ನಾಯಕತ್ವದ ಬದಲಾವಣೆ ಬಗ್ಗೆ ನಟಿ ರಮ್ಯಾ ಹೇಳಿಕೆ
- ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಜೋರು
- ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಕುರ್ಚಿಗಾಗಿ ಹಗ್ಗಜಗ್ಗಾಟ
- ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆಯ ಬಗ್ಗೆ ನಟಿ ರಮ್ಯಾ ಪ್ರತಿಕ್ರಿಯೆ
- ಯಾರೇ ಮುಖ್ಯಮಂತ್ರಿಯಾದರೂ ನನಗೆ ಓಕೆ ಎಂದು ಕಾಂಗ್ರೆಸ್ನ ಮಾಜಿ ಸಂಸದೆ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಜೋರಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ತೆರೆಮರೆಯಲ್ಲಿ ಕುರ್ಚಿಗಾಗಿ ಹಗ್ಗ-ಜಗ್ಗಾಟ ನಡೆಯುತ್ತಿದೆ.
ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ, ನಾನೇ ಮುಂದುವರಿಯುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರೆ, ಡಿಕೆಶಿ ಅವರು ಹೇಗಾದರೂ ಮಾಡಿ ಸಿಎಂ ಸ್ಥಾನಕ್ಕೇರಬೇಕೆಂದು ಕಸರತ್ತು ನಡೆಸುತ್ತಿದ್ದಾರೆ. ಇದರ ನಡುವೆ ಎರಡೂವರೆ ವರ್ಷದ ಒಪ್ಪಂದವನ್ನು ನೆನಪಿಸಿ, ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ ಎಂದು ಮಾರ್ಮಿಕವಾಗಿ ಟ್ವೀಟ್ ಮಾಡುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯರಿಗೆ ಡಿಕೆಶಿ ಟಾಂಗ್ ಕೊಟ್ಟಿದ್ದಾರೆ.
ಈಗಾಗಲೇ ಉಭಯ ನಾಯಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಹೈಕಮಾಂಡ್ ಮುಂದೆ ತಮ್ಮ ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಬಣಗಳು ಕೂಡ ಹೈಕಮಾಂಡ್ ಮುಂದೆ ತಮ್ಮ ನಾಯಕರ ಪರ ಬ್ಯಾಟ್ ಬೀಸುತ್ತಿದ್ದಾರೆ ಮತ್ತು ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರ ನಡುವೆ ಕಾಂಗ್ರೆಸ್ನ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಕೂಡ ಇದೇ ವಿಚಾರವಾಗಿ ಇಂದು ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿಂದು ಮಾಧ್ಯಮದವರ ಕೈಗೆ ಸಿಕ್ಕ ನಟಿ ರಮ್ಯಾ ಅವರಿಗೆ ರಾಜ್ಯದಲ್ಲಿನ ನಾಯಕತ್ವ ಬದಲಾವಣೆಯ ಬಗ್ಗೆ ಪ್ರಶ್ನೆಗಳು ಎದುರಾದವು. ಈ ವೇಳೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ ರಮ್ಯಾ, ಇಲ್ಲಿ ನಾನು ನಿರ್ಧಾರ ತೆಗೆದುಕೊಳ್ಳುವುದಲ್ಲ, ಹೈಕಮಾಂಡ್ ಮಟ್ಟದಲ್ಲಿ ರಾಹುಲ್ ಗಾಂಧಿಯವರು, ಮಲ್ಲಿಕಾರ್ಜುನ ಖರ್ಗೆಯವರು, ಸೋನಿಯಾ ಗಾಂಧಿಯವರು, ಕೆಸಿ ವೇಣುಗೋಪಾಲ್ ಅವರು ಮತ್ತು ರಣದೀಪ್ ಸುರ್ಜೇವಾಲ ಅವರು ಕೂತು, ಚರ್ಚಿಸಿ, ನಿರ್ಧಾರ ತೆಗೆದುಕೊಳ್ಳುತ್ತಾರೆ. ಹೀಗಾಗಿ, ಇದರಲ್ಲಿ ನನ್ನ ಹೇಳಿಕೆ ಏನಿಲ್ಲ, ಅವರು ಯಾರನ್ನೇ ಸಿಎಂ ಆಗಿ ಮಾಡಿದರೂ ನನಗೆ ಓಕೆ ಎಂದು ರಮ್ಯಾ ಹೇಳಿದರು.
ಹೈಕಮಾಂಡ್ ಮಟ್ಟದಲ್ಲಿ ಎರಡೂವರೆ ವರ್ಷ ಒಪ್ಪಂದದ ಬಗ್ಗೆ ಮೊದಲೇ ಮಾತುಕತೆಯಾಗಿದ್ದರ ಬಗ್ಗೆ ನಿಮಗೆ ತಿಳಿದಿತ್ತಾ ಎಂಬ ಪ್ರಶ್ನೆ ಉತ್ತರಿಸಿದ ರಮ್ಯಾ, ಅದರ ಬಗ್ಗೆ ನನಗೆ ಗೊತ್ತಿರಲಿಲ್ಲ ಎಂದರು. ಪಕ್ಷದಲ್ಲಿ ಗೊಂದಲ ಹೆಚ್ಚಾಗಿದೆಯಲ್ಲ ಏಕೆ ಅನ್ನೋ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ಅದೇ ರಾಜಕೀಯ ಅಲ್ವಾ ಎಂದು ನಕ್ಕರು. ನಮ್ಮಲ್ಲಿ ಎಲ್ಲ ನಾಯಕರು ಸಮರ್ಥರಿದ್ದಾರೆ. ಯಾರೇ ಮುಖ್ಯಮಂತ್ರಿಯಾದರೂ ನನಗೆ ಓಕೆ ಎನ್ನುವ ಮೂಲಕ ಯಾರ ಪರವೂ ಮಾತನಾಡದೇ ಜಾಣ್ಮೆಯಿಂದ ಉತ್ತರ ನೀಡಿದರು.