ತೋಂಟದಾರ್ಯ ಜಾತ್ರಾ ಮಹೋತ್ಸವ ಕುರಿತು ವಿನಾಯಕ ಮಾನ್ವಿ ಸುದ್ದಿಗೋಷ್ಟಿ ನಡೆಸಿದರು. ಶಿವಯ್ಯ ನಾಲ್ವತವಾಡಮಠ, ಸುಧಾ ಹುಚ್ಚಣ್ಣವರ, ಸುಭಾಷ ಚನ್ನಪ್ಪನವರ, ಚೇತನ ಅಂಗಡಿ, ಎಂ.ಜಿ. ಹೂಗಾರ, ಚಂದ್ರಶೇಖರ ರಾಜೂರ, ಎಸ್ .ವಿ. ಪವಾಡಿಗೌಡ್ರ, ಉಮೇಶಗೌಡ ಪಾಟೀಲ, ವೀರಣ್ಣ ಗಡಗಿ ಇತರರು ಇದ್ದರು 
ರಾಜ್ಯ

ಏ. 1ರಿಂದ ತೋಟದಾರ್ಯ ಜಾತ್ರಾ ಮಹೋತ್ಸವ

ಶಿವಾನಂದ ಹಿರೇಮಠ
ವಿಜಯವಾಣಿ ಸುದ್ದಿಜಾಲ ಗದಗ
2026ನೇ ಸಾಲಿನ ಶ್ರೀ ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಏಪ್ರಿಲ್ 1ರಿಂದ ಆರಂಭವಾಗಲಿದೆ ಎಂದು 2026ನೇ ಸಾಲಿನ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ವಿನಾಯಕ ಮಾನ್ವಿ ಹೇಳಿದರು.
ಬುಧವಾರ ತೋಂಟದಾರ್ಯ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರೆ ಅಂಗವಾಗಿ ಬಸವ ಮಹಾಂತ ಶ್ರೀಗಳಿಂದ ಪ್ರತಿನಿತ್ಯ ಸಂಜೆ ಬಸವಾದಿ ಶರಣರ ವಚನ ದರ್ಶನ ಪ್ರವಚನ, ಷಟಸ್ಥಲ ಧ್ವಜಾರೋಹಣ ನೆರವೇರಿಸಲಾಗಿದೆ. ಮಾರ್ಚ್ 29ರಂದು ಕಳಸಾರೋಹಣ ನೆರವೇರಲಿದೆ ಎಂದರು.
ಏಪ್ರಿಲ್ 1ರಂದು ಸಂಜೆ 6.30ಕ್ಕೆ ಜಾತ್ರೆ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಲಿದ್ದು, ಶಿವಮೊಗ್ಗ ಜಿಲ್ಲೆಯ ಆನಂದಪುರ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಎಸ್ .ವಿ. ಸಂಕನೂರ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಮುಂಡರಗಿ ತೋಂಟದಾರ್ಯ ಶಾಖಾ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜ, ಅಭಿನವ ಮೃತ್ಯುಂಜಯ ಸ್ವಾಮೀಜಿ, ಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ, ಬೈರನಟ್ಟಿಯ ಶಾಂತಲಿಂಗ ಸ್ವಾಮೀಜಿ, ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಬಸವಮಹಾಂತ ಸ್ವಾಮೀಜಿ ಉಪಸ್ಥಿತರಿರುವರು ಎಂದು ತಿಳಿಸಿದರು.
ಏಪ್ರಿಲ್ 2ರಂದು ಸಂಜೆ 4 ಗಂಟೆಗೆ ತೋಂಟದ ಸಿದ್ಧರಾಮ ಸ್ವಾಮೀಜಿ ಅವರು ಎಸ್.ಎಸ್. ಕಳಸಾಪುರಶೆಟ್ಟರ್ ಮನೆಯಿಂದ ಪಾದಯಾತ್ರೆ ಮೂಲಕ ಶ್ರೀಮಠಕ್ಕೆ ಆಗಮಿಸುವರು. ಸಂಜೆ 6.30ಕ್ಕೆ ಚಿತ್ತಾ ನಕ್ಷತ್ರದಲ್ಲಿ ಮಹಾರಥೋತ್ಸವ ಜರುಗಲಿದೆ. ಅದೇ ದಿನ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಐಎಎಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ಚಿಕ್ಕೋಡಿಯ ಕಿರಣ ಕಮತೆ, 2025ನೇ ಸಾಲಿನ ಇಕ್ವೇಟರ್ ಪ್ರಶಸ್ತಿ ಪಡೆದ ಬೀಬಿ ಫಾತಿಮಾ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷರಿಗೆ ಗೌರವ ಸನ್ಮಾನ ನಡೆಯಲಿದೆ. ರೋಣ ಶಾಸಕ ಜಿ.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಸಂಸದ ಐ.ಜಿ. ಸನದಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಜಿಲ್ಲಾ ಕದಳಿ ಮಹಿಳಾ ವೇದಿಕೆಯಿಂದ ವಚನ ನೃತ್ಯ, ಮೃತ್ಯುಂಜಯ ಹಿರೇಮಠ ಅವರಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.
