Gym Trainer Murder Bengaluru 
ರಾಜ್ಯ

ಜಿಮ್ ಟ್ರೈನರ್ ಭೀಕರ ಕೊಲೆ ಕೇಸ್​​ನಲ್ಲಿ ನಾಲ್ವರು ಅರೆಸ್ಟ್; ಮದುವೆಯಾಗಿದ್ರೂ ಪ್ರಭಾವಿ ಬಿಲ್ಡರ್ ಪುತ್ರಿ ಜೊತೆಗಿನ ಪ್ರೀತಿಯೇ ಮುಳುವಾಯ್ತಾ?..Bengaluru

ಪ್ರಮುಖ ಮುಖ್ಯಾಂಶಗಳು

  • ಜಿಮ್ ಟ್ರೈನರ್ ವಿಜಯ ಕುಮಾರ್ ಕೊಲೆ ಕೇಸ್ ನಾಲ್ವರು ಅರೆಸ್ಟ್
  • ಜಿಮ್‌ಗೆ ಬರುತ್ತಿದ್ದ ಪ್ರಭಾವಿ ಬಿಲ್ಡರ್ ಒಬ್ಬರ ಪುತ್ರಿ ಜೊತೆಗಿನ ಸ್ನೇಹವೇ ಕಂಟಕ
  • ನಾನಾ ಆಯಾಮದಲ್ಲಿ ತನಿಖೆ ನಡೆಸಿ, ಯಶಸ್ವಿಯಾಗಿ ಪ್ರಕರಣ ಬೇಧಿಸಿದ ಪೊಲೀಸರು
ಬೆಂಗಳೂರು: 10 ದಿನದಿಂದ ಕಾಣೆಯಾಗಿದ್ದ ಜಿಮ್​ ಟ್ರೈನರ್​ವೊಬ್ಬರ ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಸಿಕ್ಕಿತ್ತು. ಸಾವಿನ ನಿಗೂಢತೆಯ ಬೆನ್ನು ಹತ್ತಿ, ತನಿಖೆ ನಡೆಸಿದ ಬನ್ನೇರುಘಟ್ಟ ಪೊಲೀಸರಿಗೆ ಸಿಕ್ಕ ಸುಳಿವು ಅಘಾತಕಾರಿಯಾದದ್ದು. ಅದೇನೆಂದರೆ, ಮದುವೆಯಾಗಿದ್ದರು ಪ್ರಭಾವಿ ಬಿಲ್ಡರ್​ ಮಗಳನ್ನು ಪ್ರೀತಿಸಿದ್ದೇ ಕೊಲೆಗೆ ಕಾರಣವಾಯ್ತಾ ಎನ್ನುವುದು.
ಹೌದು, ವಿಜಯ ಕುಮಾರ್ (32) ಕಳೆದ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದರು ಎನ್ನುವ ಬಗ್ಗೆ ಅವರ ಕುಟುಂಬಸ್ಥರು ದೂರು ದಾಖಲಿಸಿದ್ದರು. ಆನಂತರ, ಜಿಗಣಿ ಸಮೀಪದ ಕಾಳೇಶ್ವರಿ ಗ್ರಾಮದಲ್ಲಿ ಕೊಳೆತ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾದ ನಂತರ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಸದ್ಯ ಅನೇಕಲ್ ನಿವಾಸಿಗಳಾದ ಶ್ರೀರಾಮ, ಸುಮಿತ್, ವೆಂಕಟೇಶಯ್ಯ ಮತ್ತು ಬಾಬು ಎಂಬ ನಾಲ್ವರನ್ನು ಬಂಧಿಸಲಾಗಿದೆ.

ಏನಾಗಿತ್ತು?

ವಿಜಯ್​ ಕುಮಾರ್​ ಕೋಲಾರದ ಮುಳಬಾಗಿಲಿನವರು. ಆದರೆ ಬದುಕು ಕಟ್ಟಿಕೊಂಡಿದ್ದು ಬೆಂಗಳೂರಿನಲ್ಲಿ. ಇಲ್ಲಿನ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ವಾಸವಾಗಿದ್ದರು. ಅವರಿಗೆ ಮದುವೆಯಾಗಿದ್ದು, ಎರಡು ವರ್ಷಗಳಿಂದ ಕೌಟುಂಬಿಕ ಕಲಹ ಮತ್ತು ವರದಕ್ಷಿಣೆ ಕಿರುಕುಳದ ಪ್ರಕರಣದ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳಿಂದ ದೂರವಿದ್ದರು ಎನ್ನಲಾಗಿದೆ.

ಕೊಲೆಗೆ ಕಾರಣವೇನು?

ವಿಜಯ ಕುಮಾರ್ ಅವರ ಕುಟುಂಬಸ್ಥರು ಕೊಟ್ಟ ದೂರಿನ ಪ್ರಕಾರ, ವಿಜಯ್​​ ಜಿಮ್​ಗೆ ಉದ್ಯಮಿ ಕಾಮಿನೇನಿ ಪ್ರಸಾದ್​ರ ಮಗಳು ಬರುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಅಷ್ಟೇ ಅಲ್ಲದೆ, ಈ ಹಿಂದೆ ಇಬ್ಬರೂ ಜೀವನ ಕಟ್ಟಿಕೊಳ್ಳಲು ಪರಾರಿಯಾಗಿದ್ದರು. ನಂತರ ಪೊಲೀಸರು ಇವರನ್ನು ಪತ್ತೆ ಹಚ್ಚಿ ವಾಪಸ್ ಕರೆತಂದಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಬಿಲ್ಡರ್, ಆನೇಕಲ್ ಭಾಗದ ವಕೀಲನ ಮೂಲಕ ಕೋಟಿ ಕೋಟಿ ಹಣ ಕೊಟ್ಟು ಸುಪಾರಿ ಕೊಟ್ಟಿದ್ದಾನೆ. ವಿಜಯ ಕುಮಾರ್ ಅವರನ್ನು ಹತ್ಯೆ ಮಾಡಿಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಬಂಧಿತ ನಾಲ್ವರು ಆರೋಪಿಗಳನ್ನು ಸದ್ಯ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕೊಲೆಯ ಹಿಂದಿನ ನಿಖರವಾದ ಉದ್ದೇಶವನ್ನು ಪತ್ತೆಹಚ್ಚಲು ಬನ್ನೇರುಘಟ್ಟ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.