ಹಠಾತ್​ ಅಸ್ವಸ್ಥರಾದ ಅಮೇರಿಕನ್ ಮಹಿಳೆಯ ನೆರವಿಗೆ ಧಾವಿಸಿದ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ 
ರಾಜ್ಯ

Anjali Nimbalkar | ವಿಮಾನದಲ್ಲಿ ಮೂರ್ಛೆ ತಪ್ಪಿದ ಅಮೆರಿಕನ್​ ಪ್ರಜೆಯ ಪ್ರಾಣ ಉಳಿಸಿದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್​

ಬೆಂಗಳೂರು: ವಿಮಾನದಲ್ಲಿ ಪ್ರಯಾಣಿಸುವ ವೇಳೆ ಹಠಾತ್​ ಅಸ್ವಸ್ಥರಾದ ಅಮೇರಿಕನ್ ಮಹಿಳೆಯ ನೆರವಿಗೆ ಧಾವಿಸಿದ ಖಾನಾಪುರದ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್, ಪ್ರಥಮ ಚಿಕಿತ್ಸೆ ನೀಡಿ ಪ್ರಾಣ ಉಳಿಸಿರುವ ಘಟನೆ ಗೋವಾದಿಂದ ದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ನಡೆದಿದೆ.
ಗೋವಾದಿಂದ ವಿಮಾನ ಹೊರಟ ತಕ್ಷಣ, ಆ ಅಮೇರಿಕನ್ ಮಹಿಳೆ ನಡುಗಲು ಪ್ರಾರಂಭಿಸಿ, ತಕ್ಷಣವೇ ಮೂರ್ಛೆ ಹೋಗುತ್ತಾಳೆ. ಆಕೆಯ ನಾಡಿಮಿಡಿತವೂ ತಪ್ಪಿದ್ದರಿಂದ ಪರಿಸ್ಥಿತಿ ಬೇಗನೆ ಹದಗೆಟ್ಟಿದೆ ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಮಾಜಿ ಶಾಸಕಿ, ವೈದ್ಯರು ಆಗಿರುವ ಅಂಜಲಿ ನಿಂಬಾಳ್ಕರ್​, ಸಿಪಿಆರ್ ಮಾಡಿ ನೆರವಾಗಿದ್ದಾರೆ.
ಸುಮಾರು ಒಂದೂವರೆ ಗಂಟೆಗಳ ಕಾಲ ಆಕೆಯ ಪಕ್ಕದಲ್ಲಿಯೇ ಇದ್ದ ನಿಂಬಾಳ್ಕರ್​, ನಿರಂತರ ಆರೈಕೆ ಮತ್ತು ಮಹಿಳೆಯ ಸ್ಥಿತಿ ಸ್ಥಿರವಾಗುವವರೆಗೆ ಅಗತ್ಯ ಔಷಧಿಗಳನ್ನು ನೀಡಿದರು. ಪ್ರತಿಫಲದ ನಿರೀಕ್ಷೆಯಿಲ್ಲದೆ ಸಂಕಷ್ಟದಲ್ಲಿರುವ ಜನರಿಗೆ ಸೇವೆ ಸಲ್ಲಿಸುವುದು ತಮ್ಮ ವೃತ್ತಿಯ ಭಾಗ ಮಾತ್ರವಲ್ಲ, ಜವಾಬ್ದಾರಿಯುತ ನಾಗರಿಕರ ಕರ್ತವ್ಯವೂ ಆಗಿದೆ ಅವರು ಹೇಳಿಕೊಂಡಿದ್ದು, ವೈದ್ಯಕೀಯ ವೃತ್ತಿಗೆ ತಮ್ಮ ಬದ್ಧತೆಯು ಸಾರ್ವಜನಿಕ ಮತ್ತು ರಾಜಕೀಯ ಜೀವನದ ಜೊತೆಗೆ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ. ಡಾ. ಅಂಜಲಿ ನಿಂಬಾಳ್ಕರ್ ಕಾರ್ಯಕ್ಕೆ ಪೈಲಟ್, ವಿಮಾನ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಡಾ. ಅಂಜಲಿ ನಿಂಬಾಳ್ಕರ್​ ಹೇಳಿದ್ದೇನು..?

