ಆಳಂದ ತಾಲೂಕಿನ ಜಿಡಗಾದಲ್ಲಿ ಶಿವಯೋಗಿ ಜ್ಞಾನ ಮಂದಿರದ 500 ಹಾಸಿಗೆಯುಳ್ಳ ಬಾಲಕರ ವಸತಿ ನಿಲಯವನ್ನು ಶ್ರೀ ಡಾ.ಮುರುಘರಾಜೇಂದ್ರ ಸ್ವಾಮಿಗಳು ಲೋಕಾರ್ಪಣೆಗೊಳಿಸಿದರು. ಶ್ರೀ ವೀರಮಹಾಂತ ಶಿವಾಚಾರ್ಯ, ಶ್ರೀ ರಾಜಶೇಖರ ಶೀವಯೋಗಿ, ಹರ್ಷ ಗುತ್ತೇದಾರ್, ಪ್ರಬುದ್ಧ ಪಾಟೀಲ್, ಶಿವಪುತ್ರ ಪಾಟೀಲ್ ಇತರರಿದ್ದರು.
- ಶ್ರೀ ಡಾ.ಮುರುರಾಜೇಂದ್ರ ಸ್ವಾಮಿಗಳು ಘೋಷಣೆ
- ಜಿಡಗಾದಲ್ಲಿ 500 ಹಾಸಿಗೆಯ ಹಾಸ್ಟೆಲ್ ಉದ್ಘಾಟನೆ
ಆಳಂದ: ಜಿಡಗಾ ಕ್ಷೇತ್ರ ನಡೆದಾಡುವ ಗುರು ಶ್ರೀ ಸಿದ್ಧರಾಮ ಶಿವಯೋಗಿಗಳ ಪುಣ್ಯಭೂಮಿಯಾಗಿದೆ. ಇಲ್ಲಿ ಉಚಿತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಪಾಲಕರು ಶ್ರೀಮಠಕ್ಕೆ ನಿರಂತರ ಆಗಮಿಸಿ ಪುಣ್ಯ ನೆಲದ ಅನುಭವ ಪಡೆಯುವುದು ನಿಜವಾದ ಪುಣ್ಯದ ಕಾರ್ಯವಾಗಿದೆ ಎಂದು ಜಿಡಗಾ, ಮುಗಳಖೋಡ ಮಠದ ಪೀಠಾಧಿಪತಿ ಶ್ರೀ ಡಾ.ಮುರುಘರಾಜೇಂದ್ರ ಸ್ವಾಮಿಗಳು ಅಭಿಪ್ರಾಯಪಟ್ಟರು.
ಜಿಡಗಾ ನವ ಕಲ್ಯಾಣ ಮಠದ ಆವರಣದ ಬ್ರಹ್ಮ ವೇದಿಕೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿವಯೋಗಿ ಜ್ಞಾನ ಮಂದಿರದ 500 ಹಾಸಿಗೆಯುಳ್ಳ ಬಾಲಕರ ವಸತಿನಿಲಯ ಲೋಕಾರ್ಪಣೆ ಹಾಗೂ ಮಕ್ಕಳಿಗೆ ವಿದ್ಯಾಭ್ಯಾಸದ ಕಿಟ್ ವಿತರಣೆ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಜಿಡಗಾದಲ್ಲಿ ಉಚಿತ ಶಿಕ್ಷಣ ಪ್ರಾರಂಭಿಸಿ ಎರಡು ವರ್ಷ ಕಳೆದಿವೆ. ಇನ್ನು ಮುಂದೆ ಪ್ರತಿ ವರ್ಷ 1,000 ಮಕ್ಕಳಿಗೆ ಪ್ರವೇಶ ಕಲ್ಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಒಟ್ಟು 10 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವಸತಿ ಹಾಗೂ ಸಂಪೂರ್ಣ ಶೈಕ್ಷಣಿಕ ಸೌಲಭ್ಯ ಒದಗಿಸುವ ಗುರಿಯಿದೆ. ಶ್ರೀಮಠದಲ್ಲಿ ಕಲಿತ ಮಕ್ಕಳು ಮುಂದೆ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ನನ್ನ ಜೀವನದಲ್ಲಿ ಪರಮಪೂಜ್ಯ ಲಿಂ. ಶಿವಯೋಗಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು ಕರುಣಿಸಿದ ಶ್ರೀಸಂಪತ್ತಿನ ಅನುಗ್ರಹವನ್ನು ಅನುಭವಿಸಿದ್ದೇನೆ. ಆದರೆ ಇನ್ನು ಮುಂದೆ ನನ್ನ ಜೀವನದ ನಿಜವಾದ ಸಂತೋಷ ಮತ್ತು ಆತ್ಮತೃಪ್ತಿ ಬಡ ಮಕ್ಕಳಿಗೆ ಶಿಕ್ಷಣ ನೀಡಿ ಅವರನ್ನು ದೇಶದ ಆಸ್ತಿಯನ್ನಾಗಿ ರೂಪಿಸುವುದರಲ್ಲಿದೆ. ಶಿಕ್ಷಣವೇ ಸಮಾಜ ಪರಿವರ್ತನೆಯ ಅತ್ಯಂತ ದೊಡ್ಡ ಶಕ್ತಿ. ಆದ್ದರಿಂದ ಶ್ರೀಮಠದ ಸಂಪತ್ತು ಸಮಾಜದ ಮಕ್ಕಳ ಭವಿಷ್ಯಕ್ಕಾಗಿ ಮೀಸಲಿಡಲಾಗಿದೆ ಎಂದು ಹೇಳಿದರು.
