ಗದಗ ತೋಂಟದಾರ್ಯ ಮಠದಲ್ಲಿ ಜರುಗಿದ ಜಾತ್ರಾ ಮಹೋತ್ಸವದಲ್ಲಿ ಬಸವರಾಜ ಹೊರಟ್ಟಿ ಅವರನ್ನು ಸನ್ಮಾನಿಸಲಾಯಿತು. 
ರಾಜ್ಯ

ಆಧುನಿಕ ಸವಾಲುಗಳನ್ನು ಎದುರಿಸಲು ಮಠಗಳ ಅವಶ್ಯಕತೆ ಇದೆ: ಬಸವರಾಜ ಬೊಮ್ಮಾಯಿ

ಶಿವಾನಂದ ಹಿರೇಮಠ
ಬಸವಾದಿ ಶರಣರು ಹೇಳಿದ ಮಾರ್ಗದದಲ್ಲಿ ಗಟ್ಟಿಯಾಗಿ ನಡೆದರೆ ಮಾತ್ರ ಯಶಸ್ಸು ಸಾಧ್ಯ: ಬಸವರಾಜ ಬೊಮ್ಮಾಯಿ
ವಿಜಯವಾಣಿ ಸುದ್ದಿಜಾಲ ಗದಗ
ಆಧುನಿಕ ಸವಾಲುಗಳನ್ನು ಎದುರಿಸಲು ಮಠಗಳ ಪ್ರಸ್ತುತತೆ, ಅವಶ್ಯಕತೆ ಇದೆ. ನಮ್ಮ ಭಕ್ತರು ಇದನ್ನು ಅರ್ಥ ಮಾಡಿಕೊಂಡರೆ ಸಮಾಜ ಪರಿವರ್ತನೆ ಮಾಡಲು ಸಾಧ್ಯ. ಸಮಾಜ ಪರಿವರ್ತನೆ ಅದರೆ ದೇಶ ಪರಿವರ್ತನೆ ಮಾಡಲು ಸಾಧ್ಯವಾಗುತ್ತದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಶುಕ್ರವಾರ ನಗರದ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವ ಧರ್ಮವೂ ಹಿಂಸೆ ಹೇಳಿಕೊಡುವುದಿಲ್ಲ. ಆದರೆ, ಹಿಂಸೆಯನ್ನು ಧರ್ಮದ ಹೆಸರಿನಲ್ಲಿ ಮಾಡಲಾಗುತ್ತಿದೆ. ಇಂದು ನಡೆಯುತ್ತಿರುವ ಯುದ್ಧಗಳು ಪೆಟ್ರೋಲಿಯಂ ವಸ್ತುಗಳ ಮಾಲೀಕತ್ವಕ್ಕಾಗಿ ಅಲ್ಲ. ಬದಲಾಗಿ ಧರ್ಮದ ಹೆಸರಿನಲ್ಲಿ ಹಿಂಸೆಯ ಕೃತ್ಯ ನಡೆಸಲಾಗುತ್ತಿದೆ. ಅತೀ ಜಾಣತನ ಸಮಾಜಕ್ಕೆ ಘಾತುಕ. ಮೂಲ ಧರ್ಮ ಪಾಲೀಸದೇ ತಮ್ಮದೇ ರೀತಿಯಲ್ಲಿ ಧರ್ಮದ ವ್ಯಾಖ್ಯಾನ ಮಾಡುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಜಗಜ್ಯೋತಿ ಬಸವಣ್ಣ ಇಂದಿಗೂ ಪ್ರಸ್ತುತ ಆಗಿದ್ದಾರೆ ಎಂದರು.
ಬಸವಾದಿ ಶರಣರ ಮಾರ್ಗದಲ್ಲಿ ನಾವು ಮುನ್ನಡೆದರೆ ಮಾತ್ರ ನಾಗರಿಕ ಸಮಾಜ ಸುಸಂಸತ ಆಗಿರಲು ಸಾಧ್ಯ. ವಚನಗಳಲ್ಲಿ ಎಲ್ಲವನ್ನು ವಚನಕಾರರು ತಿಳಿಸಿದ್ದಾರೆ. ಎಲ್ಲ ಪ್ರಶ್ನೆಗಳಿಗೂ ವಚನಗಳಲ್ಲಿ ಉತ್ತರ ಸಿಗುತ್ತದೆ. ಸದ್ಭಾವ, ಸತ್ಕಾರ್ಯಕ್ಕೆ ಮಠದ ಮಾರ್ಗದರ್ಶನ ಅಗತ್ಯವಿದೆ. ಆಧುನಿಕ ಸವಾಲುಗಳನ್ನು ಎದುರಿಸಲು ಮಠಮಾನ್ಯಗಳ ಪ್ರಸ್ತುತತೆ ಅತ್ಯಗತ್ಯ. ಸಮಾಜ ಪರಿವರ್ತನೆ ಆದರೆ ದೇಶವು ಅಭಿವೃದ್ಧಿ ಆಗಲು ಸಾಧ್ಯ ಎಂದರು.
