Free Annadasa Cottage in Hoskote 
ರಾಜ್ಯ

ಹೊಸಕೋಟೆಯಲ್ಲಿ ಉಚಿತ ಅನ್ನದಾಸೋಹ ಕುಟೀರ

ಹೊಸಕೋಟೆ:

ದಿ.ಮಾಜಿ ಶಾಸಕ ಬಿ.ಚನ್ನಬೈರಗೌಡ ಅವರ ಸ್ಮರಣಾರ್ಥ ಕರುನಾಡು ಪ್ರಜಾ ಸೇವಾ ಟ್ರಸ್ಟ್​ನಿಂದ ತಾಲೂಕು ಕಚೇರಿ ಆವರಣದಲ್ಲಿನೂತನವಾಗಿ ನಿರ್ಮಿಸಿರುವ ದಾಸೋಹ ಕುಟೀರಕ್ಕೆ ಚಾಲನೆ ನೀಡಲಾಯಿತು.

ಕುಟೀರ ಉದ್ಘಾಟಿಸಿದ ಟ್ರಸ್ಟ್​ನ ಸಂಸ್ಥಾಪಕ ಡಾ.ಎಚ್​.ಎಂ.ಸುಬ್ಬರಾಜು ಮಾತನಾಡಿ, ಶಾಸಕ ಶರತ್​ ಬಚ್ಚೇಗೌಡ ಹಾಗೂ ಮಾಜಿ ಸಂಸದ ಬಿ.ಎನ್​.ಬಚ್ಚೇಗೌಡ ಅವರ ಮಾರ್ಗದರ್ಶನದಲ್ಲಿ ನಿತ್ಯ ಉಚಿತ ಅನ್ನದಾಸೋಹ ಆರಂಭಿಸಲಾಗಿದ್ದು, ಮಧ್ಯಾಹ್ನ 1ರಿಂದ 2ರವರೆಗೆ ತಾಲೂಕು ಕಚೇರಿ ಆವರಣದಲ್ಲಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.
ಮಾಜಿ ಶಾಸಕ ಬಿ.ಚನ್ನಬೈರಗೌಡ ಅವರು ಹೊಸಕೋಟೆ ಕ್ಷೇತ್ರದ ಅಭಿವೃದ್ಧಿಗೆ ಹಲವು ಶಾಶ್ವತ ಕೊಡುಗೆ ನೀಡಿದ್ದರು. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಂಡಿದ್ದ ಅವರು, ಮಳೆಗಾಲದಲ್ಲಿ ಹಲವು ಪ್ರದೇಶಗಳಲ್ಲಿ ಉಂಟಾಗುತ್ತಿದ್ದ ಪ್ರವಾಹದ ಸಮಸ್ಯೆಗೆ ಪರಿಹಾರ ಕಲ್ಪಿಸಲು ದೊಡ್ಡ ಚರಂಡಿ, ರಾಜಕಾಲುವೆ, ಶಾಲೆಗಳ ಅಭಿವೃದ್ಧಿ ಹಾಗೂ ಕ್ರೀಡಾಂಗಣ ನಿಮಾರ್ಣ ಸೇರಿ ಹಲವು ಜನಪರ ಕಾರ್ಯ ಕೈಗೊಂಡಿದ್ದರು. ಹಾಗಾಗಿ ಅವರ ಜನಪರ ಸೇವೆ ಸ್ಮರಿಸುವ ಉದ್ದೇಶದಿಂದ ಅನ್ನದಾಸೋಹ ಆರಂಭಿಸಲಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಬಿ.ರಾಜಣ್ಣ ಮಾತನಾಡಿ, ತಾಲೂಕು ಕಚೇರಿಗೆ ಆಗಮಿಸುವ ರೈತರು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ರಾಜ್ಯ ಸರ್ಕಾರ ಅನ್ನಭಾಗ್ಯದ ಹೆಸರಿನಲ್ಲಿ ಅಕ್ಕಿ ವಿತರಿಸಿ ಹಸಿವುಮುಕ್ತ ಸಮಾಜ ನಿರ್ಮಿಸಲು ಸಂಕಲ್ಪ ತೊಟ್ಟಿದೆ ಎಂದರು.
ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಪ್ರ.ಕಾರ್ಯದರ್ಶಿ ಹರೀಶ್​ ಚಕ್ರವರ್ತಿ, ದಿ ಟೌನ್​ ಬ್ಯಾಂಕ್​ ಅಧ್ಯಕ್ಷ ಎಸ್​.ಮಂಜುನಾಥ, ಮುಖಂಡ ಸದಾನಂದ್​ ಇತರರು ಇದ್ದರು.