ವಿಜಯವಾಣಿ ವಿದ್ಯೋತ್ಸವ ಎಜುಕೇಷನ್ ಎಕ್ಸ್ಪೋಗೆ ಸಚಿವ ರಾಮಲಿಂಗಾರೆಡ್ಡಿ ಶನಿವಾರ ಬೆಂಗಳೂರಿನಲ್ಲಿ ಚಾಲನೆ ನೀಡಿದರು. ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ, ನ್ಯಾಷನಲ್ ಕಾಲೇಜು ಆಫ್ ಎಜುಕೇಷನ್ ಸೊಸೈಟಿಯ ಕರ್ನಾಟಕದ ಅಧ್ಯಕ್ಷ ವಿ.ವೆಂಕಟಶಿವಾರೆಡ್ಡಿ ಮತ್ತಿತರರಿದ್ದರು.
ಬೆಂಗಳೂರು: ರಾಜ್ಯದಲ್ಲಿ ಜೂ.21ರಂದು ನಡೆಯಲಿರುವ ನೀಟ್-ಯುಜಿ ಮರು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು, ಹಾಲ್ ಟಿಕೆಟ್ ತೋರಿಸಿ ಉಚಿತವಾಗಿ ಅಂದು ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಸ ಬಹುದೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಘೋಷಿಸಿದ್ದಾರೆ. ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ, ಜಯನಗರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ 2 ದಿನಗಳ ‘ವಿದ್ಯೋತ್ಸವ ಎಜುಕೇಷನ್ ಎಕ್ಸ್ಪೋ’ಗೆ
ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ನೀಟ್-ಯುಜಿ ಮರು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆ ಯಾಗದಂತೆ ಸರ್ಕಾರಿ ಬಸ್ ವ್ಯವಸ್ಥೆ ಮಾಡಲಾಗುವುದು. ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ನೀಡಲಾಗುತ್ತಿದೆ. ಸಿಇಟಿ ಸಮಯದಲ್ಲೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು ಎಂದರು.
ಪತ್ರಿಕಾ ರಂಗದಲ್ಲಿ ವಿಜಯವಾಣಿ ಮೊದಲ ಸ್ಥಾನದಲ್ಲಿದೆ. ಅದೇರೀತಿ, ಸಾರಿಗೆ ಕ್ಷೇತ್ರದಲ್ಲೂ ವಿಆರ್ಎಲ್ ಸಮೂಹ ಸಂಸ್ಥೆಗಳು ನಂ.1 ಸ್ಥಾನದಲ್ಲಿದ್ದು, ದೇಶಾದ್ಯಂತ ಆ ಸಂಸ್ಥೆಯು ಸಾರಿಗೆ ಜಾಲ ಹೊಂದಿದೆ. ಇದರಲ್ಲಿ ಡಾ.ವಿಜಯ ಸಂಕೇಶ್ವರ ಅವರ ಶ್ರಮ ಅಪಾರವಾದದ್ದೆಂದು ಸಚಿವರು ಶ್ಲಾಘಿಸಿದರು. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ವಿಜಯವಾಣಿ ಪತ್ರಿಕೆ ಎಜುಕೇಷನ್ ಎಕ್ಸ್ಪೋ ಆಯೋಜಿಸಿದೆ. ಶೇ.90 ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಒಂದೇ ಸೂರಿನಡಿ ಸೇರಿವೆ. ಕೋರ್ಸ್, ಕಾಲೇಜು ಮತ್ತು ಶುಲ್ಕದ ಬಗ್ಗೆ ಉಪಯುಕ್ತ ಮಾಹಿತಿ ಸಿಗಲಿದೆ. ಇದನ್ನು ವಿದ್ಯಾರ್ಥಿಗಳು, ಪಾಲಕರು ಸದ್ಬಳಕೆ ಮಾಡಿಕೊಳ್ಳುವಂತಾಗಬೇಕೆಂದು ಸಚಿವರು ಸಲಹೆ ನೀಡಿದರು. ಇದಕ್ಕೂ ಮುನ್ನ ಸಚಿವರು ಎಕ್ಸ್ಪೋದಲ್ಲಿ ಪ್ರತಿಷ್ಠಾಪಿಸಿರುವ ಶಿಕ್ಷಣ ಸಂಸ್ಥೆಗಳ ಪ್ರಾತ್ಯಕ್ಷಿಕೆ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.
ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ನ್ಯಾಷನಲ್ ಕಾಲೇಜ್ ಆಫ್ ಎಜುಕೇಷನ್ ಸೊಸೈಟಿಯ (ಎನ್ಇಎಸ್) ಕರ್ನಾಟಕದ ಅಧ್ಯಕ್ಷ ವಿ. ವೆಂಕಟಶಿವಾರೆಡ್ಡಿ ಸೇರಿ ಮತ್ತಿತರರಿದ್ದರು.