ಕೆಲವರು ಮನುಷ್ಯರಾಗಿ, ಹಲವರು ದೇವ ಮಾನವರಾಗಿ ಸಾಯುತ್ತಾರೆ. ಕಾಮ, ಕ್ರೋಧ ಮದ ಮತ್ಸರಗಳ ಸಂಕೋಲೆಯಲ್ಲಿ ಇದ್ದವರು ಮನುಷ್ಯರಾಗಿ ಸಾಯುತ್ತಾರೆ. ಇದರಿಂದ ಹೊರಬಂದವರು ದೇವ ಮಾನವರಾಗುತ್ತಾರೆ. ಅಂತಹ ದೇವಮಾನವರಲ್ಲಿ ಸಿದ್ಧಲಿಂಗ ಶ್ರೀಗಳು ಒಬ್ಬರು. ಸಂತೋಷ, ಶಾಂತಿ ನೆಮ್ಮದಿ, ಮಾನವೀಯ ಗುಣಗಳು ಇರಬೇಕೆಂದರೆ ಬಸವಾದಿ ಶರಣರು ಹೇಳಿದ ಮಾರ್ಗದದಲ್ಲಿ ಗಟ್ಟಿಯಾಗಿ ನಡೆದರೆ ಮಾತ್ರ ಯಶಸ್ಸು ಸಾಧ್ಯ. ವಚನ ಅರಿತುಕೊಂಡವರಿಗೆ ಮನಶಾಂತಿ ಸದ್ಬಾವ ಸತ್ಕಾರ್ಯ ಮಾಡಲು ಸಾಧ್ಯವಿದೆ ಎಂದರು.
ಹೊರಟ್ಟಿ ಅಜಾತ ಶತ್ರು:
ಸಭಾಪತಿ ಬಸವರಾಜ ಹೊರಟ್ಟಿಯವರು ವಿಧಾನ ಪರಿಷತ್​ ಸದಸ್ಯರಾಗಿ 48 ವರ್ಷ ತುಂಬಿದೆ. ಅವರು ಐವತ್ತು ವರ್ಷ ಪೂರೈಸಬೇಕು. ಆರೋಗ್ಯ ಚನ್ನಾಗಿ ಇಟ್ಟುಕೊಂಡಿದ್ದಾರೆ. ಅವರು ತಾಯಿಯೇ ದೇವರೆಂದು ನಂಬಿದ್ದಾರೆ. ಗುರುಗಳ ಸೇವೆ ಪ್ರಾಮಾಣಿಕವಾಗಿ ಮಾಡಿದ್ದಾರೆ. ಅವರು ಶಿಕ್ಷಣ ಸಚಿವರಾಗಿ ಶಿಕ್ಷಕರ ವರ್ಗಾವಣೆ ನೀತಿ ಮಾಡಿದರು, 400 ಕ್ಕಿಂತ ಹೆಚ್ಚು ಹೈಸ್ಕೂಲ್​ ಹಾಗೂ 200 ಕ್ಕಿಂತ ಹೆಚ್ಚು ಪಿಯುಸಿ ಕಾಲೇಜು ಮಾಡಿದರು. ಜನರಿಗೆ ಬೇಕಾದ ಕೆಲಸವನ್ನು ಮಾಡುವ ಅವಕಾಶ ದೇವರು ಕರುಣಿಸಿದ್ದಾರೆ. ಈಗ ಸಭಾಪತಿ ಆಗಿದ್ದಾರೆ. ಅವರು ಯಾವಾಗಲೂ ಉತ್ತರ ಕರ್ನಾಟಕದ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಪರಿಷತ್​ ಸದಸ್ಯರಾಗಿ 48 ವರ್ಷ ಸೇವೆ ಮಾಡಿದ್ದಾರೆ. ಅವರು ಅತಿ ಹೆಚ್ಚು ವರ್ಷ ಪರಿಷತ್​ ಸದಸ್ಯರಾಗಿ ಸೇವೆ ಮಾಡಿದ್ದಾರೆ. ಅಜಾತ ಶತ್ರು, ಅವರಿಗೆ ಮಠದಿಂದ ಸನ್ಮಾನ ಆಗುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ತೋಂಟದಾರ್ಯ ಸಿದ್ದರಾಮ ಶ್ರೀಗಳು, ಸಭಾಪತಿ ಬಸವರಾಜ ಹೊರಟ್ಟಿ, ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರು, ಮಾಜಿ ಸಚಿವ ಎಸ್​.ಎಸ್​. ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಜಾತ್ರಾ ಮಹೋತ್ಸವ ಅಧ್ಯಕ್ಷ ವಿನಾಯಕ ಮಾನ್ವಿ, ಮಠದ ಆಡಳಿತಾಧಿಕಾರಿ ಎಸ್​. ಎಸ್​. ಪಟ್ಟಣಶೆಟ್ಟಿ ಇತರರು ಇದ್ದರು.