U.T. Khader press meet  
ರಾಜ್ಯ

ಎಪಿಎಲ್ ಚೀಟಿದಾರರಿಗೂ ಉಚಿತ ರಕ್ತ : ಸಚಿವ ಯು.ಟಿ. ಖಾದರ್

ಪ್ರಮುಖ ಮುಖ್ಯಾಂಶಗಳು

  • *ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಈ ಸೇವೆ

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗುವ ಎಪಿಎಲ್ ಪಡಿತರರಿಗೂ ಉಚಿತವಾಗಿ ರಕ್ತ ಒದಗಿಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಸದ್ಯ ಬಿಪಿಎಲ್ ಪಡಿತರರಿಗೆ ಮಾತ್ರ ಉಚಿತ ರಕ್ತ ನೀಡಲಾಗುತ್ತಿದೆ. ಎಪಿಎಲ್ ಕಾರ್ಡ್‌ದಾರರಿಗೆ 1,110 ರೂ.ಗೆ ರಕ್ತ ಒದಗಿಸಲಾಗುತ್ತಿದೆ. ಆದರೆ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಎಪಿಎಲ್ ಕಾರ್ಡ್‌ದಾರರೂ ಆರ್ಥಿಕವಾಗಿ ಸಮಸ್ಯೆ ಹೊಂದಿದವರಾಗಿರುತ್ತಾರೆ. ಹಾಗಾಗಿ ಅವರಿಗೂ ಉಚಿತವಾಗಿ ರಕ್ತ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಚಿಕಿತ್ಸೆಗಾಗಿ ಇಂತಿಷ್ಟು ಯೂನಿಟ್ ರಕ್ತ ಮಾತ್ರ ಉಚಿತ ಎಂದು ನಿರ್ಬಂಧ ವಿಧಿಸಲು ಸಾಧ್ಯವಿಲ್ಲ. ವೈದ್ಯರು ಆ ರೋಗಿಗೆ ಎಷ್ಟು ಅಗತ್ಯವಿದೆ ಎಂದು ಹೇಳುತ್ತಾರೋ ಅಷ್ಟನ್ನು ಉಚಿತವಾಗಿ ನೀಡಲಾಗುವುದು ಎಂದರು.
ಖಾಸಗಿ ಆಸ್ಪತ್ರೆಯಲ್ಲಿ ದರ ನಿಗದಿಪಡಿಸಿದ್ದು, ಪೂರ್ಣ ಪ್ರಮಾಣದ ರಕ್ತಕ್ಕೆ 1,550 ರೂ. ಹಾಗೂ ಪ್ಲಾಸ್ಮಾ, ಪ್ಲೇಟ್‌ಲೆಟ್ ಸೇರಿ ಪ್ರತ್ಯೇಕಿಸಿದ ರಕ್ತಕ್ಕೆ 400 ರೂ. ನಿಗದಿಗೊಳಿಸಲಾಗಿದೆ. ಇದಕ್ಕಿಂತ ಹೆಚ್ಚಿನ ಹಣ ಪಡೆದಲ್ಲಿ ಜಿಲ್ಲಾ ವೈದ್ಯಾಧಿಕಾರಿಗಳಿಗೆ ದೂರು ನೀಡಬೇಕು ಎಂದರು.
ರೀಜನಲ್ ಬ್ಲಡ್ ಸೆಂಟರ್: ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ತಪ್ಪಿಸಿ ಸಕಾಲದಲ್ಲಿ ರಕ್ತ ಪೂರೈಸಲು ಬೆಂಗಳೂರಿನ ವಿಕ್ಟೋರಿಯಾ, ಮಂಗಳೂರಿನಲ್ಲಿ ವೆನ್ಲಾಕ್ ಆಸ್ಪತ್ರೆ, ಬೆಳಗಾವಿಯಲ್ಲಿ ಬಿಮ್ಸ್ ಹಾಗೂ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಭಾಗಗಳಲ್ಲಿ 20 ಕೋಟಿ ರೂ.ವೆಚ್ಚದಲ್ಲಿ ‘ರೀಜನಲ್ ಬ್ಲಡ್ ಸೆಂಟರ್ ಆ್ ಎಕ್ಸಲೆನ್ಸ್’ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ ಎಂದರು.