ಗದಗ ನಗರದಲ್ಲಿ ವಿವಿಧ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿರುವ ಕುರಿತು ಡಿ.ಆರ್. ಪಾಟೀಲ ಸುದ್ದಿಗೋಷ್ಠಿ ನಡೆಸಿದರು. ಕೃಷ್ಣಗೌಡ ಪಾಟೀಲ, ರಾಮಕೃಷ್ಣ ದೊಡ್ಡಮನಿ, ಟಿ. ಈಶ್ವರ, ಬಿ. ಬಿ ಅಸೂಟಿ, ಹುಬ್ಬಳ್ಳಿ, ವಿವೇಕ ಯಾವಗಲ್ ಇದ್ದರು.
ಜಿಲ್ಲಾ ನಾಗರಿಕ ಸಮಿತಿಯಿಂದ ಇತ್ತೀಚೆಗೆ ರಾಜ್ಯ ರಾಜಕಾರಣದಲ್ಲಿ ಉನ್ನತ ಸ್ಥಾನಕ್ಕೇರಿದ ಗಣ್ಯರಿಗೆ ಸನ್ಮಾನ ಸಮಾರಂಭ ಸೆ. 9, 2026 ರಂದು ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಡಿ. ಆರ್. ಪಾಟೀಲ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ತೋಂಟದ ಸಿದ್ಧರಾಮ ಶ್ರೀಗಳು ಸಾನ್ನಿಧ್ಯ ವಹಿಸುವರು, ಶಾಸಕ ಡಾ. ಹೆಚ್. ಕೆ. ಪಾಟೀಲ ಅಧ್ಯಕ್ಷತೆ ವಹಿಸುವರು ಎಂದರು. ವಿಧಾನ ಸಭಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಆಗಿರುವ ರೋಣದ ಶಾಸಕ ಜಿ.ಎಸ್. ಪಾಟೀಲ ಹಾಗೂ ರಾಜ್ಯ ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರನ್ನು ಸನ್ಮಾನಿಸಲಾಗುವುದು. ಉನ್ನತ ಶಿಕ್ಷಣ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಬಸವರಾಜ ರಾಯರೆಡ್ಡಿ ಹಾಗೂ ವಿಧಾನ ಪರಿಷತ್ ಉಪ ಸಭಾಪತಿಯಾಗಿ ಆಯ್ಕೆ ಆಗಿರುವ ಉಮಾಶ್ರೀ ಅವರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ವಿಧಾನಸಭಾ ಉಪಾಧ್ಯಕ್ಷರಾಗಿ ಆಯ್ಕೆ ಆಗಿರುವ ಮಂಕಾಳ ವೈದ್ಯ, ಕರ್ನಾಟಕ ಚೇಂಬರ್ ಆಫ್ ಕಾಮರ್ಸ ಹುಬ್ಬಳ್ಳಿಯ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಜಿ. ಕೆ. ಆದಪ್ಪಗೌಡ್ರ ಅವರನ್ನು ಸನ್ಮಾನಿಸಲಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಸಿ. ಸಿ. ಪಾಟೀಲ, ಎನ್. ಹೆಚ್. ಕೋನರಡ್ಡಿ, ಡಾ. ಚಂದ್ರು ಲಮಾಣಿ, ಪ್ರೊ. ಎಸ್. ವಿ. ಸಂಕನೂರ, ಎಫ್. ಹೆಚ್. ಜಕ್ಕಪ್ಪನವರ, ಜಿ.ಎಸ್. ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಕೃಷ್ಣಾ ಪರಾಪೂರ, ಶಕುಂತಲಾ ಅಕ್ಕಿ, ಸುಜಾತ ದೊಡ್ಡಮನಿ, ವಾಸಣ್ಣ ಕುರಡಗಿ, ಸಿದ್ದಲಿಂಗೇಶ್ವರ ಪಾಟೀಲ ಅವರು ಭಾಗವಹಿಸಲಿದ್ದಾರೆ ಎಂದರು.
ಮಾಜಿ ಸಚಿವ ಬಿ.ಆರ್. ಯಾವಗಲ್ಲ ಮಾತನಾಡಿ, ಒಂದೇ ಜಿಲ್ಲೆಯ ಇಬ್ಬರು ಜನಪ್ರತಿನಿಧಿಗಳು ಪರಿಷತ್ ಹಾಗೂ ವಿಧಾನಸಭೆಯ ಅಧ್ಯಕ್ಷರಾಗಿದ್ದು ಸಂತಸ ತಂದಿದೆ. ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯುವ ದೊಡ್ಡ ಜವಾಬ್ದಾರಿ ಸಲೀಂ ಅಹ್ಮದ್ ಹಾಗೂ ಜಿ. ಎಸ್ ಪಾಟೀಲರರಿಗೆ ಸಿಕ್ಕಿದೆ. ಪಕ್ಷಾತಿತವಾಗಿ ಪ್ರೀತಿ, ವಿಶ್ವಾಸ ಗಳಿಸಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಜಿ. ಎಸ್ ಗಡ್ಡದೇವರಮಠ, ಸಿದ್ದಲಿಂಗೇಶ ಪಾಟೀಲ, ಸುಜಾತಾ ದೊಡ್ಡಮನಿ, ವಾಸಣ್ಣ ಕುರಡಗಿ ಇತರರು ಇದ್ದರು.