ಬೆಂಗಳೂರು: ವಿದೇಶಿ ಬಂಡವಾಳ ಹೂಡಿಕೆದಾರರ (ಎಫ್‌ಪಿಐ) ನೋಂದಣಿ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ‘ಇಎಫ್‌ಪಿಐಆ್ಯಟ್‌ಸಿಟಿ’ ಸೌಲಭ್ಯವನ್ನು ಸಿಟಿ ಆರಂಭಿಸಿದೆ. ಈ ಹಿಂದೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದ ‘ಎಫ್‌ಪಿಐ’ ನೋಂದಣಿ ಪ್ರಕ್ರಿಯೆಯನ್ನು ಇದೀಗ 5 ಕೆಲಸದ ದಿನಗಳಿಗೆ ಇಳಿಸಲಾಗಿದೆ.
ಜಾಗತಿಕ ಬಂಡವಾಳ ಹೂಡಿಕೆದಾರರು ಭಾರತದಲ್ಲಿನ ಹೂಡಿಕೆಗೆ ನಿರಂತರವಾಗಿ ಹೆಚ್ಚಿನ ಆಸಕ್ತಿ ತೋರಿಸುತ್ತಿರುವ ಸಂದರ್ಭದಲ್ಲಿ ಉದ್ಯಮದಲ್ಲೇ ಮೊದಲ ಬಾರಿಗೆ ಪರಿಚಯಿಸಲಾದ ಸೌಲಭ್ಯಕ್ಕೆ ಸಿಟಿ ಚಾಲನೆ ನೀಡಿದೆ. ಅಂತಾರಾಷ್ಟ್ರೀಯ ಹೂಡಿಕೆದಾರರು ಭಾರತವನ್ನು ಕಾರ್ಯತಂತ್ರದ ಹೂಡಿಕೆ ತಾಣವಾಗಿ ಹೆಚ್ಚಾಗಿ ಪರಿಗಣಿಸುತ್ತಿರುವುದರಿಂದ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುವುದು ಉಪ್ರಕ್ರಮದ ಉದ್ದೇಶವಾಗಿದೆ.
ದೇಶದಲ್ಲಿರುವ ವಿದೇಶಿ ಹೂಡಿಕೆದಾರರು ತೊಡಗಿಸಿರುವ ಬಂಡವಾಳದ ಆಸ್ತಿಗಳ ಸುಮಾರು ಮೂರನೇ ಒಂದು ಭಾಗದ ಮೇಲ್ವಿಚಾರಣೆ ಹೊಂದಿರುವ ಸಿಟಿಯ ಭಾರತದಲ್ಲಿನ ಸೇವಾ ವಹಿವಾಟು, ಜಾಗತಿಕ ಹೂಡಿಕೆದಾರರ ಅಗತ್ಯವನ್ನು ದೊಡ್ಡ ಪ್ರಮಾಣದಲ್ಲಿ ಮತ್ತು ಪರಿಣಾಮಕಾರಿಯಾಗಿ ಪೂರೈಸಲು ಉತ್ತಮ ಸ್ಥಾನದಲ್ಲಿದೆ.
ಭಾರತದ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಧ್ಯಕ್ಷ ತುಹಿನ್ ಕಾಂತಾ ಪಾಂಡೆ ಮಾತನಾಡಿ, “ಭಾರತದಲ್ಲಿ ಎಫ್‌ಪಿಐಗಳ ನೋಂದಣಿ ಪ್ರಕ್ರಿಯೆಯನ್ನು ಐದು ದಿನಗಳಿಗೆ ಇಳಿಸುವ ತ್ವರಿತಗತಿಯ ನೋಂದಣಿ ವ್ಯವಸ್ಥೆಯನ್ನು ಪರಿಚಯಿಸಿರುವ ಸಿಟಿಯ ಉಪಕ್ರಮವನ್ನು ಶ್ಲಾಘಿಸುತ್ತೇವೆ. ತಂತ್ರಜ್ಞಾನದ ಬಳಕೆಯ ಮೂಲಕ ‘ಎಫ್‌ಪಿಐ’ಗಳು ಭಾರತದ ಬಂಡವಾಳ ಮಾರುಕಟ್ಟೆಯನ್ನು ತ್ವರಿತವಾಗಿ ಪ್ರವೇಶಿಸಲು ಅನುಕೂಲ ಕಲ್ಪಿಸುವ ‘ಸೆಬಿ’ಯ ಉದ್ದೇಶಕ್ಕೆ ಇದು ಸೂಕ್ತ ರೀತಿಯಲ್ಲಿ ಹೊಂದಿಕೆಯಾಗುತ್ತದೆ” ಎಂದು ಹೇಳಿದರು.