ಏಪ್ರಿಲ್ 3ರಂದು ಸಂಜೆ 4 ಗಂಟೆಗೆ ಬಸವೇಶ್ವರ ನಗರದ ಕುಬಸದ ಬಂಧುಗಳ ಮನೆಯಿಂದ ಶ್ರೀಮಠದ ವರೆಗೆ ತೋಂಟದ ಸಿದ್ಧರಾಮ ಶ್ರೀಗಳ ಮೆರವಣಿಗೆ, ಸಂಜೆ 6 ಗಂಟೆಗೆ ಲಘು ರಥೋತ್ಸವ, ಸಂಜೆ 7.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಗೌರವ ಸನ್ಮಾನ ನಡೆಯಲಿದೆ. ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ, ಸಂಸದ ಬಸವರಾಜ ಬೊಮ್ಮಾಯಿ, ನರಗುಂದ ಶಾಸಕ ಸಿ.ಸಿ. ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಾಗರತ್ನಾ ಹಡಗಲಿ ಅವರಿಂದ ನೃತ್ಯ ರೂಪಕ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಏಪ್ರಿಲ್ 4ರಂದು ಸಂಜೆ 6.30ಕ್ಕೆ ಮಂಗಲೋತ್ಸವ ನಡೆಯಲಿದೆ. ರಾಷ್ಟ್ರಮಟ್ಟದ ವಿಕಸಿತ ಭಾರತ ಯುವ ಸಂಸತ್ ಮಹೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಮಾನ್ಯಾ ಶೆಟ್ಟಿ ಅವರಿಗೆ ಸನ್ಮಾನ, ಡಾ.ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಯಿಂದ ವಚನ ನಿರ್ವಚನ ಗ್ರಂಥ ಬಿಡುಗಡೆ ಹಾಗೂ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಜಾತ್ರೆ ಅಂಗವಾಗಿ ಈ ಬಾರಿ ಕಬಡ್ಡಿ ಪಂದ್ಯಾವಳಿ, ವ್ಯಸನಮುಕ್ತ ಸಮಾಜ ಜಾಗೃತಿಗಾಗಿ ಪಾದಯಾತ್ರೆ, ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಮಹಿಳೆಯರಿಂದ ವಚನ ಸಾಹಿತ್ಯ ಪುಸ್ತಕ ಪರಿಚಯ, ವಚನಗಾಯನ ಮತ್ತು ವಚನಕಾರ್ತಿಯರ ವೇಷಭೂಷಣ ಸ್ಪರ್ಧೆ, ಸಿರಿಧಾನ್ಯಗಳ ಅಡುಗೆ ಸ್ಪರ್ಧೆ, ಬಸವಬುತ್ತಿ ಸ್ವೀಕಾರ ನಡೆಯಲಿದೆ ಎಂದು ವಿನಾಯಕ ಮಾನ್ವಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಾತ್ರಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳಾದ ಶಿವಯ್ಯ ನಾಲ್ವತವಾಡಮಠ, ಸುಧಾ ಹುಚ್ಚಣ್ಣವರ, ಸುಭಾಷ ಚನ್ನಪ್ಪನವರ, ಚೇತನ ಅಂಗಡಿ, ಎಂ.ಜಿ. ಹೂಗಾರ, ಚಂದ್ರಶೇಖರ ರಾಜೂರ, ಎಸ್ .ವಿ. ಪವಾಡಿಗೌಡ್ರ, ಉಮೇಶಗೌಡ ಪಾಟೀಲ, ವೀರಣ್ಣ ಗಡಗಿ ಇತರರು ಇದ್ದರು.