ರಾಜಾ ಲಖಮಗೌಡ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಮಹಾಂತೇಶ ಕವಟಗಿಮಠ, ಲಿಂಗೌಡ ದೇಸಾಯಿ, ಡಾ.ಜೆ.ಎಸ್.ಕವಳೇಕರ, ಡಾ.ಎಸ್.ಎ.ಜವಳಿ, ವಿ.ಸಿ.ಕಾಮಗೋಳ, ಎಂ.ಎಂ.ಕುಂಬಾರ ಇತರರಿದ್ದರು. 
ರಾಜ್ಯ

ಕೌಶಲ ಶಿಕ್ಷಣದಿಂದ ನವಭಾರತ ನಿರ್ಮಾಣ

ಬೆಳಗಾವಿ: ವಿದ್ಯಾರ್ಥಿಗಳು ಎಷ್ಟೇ ಸಾಧನೆ ಮಾಡಿದರೂ ಮಾನವೀಯ ಸಂಬಂಧ ಹಾಗೂ ತಂದೆ-ತಾಯಿಗಳ ತ್ಯಾಗ, ಪರಿಶ್ರಮ ಮರೆಯಬಾರದು. ಬ್ರಿಟಿಷರಿಂದ ಬಳುವಳಿಯಾಗಿ ಬಂದ ಕೇವಲ ನೌಕರಿ ಸೃಷ್ಟಿಸುವ ಶೈಕ್ಷಣಿಕ ಪದ್ಧತಿ ತ್ಯಜಿಸಿ, ನವಭಾರತ ನಿರ್ಮಾಣಕ್ಕೆ ಪೂರಕವಾಗುವ ಕೌಶಲಾಧಾರಿತ ಶಿಕ್ಷಣ ಪದ್ಧತಿ ಅಳವಡಿಸಿಕೊಳ್ಳಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಸಲಹೆ ನೀಡಿದರು.
ಕೆಎಲ್‌ಇ ಸಂಸ್ಥೆಯ ರಾಜಾ ಲಖಮಗೌಡ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳ ಸತ್ಕಾರ ಸಮಾರಂಭದಲ್ಲಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತು ವಿಶಾಲವಾಗಿದೆ.
ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್ ಕೋರ್ಸಿಗೆ ಮಾತ್ರ ಆದ್ಯತೆ ನೀಡದೆ, ಮೂಲ ಇಂಜಿನಿಯರಿಂಗ್ ಕೋರ್ಸ್‌ಗಳಾದ ಸಿವಿಲ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇತ್ಯಾದಿ ಕೋರ್ಸ್‌ಗಳಿಗೂ ಆದ್ಯತೆ ನೀಡಬೇಕು. ಮೂಲ
ಕೋರ್ಸ್‌ಗಳಲ್ಲಿ ಹೇರಳವಾಗಿ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ ಎಂದರು.
ಭಾರತದಲ್ಲಿ ಕೋವಿಡ್ ನಂತರ ವೈದ್ಯಕೀಯ ವಿಜ್ಞಾನದಲ್ಲಿ ಬಹಳಷ್ಟು ಸೇವಾವಕಾಶ ಸೃಷ್ಟಿಯಾಗಿವೆ. ಅಲೋಪಥಿ, ಆಯುರ್ವೇದ, ಹೋಮಿಯೊಪಥಿ, ಯುನಾನಿ, ನರ್ಸಿಂಗ್ ಮುಂತಾದ ಕೋರ್ಸ್‌ಗಳ ಮೂಲಕ ಸಮಾಜ ಕಾರ್ಯದ ಜತೆಗೆ ಅತ್ಯುತ್ತಮ ಬದುಕು ಕಟ್ಟಿಕೊಳ್ಳುವ ಅನೇಕ ಸುವರ್ಣಾವಕಾಶಗಳಿವೆ. ಯಾವುದೇ ಕೋರ್ಸ್ ಆಯ್ಕೆ ಮಾಡಿದರೂ ಭವಿಷ್ಯದಲ್ಲಿ ಸಂಬಳಕ್ಕೆ ಸೀಮಿತವಾಗದೆ, ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಅನ್ವೇಷಣೆ ಕೈಗೊಂಡು ದೇಶವನ್ನು ಮುಂಚೂಣಿ ಸ್ಥಾನಕ್ಕೆ ತರಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಲಿಂಗೌಡ ದೇಸಾಯಿ ಮಾತನಾಡಿ, ಕೃತಕ ಬುದ್ಧಿಮತ್ತೆ ಎಲ್ಲ ಕ್ಷೇತ್ರದಲ್ಲಿ ಬಲಾಢ್ಯವಾಗಿ ಬೆಳೆಯುತ್ತಿದೆ. ವಿವಿಧ ಕಂಪನಿಗಳಲ್ಲಿ ತಾಂತ್ರಿಕ ಕೌಶಲ ಪಡೆದು ನೈಪುಣ್ಯ ಪಡೆದರೆ ಪ್ರಗತಿಯತ್ತ ಸಾಗಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.
ಪ್ರಾಚಾರ್ಯೆ ಡಾ.ಜೆ.ಎಸ್.ಕವಳೇಕರ, ಉಪ ಪ್ರಾಚಾರ್ಯ ಡಾ.ಎಸ್.ಎ.ಜವಳಿ, ವಿ.ಸಿ.ಕಾಮಗೋಳ, ಎಂ.ಎಂ.ಕುಂಬಾರ, ಆರ್.ವಿ.ಗುಡಿ, ಎಸ್.ಬಿ.ಬನ್ನಿಮಟ್ಟಿ,
ಸ್ಟೆಫಿ ರೋಡ್ರಿಗ್ಸ್ ಇತರರಿದ್ದರು.