ಬಿಸಿಯೂಟ ನೌಕರರ ಕರಾಳ ದಿನಾಚರಣೆ ಅಂಗವಾಗಿ ಶುಕ್ರವಾರ ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ಅಕ್ಷರ ದಾಸೋಹ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಬಾಗಲಕೋಟೆ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಗೈರುಹಾಜರಿ ತಡೆಯಲು ಮತ್ತು ಪೌಷ್ಟಿಕಾಂಶ ಹೆಚ್ಚಿಸಲು ಆರಂಭಿಸಲಾದ ಅಕ್ಷರ ದಾಸೋಹ (ಬಿಸಿಯೂಟ) ಯೋಜನೆಗೆ ೨೫ ವರ್ಷಗಳು ತುಂಬಿದ್ದು, ಇಂದಿಗೂ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ನೌಕರರ ಸ್ಥಿತಿ ಮಾತ್ರ ಶೋಚನೀಯವಾಗಿದೆ ಎಂದು ಬಿಸಿಯೂಟ ನೌಕರರು ಆಕ್ರೋಶ ವ್ಯಕ್ತಪಡಿಸಿದರು.
ನವನಗರದ ಜಿಲ್ಲಾಡಳಿತ ಭವನದ ಎದುರು ಶುಕ್ರವಾರ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿದ ಬಳಿಕ ಜಿಲ್ಲಾಽಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸುವ ವೇಳೆ ಮಾತನಾಡಿದರು.
ಜುಲೈ ೧೦ ಬಿಸಿಯೂಟ ನೌಕರರ ಕರಾಳ ದಿನಾಚರಣೆ ಅಂಗವಾಗಿ ಇಂದು ಒಂದು ದಿನದ ಮುಷ್ಕರ ಹಮ್ಮಿಕೊಳ್ಳಲಾಗಿದೆ. ೨೦೦೮ ರಿಂದಲೂ ಕೇಂದ್ರ ಸರ್ಕಾರ ಈ ಬಡ ಮಹಿಳೆಯರಿಗೆ ಸೂಕ್ತ ವೇತನ ಹೆಚ್ಚಳ ಮಾಡದೆ ಶೋಷಣೆ ಮಾಡುತ್ತಿದೆ ಹಾಗೂ ಖಾಸಗಿ ಸಂಸ್ಥೆಗಳಿಗೆ ಬಿಸಿಯೂಟ ಯೋಜನೆಯನ್ನು ಹಸ್ತಾಂತರಿಸುವ ಮೂಲಕ ಯೋಜನೆಯನ್ನು ಬಲಹೀನಗೊಳಿಸುವ ಕೆಲಸ ನಡೆದಿದೆ ಎಂದು ನೌಕರರು ಆರೋಪಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಬಿಸಿಯೂಟ ಕಾರ್ಯಕರ್ತೆಯರ ವೇತನವನ್ನು ೭ ಸಾವಿರ ರೂ.ಗೆ ಹೆಚ್ಚಿಸುವುದಾಗಿ ಭರವಸೆ ನೀಡಿದ್ದು, ಅದು ಈ ವರೆಗೂ ಅನುಷ್ಠಾನಕ್ಕೆ ಬಂದಿಲ್ಲ. ಕೂಡಲೇ ಸರ್ಕಾರ ವೇತನವನ್ನು ಹೆಚ್ಚಿಸಬೇಕು. ಹಾಗೆಯೇ ತಮ್ಮ ಹಕ್ಕುಗಳ ಉಳಿವಿಗಾಗಿ ದೇಶದ್ಯಂತ ಹಮ್ಮಿಕೊಂಡಿರುವ ಈ ಹೋರಾಟಕ್ಕೆ ಸರ್ಕಾರ ತಕ್ಷಣವೇ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ ಬಿಸಿಯೂಟ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿದ್ದಮ್ಮ ಕಲಗುಡಿ, ತೀರ್ಥಾ, ಕಸ್ತೂರಿ ಗೋನೂಜಿ, ಸುನಂದಾ ಮೋಪಗಾರ, ರೇಖಾ ಮ್ಯಾಗೇರಿ, ಜ್ಯೋತಿ ಖಾತೆ, ಶೈಲಾ ಅಂಗಡಿ ಅನೇಕರು ಭಾಗವಹಿಸಿದ್ದರು.