ಚಿನ್ಮಯಗಿರಿಯ ಶ್ರೀ ವೀರಮಹಾಂತ ಶಿವಾಚಾರ್ಯ ಮಾತನಾಡಿ, ತುಮಕೂರು ಸಿದ್ಧಗಂಗಾ ಮಠ ಹಾಗೂ ಕೊಪ್ಪಳದ ಗವಿಸಿದ್ಧೇಶ್ವರ ಮಠದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉಚಿತ ಶಿಕ್ಷಣ, ವಸತಿ ನಿಲಯ, ದಾಸೋಹ ನೀಡುತ್ತಿರುವ ಮಠಗಳಲ್ಲಿ ಜಿಡಗಾ ಮಠ ಪ್ರಮುಖವಾಗಿದೆ. ಶ್ರೀಮಠ ಭವಿಷ್ಯದಲ್ಲಿ ಹೆಮ್ಮರವಾಗಿ ಬೆಳೆಯುತ್ತದೆ. ಪಾಲಕರು ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ನೀಡಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್, ಪ್ರಬುದ್ಧ ಪಾಟೀಲ್, ಯೋಗಿರಾಜ ಶಾಸಿ ಖಾನಾಪುರ, ಅಮೂಲ್ಯ ಹಿರೇಮಠ ಮಾತನಾಡಿದರು.
ಶಹಾಬಾದ್ನ ಶ್ರೀ ರಾಜಶೇಖರ ಶಿವಯೋಗಿ, ಮಾತೋಶ್ರೀ ಸಿದ್ಧಮ್ಮ ತಾಯಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಿವಪುತ್ರಪ್ಪ ಪಾಟೀಲ್, ವೀರಶೈವ ಮಹಾಸಭಾ ತಾಲೂಕು ಅಧ್ಯ ಶರಣಬಸಪ್ಪ ಪಾಟೀಲ್, ಪ್ರಮುಖರಾದ ಸಂಗ್ರಾಮ ಬಿರಾದಾರ, ಶರಣಬಸಪ್ಪ ಪಾಟೀಲ್, ರೇವಣಸಿದ್ದಪ್ಪ ನಾಗೂರೆ, ಮುರಳೀಧರ ಏಕಲಾರಕರ್, ಶಂಕರರಾವ ದೇಶಮುಖ, ಮಲ್ಲಪ್ಪ ಹತ್ತರಕಿ, ಆನಂದ ಪಾಟೀಲ್ ಕೊರಳ್ಳಿ, ಶರಣಬಸಪ್ಪ ಭೂಸನೂರ, ಸಚಿನ್ ಗಣಾಚಾರಿ, ಸಿದ್ದು ಪಾಟೀಲ್, ಲಿಂಗರಾಜ ಪಾಟೀಲ್, ಚನ್ನವಿರಯ್ಯ ಸ್ವಾಮಿ, ಅಣ್ಣಾರಾವ ಕಲವಗಾ, ರಾಜಶೇಖರ ಮಲಶೆಟ್ಟಿ, ಲಿಂಗರಾಜ ಪಾಟೀಲ್, ಶ್ರೀಶೈಲ ಸುತಾರ ಮುನ್ನೊಳ್ಳಿ, ಡಾ.ಸಂಗಮೇಶ ಬಿರಾದಾರ, ರಾಜಶೇಖರ ಪಾಟೀಲ್, ಸಿದ್ದರಾಮ ಯಾದವಾಡ, ಬಸಯ್ಯ ಹಿರೇಮಠ ಇತರರಿದ್ದರು.
ಬಸವರಾಜ ಚೋಪಾಟೆ ನಿರೂಪಣೆ ಮಾಡಿದರು. ಆಸ್ತಾನ ಕಲಾಬಳಗದಿಂದ ಭಕ್ತಿಗಾಯನ ನಡೆಯಿತು.
"
ಮುಂದಿನ ವರ್ಷ 70 ಎಕರೆ ಪ್ರದೇಶದಲ್ಲಿ 10 ಸಾವಿರ ವಿದ್ಯಾರ್ಥಿಗಳು ನೆಲೆಸುವಂತೆ 100 ಕೋಟಿ ರೂ. ವೆಚ್ಚದಲ್ಲಿ ವಿನೂತನ ವಸತಿನಿಲಯ ನಿಮಾರ್ಣದ ಗುರಿ ಹೊಂದಲಾಗಿದೆ. ಅತ್ಯಾಧುನಿಕ ಶಾಲಾ ಕಟ್ಟಡ, ಸುಸಜ್ಜಿತ ವಿದ್ಯಾರ್ಥಿ ವಸತಿನಿಲಯ, ವಿಜ್ಞಾನ ಮತ್ತು ಕಂಪ್ಯೂಟರ್ ಪ್ರಯೋಗಾಲಯ, ಗ್ರಂಥಾಲಯ, ಕ್ರೀಡಾಂಗಣ, ಸಾಂಸತಿಕ ವೇದಿಕೆ ಸೇರಿ ರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆಗೆ ಅಗತ್ಯವಿರುವ ಎಲ್ಲ ಸೌಕರ್ಯ ಕಲ್ಪಿಸಲಾಗುವುದು.
— > ಶ್ರೀ ಡಾ.ಮುರುರಾಜೇಂದ್ರ ಸ್ವಾಮೀಜಿ, ಜಿಡಗಾ