ಸಾರಿಗೆ ನಿಗಮಗಳ ನಷ್ಟ ಸರಿದೂಗಿಸಲು ನವೆಂಬರ್ 5 ರಿಂದ ಬಸ್ ಟಿಕೆಟ್ ದರ ಏರಿಕೆಗೆ ಮುಂದಾಗಿರುವ ರಾಜ್ಯ ಸರ್ಕಾರ. 
ರಾಜ್ಯ

ಮಹಿಳೆಯರಿಗೆ ಫ್ರೀ, ಪುರುಷರ ಜೇಬಿಗೆ ಕತ್ತರಿ: ನ. 5 ರಿಂದಲೇ ಬಸ್​ ಟಿಕೆಟ್​ ದರ ದುಬಾರಿ: ಪ್ರತಿ ಹಂತಕ್ಕೆ ಕನಿಷ್ಟ 10 ರೂ. ಚಿಂತನೆ! Bus Ticket Price Hike

ಬೆಂಗಳೂರು: ಕರ್ನಾಟಕ ರಾಜ್ಯೋತ್ಸವದ ದಿನವೇ ಹಾಲು ಮತ್ತು ಮೊಸರಿನ ದರ ಏರಿಸುವ ಮೂಲಕ ರಾಜ್ಯದ ಜನರಿಗೆ ಶಾಕ್​ ನೀಡಿದ್ದ ರಾಜ್ಯ ಸರ್ಕಾರ ಈಗ, ಬಸ್​ ಟಿಕೆಟ್​ ದರವನ್ನು ಏರಿಕೆ ಮಾಡುವ ಮೂಲಕ ಇನ್ನೊಂದು ಚಾಟಿ ಏಟನ್ನು ನೀಡಲು ಮುಂದಾಗಿದೆ.

ಮಾಹಿತಿ ಪ್ರಕಾರ, ನವೆಂಬರ್​ 5 ರಿಂದ ಬಸ್​ ಟಿಕೆಟ್​ ದರ ಏರಿಕೆ ಕಾಣಲಿದೆ ಎಂದು ಹೇಳಲಾಗುತ್ತಿದ್ದು, ಸಾರಿಗೆ ಇಲಾಖೆ ಸುಮಾರು 2,000 ಕೋಟಿ ನಷ್ಟದಲ್ಲಿದೆ, ಹೀಗಾಗಿ ಟಿಕೆಟ್​ ಬೆಲೆ ಏರಿಕೆ ಅನಿವಾರ್ಯವೆಂದು ಸಾರಿಗೆ ಸಚಿವ ಭೈರತಿ ಸುರೇಶ್​ ತಿಳಿಸಿದ್ದಾರೆ.

ನ. 5 ಕ್ಕೆ ಏರಿಕೆ ಫಿಕ್ಸ್!

ಇನ್ನು ಮಹಿಳೆಯರಿಗೆ ಬಸ್​ ಟಿಕೆಟ್​ ಅನ್ನು ಉಚಿತ ಮಾಡಿರುವ ಸರ್ಕಾರ ಗಂಡಸರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆ ಎಂದು ಜನಾಕ್ರೋಶ ವ್ಯಕ್ತವಾಗುತ್ತಿದೆ. ಟಿಕೆಟ್​ ದರ ಏರಿಕೆ ಸಂಬಂಧ ನವೆಂಬರ್​ 4 ರಂದು ಮಹತ್ವದ ಸಭೆಯೊಂದನ್ನು ನಡೆಸಲಿದ್ದು, ನವೆಂಬರ್​ 5 ರಿಂದ ಕೆಎಸ್​ಆರ್​ಟಿಸಿ, ಬಿಂಎಂಟಿಸಿ ಸೇರಿದಂತೆ ಎಲ್ಲಾ ನಿಗಮದ ಬಸ್​​ ಟಿಕೆಟ್​ ದರ ಏರಿಕೆ ಕಾಣುವುದು ಬಹುತೇಕ ನಿಶ್ಚಿತವಾಗಿದೆ.

2,000 ಕೋಟಿ ನಷ್ಟದಲ್ಲಿದ್ದೇವೆ ಸ್ವಾಮಿ!

ಇನ್ನು ಬಸ್​ ಟಿಕೆಟ್​ ದರ ಏರಿಕೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಭೈರತಿ ಸುರೇಶ್​, ಸಾರಿಗೆ ಈಗಾಗಲೇ ಸುಮಾರು 9,000 ಕೋಟಿ ನಷ್ಟದಲ್ಲಿದೆ. ವಾರ್ಷಿಕ 2,000 ಕೋಟಿ ನಷ್ಟವಾಗುತ್ತಿದೆ. ಈ ಲಾಸ್​ ಅನ್ನು ಸರಿದೂಗಿಸಲು ಟಿಕೆಟ್​ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಸಾರಿಗೆ ಸಚಿವರು ಸಮಜಾಯಿಷಿ ನೀಡಿದ್ದಾರೆ.

