Free vaccination for disease control 
ರಾಜ್ಯ

ರೋಗ ನಿಯಂತ್ರಣಕ್ಕೆ ಉಚಿತ ಲಸಿಕೆ vaccination

ತುಮಕೂರು ಡೆಸ್ಕ್
vaccination ಚಿಕ್ಕನಾಯಕನಹಳ್ಳಿ: ವರ್ಷದಲ್ಲಿ 2 ಬಾರಿ ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ಹಸುಗಳು ಮಾರಾಣಾಂತಿಕ ಕಾಯಿಲೆಗಳಿಗೆ ತುತ್ತಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಸಿ.ಬಿ. ಸುರೇಶ್​ಬಾಬು ಹೇಳಿದರು.
ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಪಶುಪಾಲನಾ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ಪೋಸ್ಟರ್​ ಮತ್ತು ಕರಪತ್ರ ಬಿಡುಗಡೆ ಮಾಡಿ ಮಾತನಾಡಿ, ಪಶುಪಾಲಕರಿಗೆ ವಾರ್ಷಿಕ 12 ಸಾವಿರದಿಂದ 20 ಸಾವಿರ ಕೋಟಿ ರೂ. ವರೆಗೆ ಆರ್ಥಿಕ ನಷ್ಟ ಉಂಟು ಮಾಡುತ್ತಿರುವ ಕಾಲುಬಾಯಿ ರೋಗ ನಿಮೂರ್ಲನೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ವರ್ಷಕ್ಕೆ 2 ಬಾರಿ ಉಚಿತವಾಗಿ ಸಮೂಹಿಕ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನ.3ರಿಂದ ಡಿ.2 ವರೆಗೆ ಲಸಿಕೆ ಹಾಕಲಾಗುತ್ತದೆ ಎಂದು ತಿಳಿಸಿದರು.
ಪಶುವೈದ್ಯಾಧಿಕಾರಿ ಡಾ.ವೈ.ಜಿ.ಕಾಂತರಾಜು ಮಾತನಾಡಿ, ರಾಷ್ಟ್ರೀಯ ರೋಗ ನಿಯಂತ್ರಣ ಕಾರ್ಯಕ್ರಮದಡಿ 8ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾಯಕ್ರಮವನ್ನು ರಾಜ್ಯಾದ್ಯಂತ ನ.3ರಿಂದ ಡಿ.2ರವರೆಗೆ ಹಮ್ಮಿಕೊಳ್ಳಲಾಗಿದ್ದು, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 35,761 ದನ, 7083 ಎಮ್ಮೆ ಮತ್ತು 209 ಹಂದಿ ಸೇರಿ ಒಟ್ಟು 43,053 ರಾಸುಗಳಿಗೆ ಲಸಿಕೆ ಹಾಕುವ ಗುರಿ ಹೊಂದಿದೆ. ಮನೆಮನೆಗೆ ತೆರಳಿ ಲಸಿಕೆ ಹಾಕಲು 61 ಜನ ಲಸಿಕೆದಾರರನ್ನು ಮತ್ತು 10 ಜನ ಪಶುವೈದ್ಯಾಧಿಕಾರಿಗಳನ್ನು ಮೇಲ್ವಿಚಾರಕರಾಗಿ ನಿಯೋಜಿಸಲಾಗಿದ್ದು, ಪಶುಪಾಲಕರು ರಾಸುಗಳಿಗೆ ಲಸಿಕೆ ಹಾಕಿಸುವಂತೆ ಮನವಿ ಮಾಡಿದರು.