲಯ, ಅರ್ಧನಾರೀಶ್ವರ ದೇವಾಲಯ, ಕಪ್ಪಚರ ಮಠ ದೇವಾಲಯ ಹಾಗೂ ಛಬ್ಬೇರ ಬಾವಿ, ಸಿದ್ಧರ ಬಾವಿ, ಫಕ್ಕೀರಸ್ವಾಮಿ ಮಠದ ಬಾವಿ, ಸೋಮಲಿಂಗೇಶ್ವರ ಬಾವಿಗಳನ್ನು ಸ್ವಚ್ಛಗೊಳಿಸಲು ಉದ್ದೇಶಿಸಲಾಗಿದ್ದು ಪ್ರಕ್ರಿಯೆ ಜಾರಿಯಲ್ಲಿದೆ.
‘ಪಂಚ ದೇವಸ್ಥಾನ ಮತ್ತು ಪಂಚ ಬಾವಿಗಳ ಅನಾವರಣ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅವರು ಫೆ.6ರಂದು ಚಾಲನೆ ನೀಡಿದ್ದರು. ಅದಾದನಂತರ ಬಾವಿ ಮತ್ತು ದೇವಸ್ಥಾನಗಳ ಸುತ್ತ ಇರುವ ಮುಳ್ಳು ಕಂಠಿ ತೆರವು, ಬಾವಿಯಲ್ಲಿ ತುಂಬಿಕೊಂಡಿರುವ ಹೊಲಸು ನೀರನ್ನು ತೆಗೆದು ಸ್ವಚ್ಛಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಒಂದು ವಾರದಲ್ಲಿ ಈ ಪ್ರಕ್ರಿಯೆ ಮುಗಿಯಲಿದೆ’ ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಮಿತಿ ಸದಸ್ಯ ಸಿದ್ದು ಪಾಟೀಲ ತಿಳಿಸಿದ್ದಾರೆ.
‘ಲಕ್ಕುಂಡಿಯ ಗತ ವೈಭವದ ಮರು ಅನ್ವೇಷಣೆ ಕೆಲಸ ಸಚಿವ ಎಚ್.ಕೆ.ಪಾಟೀಲ ಅವರ ಆಸಕ್ತಿ, ಮುತುವರ್ಜಿ ಕಾರಣದಿಂದ ಆರಂಭಗೊಂಡಿದೆ. ಈವರೆಗೆ ಲಕ್ಕುಂಡಿಯಲ್ಲಿನ 16 ದೇವಸ್ಥಾನಗಳನ್ನು ರಾಜ್ಯ ಸಂರಕ್ಷಿತ ಸ್ಮಾರಕ ಎಂದು ಘೋಷಣೆ ಮಾಡಲಾಗಿದೆ. ಈ ವರ್ಷದೊಳಗೆ ಅದನ್ನು 50ಕ್ಕೆ ಹೆಚ್ಚಿಸುವ ಗುರಿಯೊಂದಿಗೆ ಕೆಲಸ ಮಾಡಲಾಗುತ್ತಿದೆ.
‘ಸ್ವಚ್ಛತಾ ಕೆಲಸ ಪೂರ್ಣಗೊಂಡ ಬಳಿಕ ಎಲ್ಲ ದೇವಸ್ಥಾನ ಮತ್ತು ಬಾವಿಗಳ ತ್ರೀಡಿ ಸ್ಕ್ಯಾನಿಂಗ್ ಮಾಡಿಸಿ, ಕ್ರಿಯಾಯೋಜನೆ ರೂಪಿಸಿ, ಜೀರ್ಣೋದ್ಧಾರಕ್ಕೆ ಕ್ರಮವಹಿಸಲಾಗುವುದು. ಇವು ರಾಜ್ಯ ಸಂರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿ ಬಂದರೆ ಇವುಗಳ ನಿರ್ವಹಣೆಗೆ ಸರ್ಕಾರದಿಂದ ಹಣ ಸಿಗಲಿದೆ. ಜತೆಗೆ ಯಾರೂ ಅವುಗಳನ್ನು ಅತಿಕ್ರಮಣ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ದೇವಾಲಯ ಮತ್ತು ಬಾವಿಗಳ ಅನಾವರಣ ಕಾರ್ಯ ನಡೆಯುತ್ತಿದೆ.
ಈಗ ಆಯ್ಕೆ ಮಾಡಿರುವ ದೇವಸ್ಥಾನ ಮತ್ತು ಬಾವಿಗಳ ಪೈಕಿ ಕೆಲವು ಹೂತಿವೆ. ಇನ್ನು ಕೆಲವು ದುರಸ್ತಿಯ ಸ್ಥಿತಿಯಲ್ಲಿವೆ. ಬಾವಿಗಳ ಸೊಗಸು ಮಾತ್ರ ಅದ್ಭುತವಾಗಿದೆ. ಸಂರಕ್ಷಿತ ಸ್ಮಾರಕಗಳ ಪಟ್ಟಿಗೆ ಸೇರ್ಪಡೆಯಾದರೆ ಲಕ್ಕುಂಡಿ ಗತ ವೈಭವ ಮರಳಲಿದೆ
ಐದು ದೇವಸ್ಥಾನ, ಐದು ಬಾವಿಗಳು ಕಾರಣಾಂತರಗಳಿಂದ ಹೂತು ಹೋಗಿವೆ. ಚೌಕಿಮಠ ಕುಟುಂಬದವರ ಮನೆಯೊಳಗೆ ದೇವಸ್ಥಾನ ಇದ್ದು ಅದನ್ನು ಬಿಟ್ಟುಕೊಡಲು ಸಿದ್ಧರಿದ್ದಾರೆ. ನಿಯಮದ ಪ್ರಕಾರ ಅವರಿಗೆ ಸರ್ಕಾರ ಪರಿಹಾರ ನೀಡಲಿದೆ