ಪ್ರತಿ ಸ್ಟೇಜ್​ಗೆ ಕನಿಷ್ಟ 10. ರೂ ಏರಿಕೆ?

ಲಭ್ಯ ಮಾಹಿತಿ ಪ್ರಕಾರ, ಬಿಎಂಟಿಸಿ ನಿಗಮದಲ್ಲಿ, ಪ್ರತಿ ಸ್ಟೇಜ್​​ಗೆ ಕನಿಷ್ಟ 6 ರೂ. ಪಡೆಯಲಾಗುತ್ತದೆ. ಇದನ್ನು ಈಗ 10 ರೂ. ಗೆ ಏರಿಕೆ ಮಾಡಬಹುದು ಅಂದರೆ 4 ರೂ. ಏರಿಕೆ ಮಾಡಲಾಗುವ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ. ಇದರರ್ಥ ಒಮ್ಮೆ ಬಸ್​ ಏರಿದ ಮೇಲೆ ಪ್ರತಿ ಸ್ಟಾಪ್​ಗೆ 10 ರೂ. ಕನಿಷ್ಟವಾಗಲಿದೆ ಎನ್ನಬಹುದಾಗಿದೆ. 'ಟಿಕೆಟ್​ ದರವನ್ನು ರೌಂಡ್​ ಫಿಗರ್​ ಮಾಡಿರುವ ಕಾರಣ ಇನ್ಮುಂದೆ ಕಂಡೆಕ್ಟರ್​ ಜತೆ ಚೇಂಜ್​ಗೆ ಜಗಳ ಇರಲ್ಲ' ಇದೇ ಸರ್ಕಾರದ ನೈಜ ಉದ್ದೇಶ ಎಂದು ಸೋಷಿಯಲ್​ ಮೀಡಿಯಾದಲ್ಲಿ ಟ್ರೋಲ್​ ಮಾಡಲಾಗುತ್ತಿದೆ.

ಪೆಟ್ರೋಲ್​ ಬೆಲೆ ಏರಿಕೆಗೆ ಹೋರಾಟವಿಲ್ಲ!

ಇನ್ನೂ ರಾಜ್ಯ ಸರ್ಕಾರ ಬಸ್​ ಟಿಕೆಟ್​ ಬೆಲೆ ಏರಿಕೆ ಮಾಡುವುದಕ್ಕೆ ರಾಜ್ಯ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಮೊನ್ನೆ ಹಾಲು ಮತ್ತು ಮೊಸರಿನ ಬೆಲೆ ಹೆಚ್ಚು ಮಾಡಿದರು. ಈಗ ಬಸ್​ ಟಿಕೆಟ್​ ಹೆಚ್ಚಳ. ಹೀಗೆ ಮುಂದುವರಿದರೆ ನಾಳೆ ಉಸಿರಾಡುವ ಗಾಳಿಗೂ ಹಣ ಕೀಳುತ್ತಾರೆ. ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ.

ಇದಕ್ಕೆ, ತಿರುಗೇಟು ನೀಡಿರುವ ಸಾರಿಗೆ ಸಚಿವರು, ಕೇಂದ್ರ ಸರ್ಕಾರ 2025 ರಿಂದ ಇಲ್ಲಿವರೆಗೆ ಸುಮಾರು 4 ರಿಂದ 5 ಬಾರಿ ಪೆಟ್ರೋಲ್​ ಬೆಲೆಯನ್ನು ಏರಿಕೆ ಮಾಡಿದೆ. ಅದನ್ನು ಯಾವ ಬಿಜೆಪಿ ನಾಯಕರೂ ವಿರೋಧ ಮಾಡಲ್ಲ. ನಾವು ಸಾರಿಗೆ ಸಂಸ್ಥೆ ನಷ್ಟದಲ್ಲಿದೆ ಎಂಬ ಉದ್ದೇಶದಿಂದ ಮಾತ್ರ ಟಿಕೆಟ್​ ಬೆಲೆ ಏರಿಕೆ ಮಾಡಿದ್ದೆವೆಂದು ಭೈರತಿ ಸುರೇಶ್​ ಪ್ರತ್ಯುತ್ತರ ನೀಡಿದ್ದಾರೆ.