ಅಫಜಲಪುರ ತಾಲೂಕಿನ ಬಳ್ಳುಂಡಗಿ ಜಾಕ್​ವೆಲ್​ನಿಂದ ಆಳಂದನ ಅಮರ್ಜಾ ಅಣೆಕಟ್ಟಿಗೆ ನೀರು ತುಂಬಿಸುವ ಕಾಮಗಾರಿಯನ್ನು ಕೆಕೆಆರ್​ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್​ ಪರಿಶೀಲಿಸಿದರು.ಆರ್​.ಕೆ.ಪಾಟೀಲ್​, ಶಿವಕುಮಾರ ಸ್ವಾಮಿ, ಸಂತೋಷ ಸಜ್ಜನ ಇತರರಿದ್ದರು. 
ರಾಜ್ಯ

ಯೋಜನೆಯಿಂದ ಕೃಷಿ, ಆರ್ಥಿಕತೆಗೆ ವೇಗ

ಪ್ರಮುಖ ಮುಖ್ಯಾಂಶಗಳು

  • ಅರುಣಕುಮಾರ ಪಾಟೀಲ್​ ಹೇಳಿಕೆ
  • ಬಳ್ಳುಂಡಗಿ ಜಾಕ್​ವೆಲ್​ಗೆ ಭೇಟಿ
  • ಯೋಜನೆಯಿಂದ ಕೃಷಿ, ಆರ್ಥಿಕತೆಗೆ ವೇಗ
ಅಫಜಲಪುರ: ನೀರಾವರಿ ಯೋಜನೆ ವಿಸ್ತರಣೆಯಿಂದ ಕೃಷಿ ಚಟುವಟಿಕೆ ಹಾಗೂ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಕೆಕೆಆರ್​ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್​ ವಿಶ್ವಾಸ ವ್ಯಕ್ತಪಡಿಸಿದರು.
ಬಳ್ಳುಂಡಗಿ ಜಾಕ್​ವೆಲ್​ನಿಂದ ಆಳಂದ ತಾಲೂಕಿನ ಅಮರ್ಜಾ ಅಣೆಕಟ್ಟಿಗೆ ನೀರು ತುಂಬಿಸುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಸುಮಾರು 318 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಯೋಜನೆಯು ಅಫಜಲಪುರ ಪಟ್ಟಣ, ಬಳೂರಗಿ, ಬಡದಾಳ, ಚಿಂಚೋಳಿ, ರೇವೂರ (ಬಿ), ರೇವೂರ (ಕೆ), ದಿಕ್ಸಂಗಾ, ನಂದರಗಾ, ಅರ್ಜುಣಗಿ, ಭೈರಾಮಡಗಿ ಸೇರಿ ಒಟ್ಟು 13 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಯೋಜನೆಯಿಂದ ಅಂತರ್ಜಲ ವೃದ್ಧಿಯಾಗಿ ಬೋರ್​ವೇಲ್​, ಬಾವಿಗಳಿಗೆ ನೀರು ಬರುತ್ತದೆ ಎಂದರು.
ಸಾಂಪ್ರದಾಯಿಕ ಬೆಳೆಗಳ ಜತೆಗೆ ತೋಟಗಾರಿಕೆ, ವಾಣಿಜ್ಯ ಬೆಳೆಗಳ ಕೃಷಿಗೆ ವೇಗ ದೊರೆಯಲಿದೆ. ಚೆನ್ನೆ-ಸೂರತ್​ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ಪೈಪ್​ಲೈನ್​ಗೆ ಹಾನಿಯಾಗಿರುವುದರಿಂದ ವಿಳಂಬವಾಗಿದೆ. ತ್ವರಿತವಾಗಿ ಯೋಜನೆ ಪೂರ್ಣಗೊಳಿಸಿ ಅನ್ನದಾತರ ಹಿತ ಕಾಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಕಲಬುರಗಿ, ಬೀದರ್​, ಯಾದಗಿರ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಆರ್​.ಕೆ.ಪಾಟೀಲ್​, ನೀರಾವರಿ ನಿಗಮದ ಇಇ ಶಿವಕುಮಾರ ಸ್ವಾಮಿ, ಎಇಇ ಸಂತೋಷ ಸಜ್ಜನ್​ ಇತರರಿದ್ದರು.