ಈ ವಿಷಯವನ್ನು ತಮ್ಮ ಫೇಸ್​ ಬುಕ್​ ಖಾತೆಯಲ್ಲಿ ಹಂಚಿಕೊಂಡಿರುವ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್​, ಇಂದು ಇಂಡಿಗೋ ವಿಮಾನದಲ್ಲಿ ಗೋವಾದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ವಿಮಾನದಲ್ಲಿ ಸಾವಿನ ಸಮೀಪ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾಗಿತ್ತು ಎಂದು ಹೇಳಿಕೊಂಡಿದ್ದಾರೆ. ವಿಮಾನ ಹೊರಟ ತಕ್ಷಣ, ನಾನು ನಿದ್ದೆ ಮಾಡುತ್ತಿದ್ದೆ, ಹಿಂದಿನಿಂದ ಯಾರೋ ಸಹಾಯಕ್ಕಾಗಿ ಎಂದು ಕಿರುಚಿದರು, ಆಕೆ ಪ್ರಜ್ಞೆ ತಪ್ಪಿದಳು. ಏನು ಮಾಡಬೇಕೆಂದು ತಿಳಿಯುವ ಮೊದಲೇ ನಾನು ನನ್ನ ಸೀಟಿನಿಂದ ಎದ್ದು ಅವಳ ನೆರವಿಗೆ ಧಾವಿಸಿದೆ, 34 ವರ್ಷದ ಹುಡುಗಿಯೊಬ್ಬಳು ಅದಾಗಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಳು, ನಾಡಿಮಿಡಿತ ದುರ್ಬಲವಾಗಿತ್ತು ಎಂದು ಬರೆದುಕೊಂಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಮೆಚ್ಚುಗೆ..

ಡಾ. ಅಂಜಲಿ ನಿಂಬಾಳ್ಕರ್​ ಮಾನವೀಯತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗೋವಾ-ಹೊಸದಿಲ್ಲಿ ನಡುವಿನ ವಿಮಾನ ಪ್ರಯಾಣದ ವೇಳೆ ಖಾನಾಪುರದ ಮಾಜಿ ಶಾಸಕಿಯಾದ ಡಾ.ಅಂಜಲಿ ನಿಂಬಾಳ್ಕರ್ ಅವರು ಅಮೇರಿಕಾದ ಮಹಿಳೆಯೊಬ್ಬರಿಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯತೆಯನ್ನು ಅರಿತು, ತಕ್ಷಣವೇ ಸಿಪಿಆರ್ ನೀಡಿ ಮಹಿಳೆಯ ಪ್ರಾಣ ಉಳಿಸಿದ ವಿಚಾರ ಕೇಳಿ ಹೆಮ್ಮೆಯೆನಿಸಿತು. ವೈದ್ಯ ವೃತ್ತಿ ತೊರೆದು ಸಕ್ರಿಯ ರಾಜಕೀಯದಲ್ಲಿದ್ದರೂ ಸಕಾಲದಲ್ಲಿ ರೋಗಿಯೊಬ್ಬರ ನೆರವಿಗೆ ಧಾವಿಸಿದ ಅಂಜಲಿಯವರ ಸೇವಾ ಮನೋಭಾವ ಮತ್ತು ಸಮಯಪ್ರಜ್ಞೆ ಅತ್ಯಂತ ಶ್ಲಾಘನೀಯ.
ಅಧಿಕಾರವಿರಲಿ, ಇಲ್ಲದಿರಲಿ ಜನಸೇವೆ ಎಂದು ಬಂದಾಗ ಪ್ರತಿಫಲಾಪೇಕ್ಷೆ ಇಲ್ಲದೆ ತನ್ನ ಕೈಲಾದ ಸಹಾಯಕ್ಕೆ ನಿಲ್ಲುವ ಅಂಜಲಿಯಂತವರು ಸಮಾಜಕ್ಕೆ ಮಾದರಿ. ನೂರುಕಾಲ ಅಂಜಲಿಯವರಿಗೆ ಆಯಸ್ಸು ಆರೋಗ್ಯ ನೀಡಿ, ಕಷ್ಟದಲ್ಲಿರುವ ಜೀವಗಳಿಗೆ ಅವರಿಂದ ಇನ್ನಷ್ಟು ನೆರವು ಸಿಗುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ(ಏಜೆನ್ಸೀಸ್​).