ಹೈಕೋರ್ಟ್‌ನಿಂದ ರಿಲೀಫ್​ ಸಿಕ್ಕ ಬೆನ್ನಲ್ಲೇ KPSC ಮಾಜಿ ಅಧ್ಯಕ್ಷರಿಗೆ ಮತ್ತೆ ಶಾಕ್ 
ರಾಜ್ಯ

ಹೈಕೋರ್ಟ್‌ನಿಂದ ರಿಲೀಫ್​ ಸಿಕ್ಕ ಬೆನ್ನಲ್ಲೇ KPSC ಮಾಜಿ ಅಧ್ಯಕ್ಷರಿಗೆ ಮತ್ತೆ ಶಾಕ್: ​ಅಮಾನತಿಗೆ ಕ್ಯಾಬಿನೆಟ್​ ಶಿಫಾರಸು

ಪ್ರಮುಖ ಮುಖ್ಯಾಂಶಗಳು

  • ಹೈಕೋರ್ಟ್‌ನಲ್ಲಿ ಸಿಕ್ಕಿದ್ದ ರಿಲೀಫ್ ಬೆನ್ನಲ್ಲೇ ಕಂಟಕ
  • KPSC ಮಾಜಿ ಅಧ್ಯಕ್ಷ ಸಾಹುಕಾರ್ ಅಮಾನತಿಗೆ ಮತ್ತೆ ಸಂಪುಟ ಶಿಫಾರಸು
  • ಮತ್ತೆ ಅಮಾನತಿಗೆ ರಾಜ್ಯಪಾಲರಿಗೆ ಶಿಫಾರಸು ಮಾಡಲು ಸರ್ಕಾರದ ತೀರ್ಮಾನ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರ ಅಮಾನತು ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿ ಕಾನೂನು ಗೆಲುವು ನೀಡಿದ ಬೆನ್ನಲ್ಲೇ ಇದೀಗ ಅವರ ಅಮಾನತಿಗೆ ಮತ್ತೆ ಶಿಫಾರಸು ಮಾಡಲು ರಾಜ್ಯ ಸರ್ಕಾರವು ನಿರ್ಧರಿಸಿದೆ. ಈ ಕುರಿತು ರಾಜ್ಯಪಾಲರಿಗೆ ಶಿಫಾರಸು ಕಳುಹಿಸಲು ಸಚಿವ ಸಂಪುಟ (ಕ್ಯಾಬಿನೆಟ್) ಸಭೆಯಲ್ಲಿ ಅಧಿಕೃತ ತೀರ್ಮಾನ ಕೈಗೊಳ್ಳಲಾಗಿದೆ.
ಇತ್ತೀಚೆಗಷ್ಟೇ ಸಾಹುಕಾರ್ ಅವರಿಗೆ ಹೈಕೋರ್ಟ್‌ನಿಂದ ದೊಡ್ಡ ಮಟ್ಟದ ಕಾನೂನು ಗೆಲುವು ಸಿಕ್ಕಿತು. ರಾಜ್ಯಪಾಲರು ಹೊರಡಿಸಿದ್ದ ಅಮಾನತು ಆದೇಶವನ್ನು ನ್ಯಾಯಾಲಯ ಅಧಿಕೃತವಾಗಿ ರದ್ದುಗೊಳಿಸಿತು. ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ  ಹಿನ್ನೆಲೆಯಲ್ಲಿ ಜುಲೈ 10ರಂದು ಅವರನ್ನು ಹುದ್ದೆಯಿಂದ ಕೆಳಗಿಳಿಸಿ ಆದೇಶ ಹೊರಡಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಾಹುಕಾರ್ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಆದರೀಗ, ಅವರ ಅಮಾನತಿಗೆ ರಾಜ್ಯ ಸರ್ಕಾರವೇ ರಾಜ್ಯಪಾಲರಿಗೆ ಶಿಫಾರಸು ಮಾಡಿರುವುದು ಸದ್ಯ ಸಂಕಷ್ಟ ತಪ್ಪಿದ್ದಲ್ಲ ಎಂಬುದನ್ನು ಒತ್ತಿ ಹೇಳಿದೆ. 

