Fraud of crores of rupees by promising to double the money?
ಯಳಚಳ್ಳಿಯ ವ್ಯಕ್ತಿಯೊಬ್ಬ ಬುಡಕಟ್ಟು ಅಭಿವೃದ್ಧಿ ಪ್ರಾಜೆಕ್ಟ್ ಹೆಸರಿನಲ್ಲಿ ಹೂಡಿಕೆ ಹಣವನ್ನು ಕೆಲವೇ ತಿಂಗಳಲ್ಲಿ ಡಬಲ್ ಮಾಡುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿದ್ದಾನೆ ಎಂದು ಆರೋಪಿಸಿ 15ಕ್ಕೂ ಹೆಚ್ಚು ಮಂದಿ ಹೊಸಕೋಟೆ ಠಾಣೆ ಮೆಟ್ಟಿಲೇರಿದ್ದಾರೆ.
ಬುಡಕಟ್ಟು ಅಭಿವೃದ್ಧಿ ಇಲಾಖೆಯಿಂದ ಪ್ರಾಜೆಕ್ಟ್ ದೊರೆತಿದ್ದು, ಬಡವರಿಗೆ ನಿವೇಶನ ಹಾಗೂ ಮನೆಗಳನ್ನು ಕೊಡಿಸುವುದಾಗಿ ನಂಬಿಸಿದ್ದ ಆಸಾಮಿ, ನಮ್ಮ ಸದಸ್ಯರಿಗೆ 50ರಿಂದ 100 ಕೋಟಿ ರೂ.ವರೆಗೆ ನೀಡುತ್ತೇನೆ. ಒಂದು ತಿಂಗಳು ಜತೆಗಿದ್ದು, ನನ್ನನ್ನು ಬೆಂಬಲಿಸಿ ಎಂದು ಹೇಳಿ ನಮ್ಮಿಂದ ಹಣ ಪಡೆದು ಇದೀಗ ವಂಚಿಸಿದ್ದಾನೆ ಎಂದು ಹಣ ಕಳೆದುಕೊಂಡ ಶಂಕರ್, ಪರಮೇಶ್, ರಮೇಶ್, ರಘುನಂದನ್, ಪ್ರಮಿಳಾ ಹಾಗೂ ಇತರರು ಪೊಲೀಸರ ಬಳಿ ಅಲವತ್ತುಗೊಂಡಿದ್ದಾರೆ.
ಪೊಲೀಸರಿಗೆ ಮನವಿ: ಹಣ ವಾಪಸ್ ಕೇಳಿದರೆ ನಾನೊಬ್ಬ ದಲಿತ ವ್ಯಕ್ತಿಯಾಗಿದ್ದು, ನನ್ನ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಇನ್ನು ಕೆಲವರಿಗೆ ನಿಮ್ಮ ಹೆಸರಿನಲ್ಲಿ ಡೆತ್ನೋಟ್ ಬರೆದು ಆತ್ಮಹತ್ಯೆ ಮಾಡಿಕೊಳ್ಳುತೇನೆ. ಆಗ ನೀವುಗಳೇ ಜೈಲಿಗೆ ಹೋಗಬೇಕು ಎಂದು ಹೆದರಿಸುತ್ತಾನೆ.
ಈ ಬಗ್ಗೆ ಅಧಿಕಾರಿಗಳು ಸಂಪೂರ್ಣ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಪೊಲೀಸ್ ನಿರೀಕ್ಷಕ ಬಿ.ಟಿ.ಗೋವಿಂದ್ಗೆ ಸಂತ್ರಸ್ತರು ಮನವಿ ಸಲ್ಲಿಸಿದ್ದಾರೆ. ಪ್ರಕರಣದ ಬಗ್ಗೆ ಡಿವೈಎಸ್ಪಿ ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ನಿರೀಕ್ಷಕ ಬಿ.ಟಿ.ಗೋವಿಂದ್ ಭರವಸೆ ನೀಡಿದ್ದಾರೆ ಎನ್ನಲಾಗಿದೆ.