ಬೆಂಗಳೂರು: ಬಿಲ್ಡರ್‌ಗಳು ಹಾಗೂ ಹಣಕಾಸು ಸಂಸ್ಥೆಗಳ ಅಧಿಕಾರಿಗಳು ಶಾಮಿಲಾಗಿ ಮನೆ ಖರೀದಿದಾರರಿಗೆ ವಂಚನೆ ಮಾಡುತ್ತಿರುವ ಕುರಿತು ಕೇಂದ್ರ ತನಿಖಾ ದಳ (ಸಿಬಿಐ) ಗುರುವಾರ ಬೆಂಗಳೂರು, ಮುಂಬೈ ಹಾಗೂ ಪುಣೆ ಸೇರಿ 12 ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ವಿವಿಧ ಬಿಲ್ಡರ್‌ಗಳು ಹಾಗೂ ಹಣಕಾಸು ಸಂಸ್ಥೆಗಳ ಅಧಿಕಾರಿಗಳ ವಿರುದ್ಧ ಸಿಬಿಐ ಪ್ರತ್ಯೇಕ 5 ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದೆ. ಈ ಪೈಕಿ ಓಝೋನ್ ಗ್ರೂಪ್ ಹಾಗೂ ಅದರ ಸಂಬಂಧಿತ ಸಂಸ್ಥೆಗಳ ವಿರುದ್ಧ ಬೆಂಗಳೂರು ಮತ್ತು ಮುಂಬೈನಲ್ಲಿ ನಾಲ್ಕು ಪ್ರಕರಣಗಳಲ್ಲಿ ಗುತ್ತಿಗೆದಾರ ಕಂಪನಿ ಮತ್ತು ಹಣಕಾಸು ಸಂಸ್ಥೆಗಳ ಅಧಿಕಾರಿಗಳಿಂದ ಆಗುತ್ತಿರುವ ಅಕ್ರಮದ ಕುರಿತು ದಾಳಿ ನಡೆಸಿದೆ.
ಮನೆ ಖರೀದಿದಾರರಿಗೆ ವಂಚನೆ:
ಬಿಲ್ಡರ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಅಧಿಕಾರಿಗಳ ನಡುವಿನ ನಂಟಿನಿಂದಾಗಿ ಮನೆ ಖರೀದಿದಾರರಿಗೆ ವಂಚನೆ ಹಾಗೂ ಆರ್ಥಿಕ ನಷ್ಟ ಉಂಟಾಗುತ್ತಿದೆ. ಹಲವು ವರ್ಷಗಳಿಂದ ಸಮಸ್ಯೆ ಎದುರಿಸುತ್ತಿರುವ ಮನೆ ಖರೀದಿದಾರರು ಪರಿಹಾರ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದ ಮೇರೆಗೆ ಸಿಬಿಐ ಪ್ರಕರಣಗಳನ್ನು ದಾಖಲಿಸಿಕೊಂಡ ತನಿಖೆ ಮುಂದುವರಿಸಿತ್ತು. ವಸತಿಗೆ ಸಂಬಂಧಿಸಿದ ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ ಅಕ್ರಮ ಹಣ ವರ್ಗಾವಣೆ, ಹಣಕಾಸು ಅವ್ಯವಹಾರ ಹಾಗೂ ವಂಚನಾ ಚಟುವಟಿಕೆಗಳು ನಡೆದಿವೆಯೇ ಎಂಬುದನ್ನು ಪತ್ತೆಹಚ್ಚುವುದನ್ನು ಸಿಬಿಐ ಪತ್ತೆ ಮಾಡಿ, ವಂಚನೆಗೆ ಕುರಿತು ಪ್ರಮುಖ ದಾಖಲೆಗಳು, ಡಿಜಿಟಲ್ ಸಾಧನಗಳು ಹಾಗೂ ಇತರ ಸಾಕ್ಷ್ಯಾ ವಶಪಡಿಸಿಕೊಂಡಿದೆ.
55 ಪ್ರಕರಣ:
ದೇಶದ ವಿವಿಧ ಭಾಗಗಳ ಬಿಲ್ಡರ್‌ಗಳ ವಿರುದ್ಧ ಸಿಬಿಐ ಈ ಹಿಂದೆ 50 ಪ್ರಕರಣಗಳನ್ನು ದಾಖಲಿಸಿತ್ತು. ಇದೀಗ ಐದು ಹೊಸ ಪ್ರಕರಣಗಳೊಂದಿಗೆ ನ್ಯಾಯಾಲಯ ಆದೇಶದ ಮೇರೆಗೆ ಸಿಬಿಐ ದಾಖಲಿಸಿರುವ ಪ್ರಕರಣ ಸೇರಿ ಒಟ್ಟು 55 ಪ್ರಕರಣಗಳು ದಾಖಲಾಗಿವೆ. ಮನೆ ಖರೀದಿದಾರರಿಗೆ ವಂಚನೆ ಮಾಡುತ್ತಿರುವವರ ವಿರುದ್ಧ ತ್ವರಿತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ, ಕಾನೂನು ಉಲ್ಲಂಘನೆ ಮೂಲಕ ಸಾರ್ವಜನಿಕರನ್ನು ವಂಚಿಸಿರುವವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಿಬಿಐ ತಿಳಿಸಿದೆ.