Four private buses caught fire
ಆನೇಕಲ್: ಹಳೇ ಚಂದಾಪುರ ಸಮೀಪದ ಖಾಸಗಿ ಲಾಜಿಸ್ಟಿಕ್ ಆವರಣದಲ್ಲಿ ಭಾನುವಾರ ಮಧ್ಯಾಹ್ನ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ನಾಲ್ಕು ಖಾಸಗಿ ಬಸ್ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ದಾರಿಹೋಕರು ಕಂಡಿದ್ದು
ಭಾನುವಾರ ಬೆಳಗ್ಗೆ ಎಂದಿನಂತೆ ನಿಲ್ದಾಣಕ್ಕೆ ಬಸ್ಗಳು ಬಂದಿದ್ದವು. ದಾರಿಹೋಕರ ಪ್ರಕಾರ ಬಳ್ಳಾರಿಗೆ ತೆರಳಬೇಕಿದ್ದ ಬಸ್ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತು. ಹಿಂಬದಿಯಿಂದ ಎರಡನೇ ಸೀಟಿನ ಬಳಿ ಹೊಗೆ ಬರುತ್ತಿದ್ದದ್ದನ್ನು ದಾರಿಹೋಕರು ಕಂಡು ಲಾಜಿಸ್ಟಿಕ್ ಸಿಬ್ಬಂದಿಗೆ ತಿಳಿಸಿದರು. ಬಸ್ ಚಾಲಕ ಮಂಜುನಾಥ್ ಹಾಗೂ ಲಾಜಿಸ್ಟಿಕ್ ಸಿಬ್ಬಂದಿ ಕೂಡಲೇ ಬಕೆಟ್ನಿಂದ ನೀರು ಸುರಿದು ಬೆಂಕಿ ಆರಿಸಲು ಪ್ರಯತ್ನಿಸಿದರು. ಆದರೆ ಕ್ಷರ್ಣಾರ್ಧದಲ್ಲಿ ಇಡೀ ಬಸ್ಸನ್ನು ಬೆಂಕಿ ಆವರಿಸಿಕೊಂಡಿತು. ಮಾಹಿತಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರದಲ್ಲಿ ಅಕ್ಕಪ್ಕಕ್ಕದ ಬಸ್ಗಳಿಗೂ ಬೆಂಕಿ ಹೊತ್ತಿಕೊಂಡಿತು. ಸದರಿ ನಿಲ್ದಾಣದಲ್ಲಿ 300ಕ್ಕೂ ಹೆಚ್ಚು ಬಸ್ಗಳು ನಿಲ್ಲುತ್ತವೆ. ಟೂರಿಸ್ಟ್ ಹಾಗೂ ಲಾಂಗ್ ಟ್ರಿಪ್ ಬಸ್ಗಳು ನಾಲ್ಕೈದು ತಿಂಗಳು ಇಲ್ಲೇ ನಿಲ್ಲುತ್ತವೆ. ಚಂದಾಪುರ ರೆಡ್ಡಿ ಎಂಬುವವರು ಜಾಗದ ಮಾಲೀಕರಾದರೂ ಮಹಾರಾಷ್ಟ್ರದವರು ಜಾಗದ ಉಸ್ತುವಾರಿ ವಹಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಲಾಜಿಸ್ಟಿಕ್ ಆವರಣದಲ್ಲಿ ಖಾಸಗಿ ಬಸ್ಗಳನ್ನು ನಿಲ್ಲಿಸಲಾಗಿತ್ತು. ಒಂದು ಬಸ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಅಕ್ಕಪಕ್ಕದ ಬಸ್ಗಳಿಗೂ ವ್ಯಾಪಿಸಿದೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ತುರ್ತು ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರಾದರೂ ಅಷ್ಟರಲ್ಲೇ ಬಸ್ಗಳು ಸುಟ್ಟುಕರಕಲಾಗಿವೆ.
ಕ್ಲೀನರ್ ಎಲ್ಲಿ?
ಬಸ್ಗೆ ಬೆಂಕಿ ಹೊತ್ತಿಕೊಳ್ಳುವ ಮೊದಲು ಕ್ಲೀನರ್ ಬಸ್ನಲ್ಲಿ ಮಲಗಿದ್ದ. ಆದರೆ ಬಸ್ ಹೊತ್ತಿ ಉರಿಯುತ್ತಿದ್ದರೂ ಕ್ಲೀನರ್ ಸುಳಿವು ಇಲ್ಲದಿರುವುದು ಶಂಕೆ ಮೂಡಿಸಿದೆ. ಆತನಿಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿದೆ. ಬಸ್ನಲ್ಲಿಯೇ ಸಾವನ್ನಪ್ಪಿರಬಹುದೆಂದು ಸೂರ್ಯನಗರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬಸ್ ಒಳಗೆ ಪರಿಶೀಲಿಸಿದ್ದಾರೆ. ಆದರೆ ಯಾವುದೇ ಕುರುಹು ಸಿಕ್ಕಿಲ್ಲ ಎಂದು ಇನ್ಸ್ಪೆಕ್ಟರ್ ಚಂದ್ರಪ್ಪ ವಿಜಯವಾಣಿಗೆ ತಿಳಿಸಿದ್ದಾರೆ.ಸೂರ್ಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ನಲ್ಲಿ ಕ್ಲೀನರ್ ಮೃತಪಟ್ಟಿಲ್ಲ. ಆತ ಅವಡದಿಂದ ತಪ್ಪಿಸಿಕೊಂಡು ಪರಾರಿಯಾಗಿರಬಹುದು ಎಂದು ಪೊಲೀಸ್ ಮೂಲಗಳು ಶಂಕಿಸಿವೆ. ಕ್ಲೀನರ್ ಪರಾರಿ ಆಗಲು ಕಾರಣ ಏನು? ಯಾರಾದರೂ ಬೆಂಕಿ ಹಚ್ಚಿದ್ದಾರೆಯೇ? ಅಥವಾ ಆಕಸ್ಮಿಕವಾಗಿ ಹೊತ್ತಿಕೊಂಡಿದೆಯೇ? ಎನ್ನುವ ಬಗ್ಗೆ ತನಿಖೆ ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ತನಿಖೆ ಕೈಗೊಂಡಿದ್ದಾರೆ.
ಬೆಂಕಿಗೆ ಆಹುತಿಯಾದ ನಾಲ್ಕೂ ಬಸ್ಗಳ ಪೈಕಿ ಒಂದು ಬೆಂಗಳೂರು, ಎರಡು ಪುದುಚೇರಿ ಮತ್ತೊಂದು ಬಳ್ಳಾರಿ ಜಿಲ್ಲೆಯದು ಎಂದು ತಿಳಿದು ಬಂದಿದೆ. ಬೆಂಕಿ ಕಾಣಿಸಿಕೊಂಡಾಗ ಬಸ್ನಲ್ಲಿ ಯಾರೂ ಇಲ್ಲದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಸ್ಗೆ ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಪೊಲೀಸರು ಮತ್ತು ಅಗ್ನಿಶಾಮಕ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.