ಹೊಲ ಉಳಿಸಿ ಅಭಿಯಾನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಸಿ. ಎನ್​ ಶ್ರೀಧರ, ಚೇತನಾ ಪಾಟೀಲ, ಮಲ್ಲಯ್ಯ ಕೆ, ಎಂ. ವಿ. ಚಳಗೇರಿ, ಎಸ್​. ಎಸ್​. ಕಲ್ಮನಿ ಇತರರು ಇದ್ದರು.  
ರಾಜ್ಯ

ಹೊಲ ಉಳಿಸಿ ಅಭಿಯಾನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಚಾಲನೆ

ಮಣ್ಣಿನ ಆರೋಗ್ಯ ಕಾಪಾಡುವುದು ಇಂದಿನ ಅಗತ್ಯ: ಬಸವರಾಜ ಬೊಮ್ಮಾಯಿ
ವಿಜಯವಾಣಿ ಸುದ್ದಿಜಾಲ ಗದಗ
ಗದಗ: ರೈತರ ಕೃಷಿ ಭೂಮಿಯ ಸಂರಕ್ಷಣೆ, ಮಣ್ಣಿನ ಫಲವತ್ತತೆ ಕಾಪಾಡುವಿಕೆ ಹಾಗೂ ಸುಸ್ಥಿರ ಕೃಷಿ ಪದ್ಧತಿಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ್​ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ಹೊಲ ಉಳಿಸಿ ಅಭಿಯಾನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಮಂಗಳವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷಿ ದೇಶದ ಆಥಿರ್ಕತೆಯ ಬೆನ್ನೆಲುಬಾಗಿದೆ. ಕೃಷಿ ಭೂಮಿಯ ಸಂರಕ್ಷಣೆ ಹಾಗೂ ಮಣ್ಣಿನ ಆರೋಗ್ಯ ಕಾಪಾಡುವಿಕೆ ಇಂದಿನ ಅಗತ್ಯವಾಗಿದೆ. ರೈತರು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಮಣ್ಣಿನ ಪರೀಕ್ಷೆ, ನೀರಿನ ಸಮರ್ಪಕ ಬಳಕೆ ಹಾಗೂ ಸಾವಯವ ಮತ್ತು ನೈಸಗಿರ್ಕ ಕೃಷಿ ಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಹೊಲ ಬಚಾವೋ ಅಭಿಯಾನದ ಮೂಲಕ ರೈತರಿಗೆ ಕೃಷಿ ಭೂಮಿಯ ಸಂರಕ್ಷಣೆ, ಮಣ್ಣಿನ ಸವಕಳಿ ತಡೆ, ಬೆಳೆ ವೈವಿಧ್ಯತೆ, ನೀರಿನ ಸಂರಕ್ಷಣೆ ಹಾಗೂ ಪರಿಸರ ಸ್ನೇಹಿ ಕೃಷಿ ಪದ್ಧತಿಗಳ ಕುರಿತು ಅರಿವು ಮೂಡಿಸಲಾಗುವುದು. ಈ ಅಭಿಯಾನವು ರೈತರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ. ಜಿಲ್ಲಾಡಳಿತ, ಕೃಷಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಅಭಿಯಾನವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕಿದ್ದು, ರೈತ ಸಮುದಾಯವೂ ಸಕ್ರಿಯವಾಗಿ ಪಾಲ್ಗೋಳ್ಳುವ ಮೂಲಕ ಇದರ ಉದ್ದೇಶಗಳನ್ನು ಸಾಕಾರಗೊಳಿಸಬೇಕು ಎಂದು ಹೇಳಿದರು.
ಅಭಿಯಾನದ ಅಂಗವಾಗಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮಗಳು, ರೈತರ ಸಭೆಗಳು ಹಾಗೂ ಕೃಷಿ ತಂತ್ರಜ್ಞಾನ ಕುರಿತ ಮಾಹಿತಿ ಶಿಬಿರಗಳನ್ನು ಆಯೋಜಿಸಿ ರೈತರಿಗೆ ಅಗತ್ಯ ಮಾರ್ಗದರ್ಶನ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಿ. ಎನ್​ ಶ್ರೀಧರ, ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ಕೃಷಿ ಸಹಾಯಕ ನಿರ್ದೇಶಕ ಮಲ್ಲಯ್ಯ ಕೆ, ಜಿಪಂ ಎಂ. ವಿ. ಚಳಗೇರಿ, ಎಸ್​. ಎಸ್​. ಕಲ್ಮನಿ ಇತರರು ಇದ್ದರು.
.