ಗದಗ ನಗರಸಭೆಗೆ ಸೋಮವಾರ ಲೋಕಾಯುಕ್ತರು ದಾಳಿ ನಡೆಸಿ ಪರಿಶೀಲನೆ ನಡೆಸಿದರು. 
ರಾಜ್ಯ

ಗದಗ ನಗರಸಭೆ ಮೇಲೆ ಲೋಕಾಯುಕ್ತ ದಾಳಿ

ಶಿವಾನಂದ ಹಿರೇಮಠ
ವಿಜಯವಾಣಿ ಸುದ್ದಿಜಾಲ ಗದಗ
ನಗರಸಭೆ ಕಚೇರಿ ಮೇಲೆ ಸೋಮವಾರ ಲೋಕಾಯುಕ್ತ ಅಧಿಕಾರಿಗಳು ದಿಢೀರ್​ ದಾಳಿ ನಡೆಸಿ, ವಿವಿಧ ವಿಭಾಗಗಳ ಕಡತಗಳನ್ನು ಸುದೀರ್ವಾಗಿ ಪರಿಶೀಲಿಸಿದರು. ಲಂಚದ ಬೇಡಿಕೆ, ಸಾರ್ವಜನಿಕರ ಕೆಲಸಗಳಲ್ಲಿ ಅನಗತ್ಯ ವಿಳಂಬ ಹಾಗೂ ಆಡಳಿತಾತ್ಮಕ ನಿರ್ಲಕ್ಷ$್ಯದ ಕುರಿತು ಬಂದ ದೂರುಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಲೋಕಾ ಅಧಿಕಾರಿಗಳು ಕೆಲ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಲೋಕಾಯುಕ್ತರು ನೀಡಿದ ಸರ್ಚ ವಾರೆಂಟ್​ ನಿರ್ದೇಶನದ ಮೇರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ ಗದಗ ಲೋಕಾಯುಕ್ತ ಡಿಎಸ್​ಪಿ ವಿಜಯ ಬಿರಾದಾರ ನೇತೃತ್ವ ವಹಿಸಿದ್ದರು. ಕಾರ್ಯಾಚರಣೆಯಲ್ಲಿ ಐವರು ಸಿಪಿಐಗಳು ಸೇರಿದಂತೆ ಗದಗ ಹಾಗೂ ಧಾರವಾಡ ಜಿಲ್ಲೆಗಳ 15ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ಸೋಮಾವರ ಬೆಳಗ್ಗೆಯೇ ಏಳಕ್ಕೂ ಹೆಚ್ಚು ವಾಹನಗಳಲ್ಲಿ ನಗರಸಭೆ ಕಚೇರಿಗೆ ಆಗಮಿಸಿದ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ವಿವಿಧ ವಿಭಾಗಗಳಿಗೆ ತೆರಳಿ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ಆರಂಭಿಸಿದರು. ಬೀದಿದೀಪ ನಿರ್ವಹಣೆ, ಕುಡಿಯುವ ನೀರಿನ ಪೂರೈಕೆ, ಟ್ಯಾಂಕರ್​ ಮೂಲಕ ನೀರು ವಿತರಣೆ, ಲೋಕೋಪಯೋಗಿ ಇಲಾಖೆ, ತೆರಿಗೆ ವಿಭಾಗ ಸೇರಿದಂತೆ ಒಟ್ಟು ಎಂಟು ಪ್ರಮುಖ ವಿಭಾಗಗಳ ಕಡತಗಳನ್ನು ಪರಿಶೀಲಿಸಲಾಯಿತು. ಸಾರ್ವಜನಿಕರಿಂದ ಸಲ್ಲಿಕೆಯಾಗಿದ್ದ ವಿವಿಧ ಅಜಿರ್ಗಳ ಪ್ರಗತಿ ಹಾಗೂ ವಿಲೇವಾರಿ ಕುರಿತ ದಾಖಲೆಗಳನ್ನೂ ಅಧಿಕಾರಿಗಳು ಪರಿಶೀಲಿಸಿದರು.
ಸಂಜೆಯವರೆಗೂ ಮುಂದುವರಿದ ಪರಿಶೀಲನೆ ವೇಳೆ ಹಲವಾರು ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸಿದ್ದಾರೆ. ವಿವಿಧ ವಿಭಾಗಗಳಲ್ಲಿ ಹಲವು ಲೋಪದೋಷಗಳು ಕಂಡು ಬಂದಿರುವುದಾಗಿ ತಿಳಿದುಬಂದಿದೆ. ಸಂಬಂಧಪಟ್ಟ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ಸಂಗ್ರಹಿಸಿ ವಿವರಣೆ ಪಡೆಯಲಾಯಿತು ಎಂದು ತಿಳಿದು ಬಂದಿದೆ.
ದಾಳಿಯ ಆರಂಭದಲ್ಲಿ ಏಕಾಏಕಿ ಲೋಕಾಯುಕ್ತ ಅಧಿಕಾರಿಗಳು ಆಗಮಿಸಿದ್ದರಿಂದ ನಗರಸಭೆ ಸಿಬ್ಬಂದಿ ಕೆಲಕಾಲ ತತ್ತರಿಸಿದ್ದರು. ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗದಗ ಬೆಟಗೇರಿ ನಗರಸಭೆಯಲ್ಲಿ ಹಲವು ವರ್ಷಗಳಿಂದ ವ್ಯಾಪಕ ಭ್ರಷ್ಟಾಚಾರ, ಲಂಚದ ಬೇಡಿಕೆ ಹಾಗೂ ಸಾರ್ವಜನಿಕರ ಕೆಲಸಗಳಿಗೆ ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪಗಳನ್ನು ಸಾರ್ವಜನಿಕರು ನಿರಂತರವಾಗಿ ಮಾಡುತ್ತಿದ್ದರು. ಸೋಮವಾರ ನಡೆದ ಲೋಕಾಯುಕ್ತ ದಾಳಿ ಆ ಆರೋಪಗಳಿಗೆ ಮತ್ತಷ್ಟು ಬಲ ಬಂದಂತಾಗಿದೆ.
ಕಳೆದ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಅಧಿಕಾರಿಗಳ ಕಾರ್ಯವೈಖರಿ, ನಿರ್ಲಕ್ಷ$್ಯ ಮತ್ತು ಲಂಚಬಾಕತನದ ಕುರಿತು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ದಾಳಿ ನಡೆದಿರುವುದಾಗಿ ತಿಳಿದು ಬಂದಿದೆ.
ದಾಳಿಯ ವಿಚಾರ ಅವಳಿ ನಗರದಲ್ಲಿ ದಿನವಿಡೀ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಲೋಕಾಯುಕ್ತರ ಪರಿಶೀಲನೆಯಿಂದ ಮುಂದಿನ ದಿನಗಳಲ್ಲಿ ನಗರಸಭೆಯ ಆಡಳಿತದಲ್ಲಿ ಯಾವ ರೀತಿಯ ಕ್ರಮಗಳು ಕೈಗೊಳ್ಳಲಾಗುತ್ತವೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ. ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆಯ ವೇಳೆ ಸಂಗ್ರಹಿಸಿರುವ ದಾಖಲೆಗಳು ಹಾಗೂ ಮಾಹಿತಿ ಆಧರಿಸಿ ಮುಂದಿನ ದಿನಗಳಲ್ಲಿ ಹಲವು ರೀತಿಯ ಪ್ರತ್ಯೇಕ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ.