ಬೀದರ್: ಕಲ್ಯಾಣ ಕರ್ನಾಟಕದ ಹಿರಿಯ ರಾಜಕಾರಣಿ, ಮಾಜಿ ಸಚಿವ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಮಾಜಿ ಅಧ್ಯಕ್ಷ, ಶತಾಯುಷಿ, ಲೋಕನಾಯಕ ಡಾ. ಭೀಮಣ್ಣ ಖಂಡ್ರೆ (103) ಶುಕ್ರವಾರ ರಾತ್ರಿ 10.50 ಕ್ಕೆ ವಿಧಿವಶರಾದರು.
ಅನೇಕ ದಿನಗಳಿಂದ ವಯೋಸಹಜ ಕಾಯಿಲೆ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಬೀದರ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಭಾಲ್ಕಿಯ ಮನೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿತ್ತು, ಇಂದು ರಾತ್ರಿ ಅವರು ನಿಧನರಾದರು ಎಂದು ಅವರ ಪುತ್ರ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಮಾಜಿ ಸಚಿವ ಡಾ.ಭೀಮಣ್ಣ ಖಂಡ್ರೆ ರಾಜಕಾರಣಿಯಷ್ಟೆ ಅಲ್ಲದೇ, ದೇಶದ ಸ್ವಾತಂತ್ರ್ಯ, ಹೈದ್ರಾಬಾದ್ ಕರ್ನಾಟಕ ವಿಮೋಚನೆ, ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಸೈ ಎನಿಸಿಕೊಂಡಿದ್ದರು.
ರಾಜಕೀಯ ಪ್ರಯಾಣ
ಭೀಮಣ್ಣ ಖಂಡ್ರೆ 1953ರಲ್ಲಿ ಭಾಲ್ಕಿ ಪುರಸಭೆ ಅಧ್ಯಕ್ಷರಾಗಿ ಅನೇಕ ಕೆಲಸ ಮಾಡಿದರು. 1962, 1967, 1978, 1983ರಲ್ಲಿ ಭಾಲ್ಕಿ ವಿಧಾನಸಭೆ ಕ್ಷೇತ್ರದ ಶಾಸಕರಾದರು. 1988 ಹಾಗೂ 1994ರಲ್ಲಿ ವಿಧಾನ ಪರಿಷತ್ಗೆ ಆಯ್ಕೆಯಾದರು. 1992ರಿಂದ 1994ರವರೆಗೆ ವೀರಪ್ಪ ಮೊಯ್ಲಿ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದರು. ಜಯಪ್ರಕಾಶ ನಾರಾಯಣ ಉತ್ತರದ ಲೋಕನಾಯಕರಾದರೆ, ಭೀಮಣ್ಣ ಖಂಡ್ರೆ ದಕ್ಷಿಣದ ಲೋಕನಾಯಕ ಎಂಬ ಖ್ಯಾತಿ ಗಳಿಸಿದ್ದಾರೆ.
ಸಚಿವ ಈಶ್ವರ ಖಂಡ್ರೆ, ಬೀದರ್ ಸಂಸದ ಸಾಗರ್ ಖಂಡ್ರೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರ ಖಂಡ್ರೆ, ಇಬ್ಬರು ಪುತ್ರಿಯರು ಸೇರಿ ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.
ನಾಳೆ ಸಂಜೆ ಅಂತ್ಯಕ್ರಿಯೆ
ಶನಿವಾರ ಬೆಳಗ್ಗೆ ಭೀಮಣ್ಣ ಖಂಡ್ರೆ ಅವರ ಪಾರ್ಥಿವ ಶರೀರವನ್ನು ಭಾಲ್ಕಿಯ ಗಾಂಧಿ ಗಂಜ್ ನಲ್ಲಿರುವ ಅವರ ಮನೆಯ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು, ಸಂಜೆ ಭಾಲ್ಕಿಯ ಚಿಕಲ್ ಚಂದ ರಸ್ತೆಯಲ್ಲಿನ ಶಾಂತಿಧಾಮದಲ್ಲಿ ಭೀಮಣ್ಣ ಖಂಡ್ರೆ ಅವರ ಶ್ರೀಮತಿಯವರ ಸಮಾಧಿಯ ಪಕ್ಕದಲ್ಲೇ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನರವೇರಲಿವೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.