ಜಿಲ್ಲಾಡಳಿತ ಭವನದಲ್ಲಿ ವಚನ ಸಾಹಿತ್ಯ ದಿನಾಚರಣೆ ಆಚರಿಸಲಾಯಿತು. ಸಿ.ಎನ್​. ಶ್ರೀಧರ, ಡಾ. ದುರಗೇಶ ಕೆ.ಆರ್​. ಬಸವರಾಜ ಬಳ್ಳಾರಿ ಶಂಕರಣ್ಣ ಸಂಕಣ್ಣವರ ಇತರರು ಇದ್ದರು. 
ರಾಜ್ಯ

ಡಾ. ಫ. ಗು. ಹಳಕಟ್ಟಿಯವರ ಜನ್ಮದಿನದ ನಿಮಿತ್ಯ! ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ

ಶಿವಾನಂದ ಹಿರೇಮಠ
ವಿಜಯವಾಣಿ ಸುದ್ದಿಜಾಲ ಗದಗ
ವಚನ ಸಾಹಿತ್ಯದ ಸಂರಕ್ಷಣೆಗಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟಿದ್ದ ಡಾ. ಫ.ಗು. ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಪ್ರತಿಯೊಬ್ಬರಿಗೂ ವಚನಗಳ ಮಹತ್ವವನ್ನು ನೆನಪಿಸುವ ಪವಿತ್ರ ದಿನವಾಗಿದೆ. ಹಳಕಟ್ಟಿ ಅವರ ಆದರ್ಶಗಳು ಮತ್ತು ವಚನಗಳ ಸಂದೇಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್​ ಶಾಸಕ ಎಸ್​. ವಿ. ಸಂಕನೂರು ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಡಾ. ಫ. ಗು. ಹಳಕಟ್ಟಿಯವರ ಜನ್ಮದಿನದ ನಿಮಿತ್ಯ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಶರಣರು ತಾಳೆಗರಿ, ಓಲೆಗರಿಗಳಲ್ಲಿ ಬರೆದಿಟ್ಟಿದ್ದ ವಚನಗಳನ್ನು ಕಡುಬಡತನ ಮತ್ತು ಕಷ್ಟದ ಕಾಲದಲ್ಲೂ ಊರೂರು ಅಲೆದು ಸಂಗ್ರಹಿಸಿದ ಕೀತಿರ್ ಫ.ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ. ಇದೇ ಕಾರಣಕ್ಕಾಗಿ ಅವರನ್ನು ವಚನ ಪಿತಾಮಹ ಎಂದು ಗೌರವಿಸಲಾಗುತ್ತದೆ. ವಕೀಲಿ ವೃತ್ತಿಯನ್ನು ಬದಿಗಿಟ್ಟು, ಸೈಕಲ್​ ಮೇಲೆ ಹಳ್ಳಿಹಳ್ಳಿಗಳಿಗೆ ಭೇಟಿ ನೀಡಿ ಸಾವಿರಾರು ವಚನಗಳನ್ನು ಅವರು ಸಂರಕ್ಷಿಸಿದರು. ವಚನಗಳ ಮುದ್ರಣಕ್ಕಾಗಿ ಸ್ವಂತ ಪ್ರಿಂಟಿಂಗ್​ ಪ್ರೆಸ್​ ಸ್ಥಾಪಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಹಳಕಟ್ಟಿಯವರು ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಸೀಮಿತವಾಗಿರದೆ, ಬಿಜಾಪುರದಲ್ಲಿ ಲಿಂಗಾಯತ ವಿದ್ಯಾವರ್ಧಕ ಸಂ ಶಿಕ್ಷಣ ಸಂಸ್ಥೆ, ಸಿದ್ದೇಶ್ವರ ಬ್ಯಾಂಕ್​ ಹಾಗೂ ರೈತರು ಮತ್ತು ನೇಕಾರರ ಅನುಕೂಲಕ್ಕಾಗಿ ವಿವಿಧ ಸಹಕಾರಿ ಸಂಗಳನ್ನು ಸ್ಥಾಪಿಸಿ ಸಮಾಜದ ಏಳಿಗೆಗೆ ಶ್ರಮಿಸಿದರು ಎಂದರು.
ಶರಣ ತತ್ವ ಚಿಂತಕ ಅಶೋಕ ಬರಗುಂಡಿ ಮಾತನಾಡಿ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿಯವರು ತಮ್ಮ ಸ್ವಂತ ಬದುಕನ್ನು ಲೆಕ್ಕಿಸದೆ ವಚನ ಸಾಹಿತ್ಯದ ಉಳಿವಿಗಾಗಿ ನಡೆಸಿದ ಹೋರಾಟ ಮತ್ತು ಸಮರ್ಪಣಾ ಮನೋಭಾವ ಅನನ್ಯವಾದುದು. ವಚನಗಳು ಕೇವಲ ಓದುವ ಗ್ರಂಥಗಳಲ್ಲ. ಅವು ನಮ್ಮ ದೈನಂದಿನ ಬದುಕಿನ ದಾರಿ ಆಗಬೇಕು ಎಂದು ಅಶೋಕ ಬರಗುಂಡಿ ಹೇಳಿದರು.