ಆರೋಪ ಹಾಗೂ ಸಂಪುಟದ ತೀರ್ಮಾನ

ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಶಿವಶಂಕರಪ್ಪ ಸಾಹುಕಾರ್ ಅವರ ವಿರುದ್ಧ ಸ್ವಜನ ಪಕ್ಷಪಾತ, ಅಧಿಕಾರ ದುರುಪಯೋಗ ಮತ್ತು ನೇಮಕಾತಿ ಪ್ರಕ್ರಿಯೆಗಳಲ್ಲಿ ನಡೆದಿದೆ ಎನ್ನಲಾದ ಭಾರಿ ಅಕ್ರಮಗಳು ಹಾಗೂ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು. ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಹೈಕೋರ್ಟ್​ ನಿರ್ದೇಶನ ಹಾಗೂ ನಿಯಮಾವಳಿಗಳ ಪ್ರಕಾರವೇ ಅವರ ವಿರುದ್ಧ ತನಿಖೆ ನಡೆಸಿ ಅಮಾನತುಗೊಳಿಸಲು ಪ್ರಕ್ರಿಯೆ ಆರಂಭಿಸಿದೆ.

ಸಚಿವ ಸಂಪುಟ ಸಭೆಯ ವಿವರ

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಸಾರ್ವಜನಿಕ ಸೇವಾ ಆಯೋಗದಂತಹ ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ಸಾಂವಿಧಾನಿಕ ಮೌಲ್ಯಗಳಿಗೆ ಧಕ್ಕೆ ತರಲಾಗಿದೆ ಎಂಬ ಆರೋಪಗಳ ಬೆನ್ನಲ್ಲೇ, ಶಿವಶಂಕರಪ್ಪ ಸಾಹುಕಾರ್ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಲು ಹಾಗೂ ಪ್ರಕರಣವನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲು ರಾಜ್ಯಪಾಲರಿಗೆ ಅನುಮೋದನೆಗಾಗಿ ಕಳುಹಿಸಿಕೊಡಲು ತೀರ್ಮಾನಿಸಲಾಗಿದೆ. 

ಇಡಿ ದಾಳಿ

ಇದೆಲ್ಲ ಒಂದು ಕಡೆಯಾದರೆ, ಹೈಕೋರ್ಟ್​ ತೀರ್ಪು ಬರುವ ಮುನ್ನ ಅಂದರೆ, ಮೊನ್ನೆಯಷ್ಟೇ ಶಿವಶಂಕರಪ್ಪ ಸಾಹುಕಾರ್ ಅವರಿಗೆ ಜಾರಿ ನಿರ್ದೇಶನಾಲಯ (ED) ಬಿಗ್​ ಶಾಕ್​ ನೀಡಿತು. ಅಕ್ರಮ ಹಣ ವರ್ಗಾವಣೆ ಮತ್ತು ಹವಾಲಾ ಶಂಕೆಯ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ರಾಜ್ಯಾದ್ಯಂತ ಏಕಕಾಲಕ್ಕೆ ಬೃಹತ್ ಕಾರ್ಯಾಚರಣೆ ನಡೆಸಿದ್ದು, ಶಿವಶಂಕರಪ್ಪ ಅವರ ಫ್ಲಾಟ್ ಸೇರಿದಂತೆ ಪ್ರಮುಖರ ಮನೆಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಜಾಲಾಡಿದರು. ಬೆಂಗಳೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ರಾಯಚೂರು, ಕಾರವಾರ, ಕಲಬುರಗಿ, ಬೆಳಗಾವಿ ಹಾಗೂ ಗುಜರಾತ್‌ನ ಅಹಮದಾಬಾದ್ ಸೇರಿ ಒಟ್ಟು 21 ವಿವಿಧ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮೆಗಾ ದಾಳಿ ನಡೆಸಿದರು.
ಸ್ವತಃ ಕೆಪಿಎಸ್‌ಸಿ ಕಚೇರಿ, ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಶಾಂತಾ ಹೊಸಮನಿ, ಹಗರಣದ ಮಧ್ಯವರ್ತಿಗಳು ಮತ್ತು ಡಿಜಿಟಲ್ ಮೌಲ್ಯಮಾಪನ ಸಂಸ್ಥೆಯಾದ ‘M/s ಎಡುಟೆಸ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’ ಕಚೇರಿ ಹಾಗೂ ಆಯ್ಕೆಯಾದ ಕೆಲ ಅಭ್ಯರ್ಥಿಗಳ ಮನೆಗಳ ಮೇಲೆ ಸಿಆರ್‌ಪಿಎಫ್ ಭದ್ರತೆಯೊಂದಿಗೆ ಇಡಿ ಅಧಿಕಾರಿಗಳು ಮುಗಿಬಿದ್ದರು.