ಗದಗ ನಗರದ ಡಂಬಳ ನಾಕಾ ಬಳಿ ಇರುವ ಈದ್ಗಾ ಮೈದಾನದಲ್ಲಿ ರಂಜಾನ್ ನಿಮಿತ್ಯ ಪ್ರಾರ್ಥನೆ ಸಲ್ಲಿಸಿದರು. ಸಚಿವ ಎಚ್.ಕೆ. ಪಾಟೀಲ ಇದ್ದರು
ಜಿಲ್ಲೆಯಾದ್ಯಂತ ಶನಿವಾರ ರಂಜಾನ್ ಹಬ್ಬ ಸಂಭ್ರಮದಿಂದ ಜರುಗಿತು. ಗದಗ -ಬೆಟಗೇರಿ ನಗರದಲ್ಲಿ ರಂಜಾನ್ ಮಾಸಾಂತ್ಯದ ದಿನವಾದ ಶನಿವಾರ ಮುಸ್ಲಿಂ ಬಂಧುಗಳು ಈದ್ ಉಲ್ ಫಿತರ್(ರಂಜಾನ) ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಒಂದು ತಿಂಗಳ ಕಾಲ ನಡೆಸಿಕೊಂಡು ಬಂದ ರೋಜಾ ವ್ರತವನ್ನು ಮುಕ್ತಾಯಗೊಳಿಸಿದ ಮುಸ್ಲಿಂ ಬಂಧುಗಳು ಬೆಳಗ್ಗೆ ಹೊಸ ಬಟ್ಟೆ ಧರಿಸಿ ಲು ಉಪಹಾರ ಸೇವಿಸಿ ನಗರದ ಈದ್ಗಾಗಳಲ್ಲಿ ನಮಾಝ್ (ಪ್ರಾರ್ಥನೆ) ಮಾಡಿದರು.
ನಗರದ ಡಂಬಳ ನಾಕಾ ಬಳಿ ಇರುವ ಈದ್ಗಾ ಮೈದಾನ, ಮುಳಗುಂದ ನಾಕಾ ಬಳಿ ಇರುವ ಈದ್ಗಾ ಮೈದಾನ, ಬೆಟಗೇರಿಯಲ್ಲಿ ರೈಲ್ವೆ ನಿಲ್ದಾಣದ ಬಳಿ ಇರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಂಧುಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿ ನಮಾಜ್ ಮಾಡಿದರು. ನಂತರ ಪರಸ್ಪರ ಆಲಿಂಗನ, ಹಸ್ತ ಲಾವ(ಮುಸಾಫಹತ್)ದ ಮೂಲಕ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ನಮಾಜ್ಗೆ ಬರುವಾಗ ಮುಸ್ಲಿಂ ಬಂಧುಗಳೆಲ್ಲರೂ ಒಟ್ಟುಗೂಡಿ ತಕ್ಬೀರ್ ಹೇಳುತ್ತ ಬಂದರು.
ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ:
ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ, ಪರಸ್ಪರ ಶುಭಾಶಯ ವಿನಿಮಯ ನಡೆಯಿತು. ಮಧ್ಯಾಹ್ನ ವಿಶೇಷ ಖಾದ್ಯವಾದ ಸುರಕುರಮಾ ಸವಿದು ಹಬ್ಬ ಆಚರಿಸಿದರು. ಮೌಲ್ವಿಗಳು ಶಾಂತಿ, ಸಮೃದ್ಧಿ, ಉತ್ತಮ ಮಳೆ ಹಾಗೂ ಬೆಳೆಗಾಗಿ ಬೇಡಿಕೊಂಡರು. ಬಡವರ ಮನೆಗಳಿಗೆ ತೆರಳಿದ ಜನರು ಬಟ್ಟೆ, ಹಣ ನೀಡಿ ಹಬ್ಬದ ಶುಭಾಶಯ ಕೋರಿದರು. ಪ್ರಾರ್ಥನೆ ನಂತರ ನಾನಾ ಧಮೀರ್ಯರಿಗೆ ಶುಭ ಕೋರಿದ ಮುಸ್ಲಿಂ ಸಮುದಾಯದವರು ಅಪ್ಪುಗೆಯ ಮೂಲಕ ಈದ್ ಮುಬಾರಕ್ ಎಂದರು.
ನೆರೆಹೊರೆಯರು ಹಾಗೂ ಸ್ನೇಹಿತರನ್ನು ಭೇಟಿ ಮಾಡಿ, ಹಬ್ಬದ ಶುಭ ಕೋರಿದರು. ಸಾಮಾನ್ಯವಾಗಿ ಹಬ್ಬದ ಶುಭ ಕೋರಲು ಪರಸ್ಪರ ಆಲಂಗಿಸಿಕೊಂಡರು. ಮನೆ ಮಂದಿಯಲ್ಲಿ ಒಟ್ಟಿಗೆ ಕುಳಿತು, ಹಬ್ಬಕ್ಕೆ ತಯಾರಿಸಿದ ಸುರುಕುಂಬ, ಬಿರಿಯಾನಿ ಸವಿದರು. ಹಬ್ಬದ ನಿಮಿತ್ಯ ಮುಸ್ಲಿಂ ಸಮಾಜದ ಕೆಲ ನಾಯಕರು ಹಬ್ಬದ ಖರ್ಚು- ವೆಚ್ಚಗಳಿಗಾಗಿ ಕೂಡಿಟ್ಟಿದ್ದ ಹಣದಲ್ಲಿ ಬಡವರಿಗೆ ಆಹಾರ ಸಾಮಗ್ರಿ ಹಾಗೂ ವೈದ್ಯಕಿಯ ಚಿಕಿತ್ಸೆಗಾಗಿ ಹಣಕಾಸಿನ ನೆರವು ನೀಡಿದರು.
ರಂಜಾನ್ ಹಬ್ಬದ ವಿಶೇಷವಾಗಿ ತರಹೇವಾರಿ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಹೀಗಾಗಿ ಇಲ್ಲಿನ ಜವಳಿ ಗಲ್ಲಿ, ಮಾಬುಸೂಬಾನ್ ಕಟ್ಟಿ, ಬೆಟಗೇರಿ ಭಾಗದ ಮಾಂಸ ಮಾರಾಟ ಅಂಗಡಿಗಳಲ್ಲಿ ಮಾಂಸ ಮಾರಾಟ ಜೋರಾಗಿತ್ತು. ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಚಿವ ಎಚ್.ಕೆ.ಪಾಟೀಲ ಭಾಗಿಯಾಗಿದರು.