ಮುಂಬೈ ಸೇಂಟ್​ ಕೇವಿಯರ್ಸ ಕಾಲೇಜಿನಲ್ಲಿ ಬಿ.ಎ. ಓದುತ್ತಿದ್ದಾಗಲೂ ಹಳಕಟ್ಟಿಯವರಿಗೆ ತಮ್ಮ ಧರ್ಮದ ಇತಿಹಾಸವನ್ನು ಹುಡುಕುವ ಹಂಬಲವಿತ್ತು. 1902ರಲ್ಲಿ ಬಿ.ಎ ಪಾಸಾದ ನಂತರ ಅವರು ತಮ್ಮ ಧರ್ಮದ ಸಾಹಿತ್ಯವನ್ನು ಹುಡುಕುತ್ತ ಹೋದಾಗ ಮೊದಲು ಸಿಕ್ಕಿದ್ದು ಬಸವ ಪುರಾಣ ಮತ್ತು ಚೆನ್ನಬಸವ ಪುರಾಣಗಳು. ಆದರೆ ಇವುಗಳಲ್ಲಿ ತತ್ವಕ್ಕಿಂತ ಕಥೆಗಳೇ ಹೆಚ್ಚಾಗಿದ್ದರಿಂದ ಅವರಿಗೆ ಭ್ರಮನಿರಸ ಆಯಿತು. ನಂತರದ ದಿನಗಳಲ್ಲಿ ಹಾಲಭಾವಿ ವೀರಭದ್ರಪ್ಪನವರು ತಂದುಕೊಟ್ಟ ಚಾಮರಸನ ಪ್ರಭುಲಿಂಗಲೀಲೆ ಮತ್ತು ಗಣಭಾಷಿತ ರತ್ನಮಾಲೆ ಗ್ರಂಥಗಳನ್ನು ಓದಿದಾಗ ಹಳಕಟ್ಟಿಯವರು ಆನಂದ ತುಂಬಿಬಂತು. ಅಲ್ಲಿ ಬಿಡಿಬಿಡಿಯಾಗಿ ವಚನಗಳು ಇರುವುದನ್ನು ಕಂಡುಹಿಡಿದು, ವಚನಗಳ ಆಕರಗಳನ್ನು ಬರೆದಿಟ್ಟುಕೊಳ್ಳುವ ಹವ್ಯಾಸವನ್ನು ಬೆಳೆಸಿಕೊಂಡರು. ವೈಯಕ್ತಿಕ ಸುಖಭೋಗಗಳ ಲಾಲಸೆಗೆ ಬೀಳದೆ, ಸಮಾಜದ ಹಿತಕ್ಕಾಗಿ ಸ್ವಾವಲಂಬಿಯಾಗಿ ಬದುಕಿದ ಹಳಕಟ್ಟಿಯವರು ಗುಣಗ್ರಾಹಿತ್ವ ಮತ್ತು ಸತ್ಯದ ಆಲೋಚನೆಗಳನ್ನು ಇಂದಿನ ಸಮಾಜವು ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಹಳಕಟ್ಟಿಯವರ ಸಂಶೋಧನೆಯ ಮುನ್ನ ಕೇವಲ 40 ಶರಣರ ಹೆಸರುಗಳು ಮಾತ್ರ ಲಭ್ಯವಿದ್ದವು. ಆದರೆ ಅವರ ನಿರಂತರ ಶ್ರಮದ ಫಲವಾಗಿ 250ಕ್ಕೂ ಹೆಚ್ಚು ವಚನಕಾರರ ಅಮೂಲ್ಯ ಇತಿಹಾಸ ಜಗತ್ತಿಗೆ ಪರಿಚಯವಾಯಿ. ವಚನಗಳನ್ನು ಮುದ್ರಿಸಲು ಆಥಿರ್ಕ ಮುಗ್ಗಟ್ಟು ಎದುರಾದಾಗ, ಹಳಕಟ್ಟಿಯವರು ತಮ್ಮ ಸ್ವಂತ ಮನೆಯನ್ನೇ ಮಾರಿ ಹಿತಚಿಂತಕ ಮುದ್ರಣಾಲಯವನ್ನು ಆರಂಭಿಸಿದರು ಎಂದರು.
ಇದೆ ಸಂದರ್ಭದಲ್ಲಿ ಡಾ. ಫ. ಗು. ಹಳಕಟ್ಟಿ ಅವರ ಜನ್ಮದಿನದ ನಿಮಿತ್ಯ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ 2026 ಕುರಿತು ಪ್ರೌಢಶಾಲಾ ಮತ್ತು ಕಾಲೇಜುಗಳಲ್ಲಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾಣ ವಿತರಿಸಲಾಯಿತು.
ಜಿಲ್ಲಾಧಿಕಾರಿ ಸಿ. ಎನ್​. ಶ್ರೀಧರ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್​ ಕೆ. ಆರ್​, ಕನ್ನಡ ಮತ್ತು ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ, ಶಂಕರಣ್ಣ ಸಂಕಣ್ಣನವರ ಹಲವರು ಇದ್ದರು.