ಗದಗ 
ರಾಜ್ಯ

ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣಕ್ಕೆ ಸರ್ಕಾರದ ಬೆಂಬಲ

ಶಿವಾನಂದ ಹಿರೇಮಠ
ಗದಗ:
ರಾಜ್ಯ ಸರ್ಕಾರವು ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ₹4,500 ಕೋಟಿ ಬಜೆಟ್ ಒದಗಿಸಲಾಗಿದೆ. ಈ ಅನುದಾನದ ಪ್ರಮುಖ ಭಾಗವನ್ನು ಮಕ್ಕಳ ಶಿಕ್ಷಣಕ್ಕೆ ಬಳಸಲಾಗುತ್ತಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವರಾದ ಬಿ.ಝಡ್. ಜಮೀರ ಅಹ್ಮದ್ ಖಾನ್ ಅವರು ಹೇಳಿದರು.
ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಮಂಗಳವಾರ (ಜ.20) ಕರ್ನಾಟಕ ಮೌಲಾನಾ ಅಜಾದ ಪಬ್ಲಿಕ್ ಶಾಲೆ (ಆಂಗ್ಲ ಮಾಧ್ಯಮ) ಯ ನೂತನ ಕಟ್ಟಡದ ಲೋಕಾರ್ಪಣೆ ಹಾಗೂ ಹೆಚ್ಚುವರಿ ತರಗತಿಗಳ ಕಟ್ಟಡ ಶಂಕುಸ್ಥಾಪನೆ ಸಮಾರಂಭವನ್ನು ನಗರದ ಗಂಗಿಮಡಿಯಲ್ಕಿ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 2.38 ಲಕ್ಷಕ್ಕೂ ಅಧಿಕ ಮಕ್ಕಳು ವಸತಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಅನೇಕ ವಸತಿ ಶಾಲೆಗಳು ಆರಂಭವಾಗಿದ್ದು, ಇದೀಗ ಮತ್ತಷ್ಟು 100 ವಸತಿ ಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ. 100 ಮದರಸಾಗಳಲ್ಲಿ 9–10ನೇ ತರಗತಿ ಓದುತ್ತಿರುವ ಸುಮಾರು 5,000 ಮಕ್ಕಳು ಉತ್ತೀರ್ಣರಾಗುತ್ತಿದ್ದಾರೆ. ಮದರಸಾಗಳಲ್ಲಿಯೂ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಬೇಕು ಎಂಬ ಕಳಕಳಿಯಿಂದ ಸರ್ಕಾರ ಕೆಲಸ ಮಾಡುತ್ತಿದೆ” ಎಂದರು.
ಕಡಿಮೆ ಅನುದಾನದಲ್ಲೇ ಗುಣಮಟ್ಟದ ಹಾಗೂ ವಿಶಾಲ ಕಟ್ಟಡ ನಿರ್ಮಾಣವಾಗಿರುವುದು ಸಂತೋಷದ ವಿಷಯ. ಈ ಕಾರ್ಯಕ್ಕೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ವಿಶೇಷವಾಗಿ ಸಚಿವ ಡಾ.ಎಚ್.ಕೆ. ಪಾಟೀಲ ಅವರ ಸಹಕಾರಕ್ಕೆ ಧನ್ಯವಾದಗಳು ಎಂದು ಸಚಿವ ಜಮೀರ ಅಹ್ಮದ್ ಖಾನ್ ಅವರು ತಿಳಿಸಿದರು.
ಈ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ. ಪಾಟೀಲ ಅವರು, ಶಾಲಾ ನೂತನ ಕಟ್ಟಡ ನಿರ್ಮಾಣಕ್ಕೆ ₹235 ಲಕ್ಷ ಹಾಗೂ ಹೆಚ್ಚುವರಿ ತರಗತಿಗಳ ಕಟ್ಟಡ ನಿರ್ಮಾಣಕ್ಕೆ ₹143 ಲಕ್ಷ ವೆಚ್ಚದ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಕಟ್ಟಡ ಗುಣಮಟ್ಟದ ಕಾಮಗಾರಿ ಆಗಿದ್ದು, ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ಈ ಕಟ್ಟಡದಲ್ಲಿ ಅಭ್ಯಾಸ ಮಾಡುವ ಎಲ್ಲ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂದು ಶುಭ ಕೋರಿದರು.
ವೇದಿಕೆಯಲ್ಲಿ ಗದಗ–ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ,
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲ್ಲೂಕು ಅಧ್ಯಕ್ಷ ಅಶೋಕ ಮಂದಾಲಿ, ಕೃಷ್ಣಗೌಡ ಪಾಟೀಲ, ಪಾರುಕ್ ಹುಬ್ಬಳ್ಳಿ, ಎ.ಎಂ. ಹಿಂಡಸಗೇರಿ, ಬಸವರಾಜ್,
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಕೆ.ಆರ್.ಐ.ಡಿ.ಎಲ್. ಕಾರ್ಯನಿರ್ವಾಹಕ ಅಭಿಯಂತರ ಅನಿಲ ಪಾಟೀಲ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಮಿತ್ ಬಿದರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.