Free fodder and water supply for cattle fair
ಗೌರಿಬಿದನೂರು: ತಾಲೂಕಿನ ಶ್ರೀ ವಿದುರಾಶ್ವತ್ಥ ಕ್ಷೇತ್ರದಲ್ಲಿ ನಡೆಯುತ್ತಿರುವ ದನಗಳ ಜಾತ್ರೆಯಲ್ಲಿ ಭಾಗವಹಿಸುವ ಜಾನುವಾರುಗಳಿಗೆ ನವ ಕರ್ನಾಟಕ ಯುವ ಶಕ್ತಿ ವೇದಿಕೆಯಿಂದ ಮೇವು, ನೀರು ಪೂರೈಕೆ ಮಾಡಲಾಗುತ್ತಿದೆ.
ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ, ರೈತರ ಸಂಕಷ್ಟ ಅರಿತು ಉಚಿತ ಮೇವು-, ನೀರು ವಿತರಿಸಲು ಮುಂದಾಗಿರುವ ನವ ಕರ್ನಾಟಕ ಯುವ ಶಕ್ತಿ ವೇದಿಕೆಯ ಸಾಮಾಜಿಕ ಬದ್ಧತೆ ಶ್ಲಾಘನೀಯ. ಸರ್ಕಾರದ ಜತೆಗೆ ಸಂಘ-&ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಿದರೆ ಗ್ರಾಮೀಣ ಜನರಿಗೆ ಪ್ರಯೋಜನವಾಗುತ್ತದೆ ಎಂದರು.
ವೇದಿಕೆ ಅಧ್ಯಕ್ಷ ಹಳ್ಳಿ ರೈತ ಅಂಬರೀಶ್ ಮಾತನಾಡಿ, ವಿದುರಾಶ್ವತ್ಥ ಜಾತ್ರೆಯಲ್ಲಿ ಹಳ್ಳಿಕಾರ್, ಅಮೃತ್ ಮಹಲ್ ತಳಿ ಸೇರಿ ಸಾವಿರಾರು ಜಾನುವಾರುಗಳು ಭಾಗವಹಿಸುವ ನಿರೀಕ್ಷೆಯಿದೆ. ರೈತ ಸಮುದಾಯ, ಜಾನುವಾರುಗಳ ಯೋಗ ಕ್ಷೇಮವನ್ನು ದೃಷ್ಠಿಯಲ್ಲಿರಿಸಿಕೊಂಡು ಉಚಿತ ಮೇವು, ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.
ಕಾರ್ಯದರ್ಶಿ ಉದಯ ಆರಾಧ್ಯ ಮಾತನಾಡಿ, ರೈತರು ಹೊಲದಲ್ಲಿ ಹೋರಾಡುತ್ತಾರೆ. ಸೈನಿಕರು ಗಡಿಯಲ್ಲಿ ಹೋರಾಡುತ್ತಾರೆ. ದೇಶದ ನೆಲ ಮತ್ತು ಗಡಿ ಕಾಪಾಡುವ ಇವರಿಗೆ ನಮ್ಮಿಂದ ಗೌರವ ಸಮರ್ಪಣೆ ಮಾಡುವ ಸಲುವಾಗಿ ನಮ್ಮ ರೈತ ನಮ್ಮ ಸ್ಟಾರ್- ನಮ್ಮ ಸೈನಿಕ ನಮ್ಮಸ್ಟಾರ್ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ವನಕಲ್ಲು ಮಲ್ಲೇಶ್ವರ ಮಠದ ಶ್ರೀ ಬಸವರಮಾನಂದ ಸ್ವಾಮೀಜಿ, ಮುಖಂಡ ಅಂಬರೀಶ್, ಯುವ ವೇದಿಕೆ ಪದಾಧಿಕಾರಿಗಳು, ಕೆಎಚ್ಪಿ ಬಣದ ಮುಖಂಡರಾದ ಶ್ರೀನಿವಾಸ ಗೌಡ, ನಾಗೇಂದ್ರ, ಆರ್.ಆರ್.ರೆಡ್ಡಿ ಇದ್ದರು.