ಚಿಂಚೋಳಿ ತಾಲೂಕಿನ ಹೂಡದಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳು ಹಾಗೂ ಸಿಬ್ಬಂದಿ ಮನೆಯಿಂದಲೇ ಕುಡಿವ ನೀರು ತೆಗೆದುಕೊಂಡು ಬಂದಿರುವುದು. 
ರಾಜ್ಯ

ಮಾಜಿ ಸಿಎಂ ಹುಟ್ಟೂರಿನ ಸರ್ಕಾರಿ ಶಾಲೇಲಿಲ್ಲ ಸೌಕರ್ಯ

ಪ್ರಮುಖ ಮುಖ್ಯಾಂಶಗಳು

  • ಹೂಡದಳ್ಳಿ ಕಿರಿಯ ಪ್ರಾಥಮಿಕ ಸ್ಕೂಲ್​ನಲ್ಲಿ ಶೌಚಗೃಹ ಸಮಸ್ಯೆ
  • ನಿತ್ಯ ಮನೆಯಿಂದಲೇ ನೀರು ತರುವ ಮಕ್ಕಳು
ಚಿಂಚೋಳಿ: ಸರ್ಕಾರಿ ಶಾಲೆಗಳನ್ನು ಸ್ಮಾರ್ಟ್​ ಆಗಿಸಲು ಸರ್ಕಾರ ಕೋಟ್ಯಂತರ ರೂ. ಅನುದಾನ ಮೀಸಲಿಡುತ್ತಿದೆ. ಆದರೆ ಶಾಲೆಗಳಲ್ಲಿನ ಮಕ್ಕಳು ಕುಡಿವ ನೀರು, ಶೌಚಗೃಹ ಸೇರಿ ಕನಿಷ್ಠ ಮೂಲ ಸೌಕರ್ಯವಿಲ್ಲದೆ ಪರದಾಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಹೂಡದಳ್ಳಿ ಗ್ರಾಮದ ಸರ್ಕಾರಿ ಶಾಲೆಯಾಗಿದೆ.
ಹೂಡದಳ್ಳಿ ಗ್ರಾಮದಕ್ಕೆ ರಾಜ್ಯಕ್ಕೆ ವೀರೇಂದ್ರ ಪಾಟೀಲ್​ ಅವರಂತರ ಶ್ರೇಷ್ಠ ಮುಖ್ಯಮಂತ್ರಿಯನ್ನು ನೀಡಿದ ಗ್ರಾಮವಾಗಿವೆ. ಇಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿದ್ದು, 34 ಗಂಡು, 35 ಹೆಣ್ಣು ಸೇರಿ 69 ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಆದರೆ ಕುಡಿವ ನೀರಿನಲ್ಲಿ ಮಕ್ಕಳು ಸಮಸ್ಯೆ ಅನುಭವಿಸುವಂತಾಗಿದೆ. ಎಲ್ಲರೂ ನಿತ್ಯ ಪುಸ್ತಕದ ಚೀಲದೊಂದಿಗೆ, ಮನೆಯಿಂದಲೇ ನೀರಿನ್ನು ತರಬೇಕಾದ ಅನಿವಾರ್ಯತೆ ಎದುರಾಗಿದೆ. ಶಾಲೆಯಲ್ಲಿ ಕುಡಿವ ನೀರಿನ ಶಾಶ್ವತ ವ್ಯವಸ್ಥೆ ಇಲ್ಲದಿರುವುದರಿಂದ, ಮಕ್ಕಳಿಗೆ ಮನೆಯಿಂದ ತರುವ ಬಾಟಲಿ ನೀರೇ ಆಸರೆಯಾಗಿದೆ. ಅಲ್ಲದೆ ಮಧ್ಯಾಹ್ನದ ಬಿಸಿಯೂಟದ ನಂತರ ಕೈ ತೊಳೆಯಲು ಹಾಗೂ ತಟ್ಟೆ ತೊಳೆಯಲು ಜಲಕ್ಕಾಗಿ ಪರದಾಡುವ ಪರಸ್ಥಿತಿ ಇದೆ.
ಶಾಲೆಯಲ್ಲಿ ಶೌಚಗೃಹ ಕಟ್ಟಡವಿದ್ದರೂ ಸಮರ್ಪಕ ನಿರ್ವಹಣೆ ಹಾಳಾಗಿದೆ. ಎಲ್ಲೆಂದರಲ್ಲಿ ಗಿಡ-ಗಂಟಿ ಬೆಳೆದು ಬಳಕೆಗೆ ಬಾರದಂತಾಗಿದೆ. ಇದರಿಂದ ವಿದ್ಯಾರ್ಥಿನಿಯರು ತೀವ್ರ ಮುಜುಗರ ಅನುಭವಿಸುವಂತಾಗಿದೆ. ಶೌಚಕ್ಕಾಗಿ ಬಯಲು ಪ್ರದೇಶಗಳನ್ನೇ ಆಶ್ರಯಿಸಬೇಕಾದ ದುಸ್ಥಿತಿ ಇದೆ.
ಕಲಿಕಾ ಹಬ್ಬ ಹೆಸರಿನಲ್ಲಿ ಕೋಟ್ಯಂತರ ರೂ. ಖರ್ಚು ಮಾಡುವ ಸರ್ಕಾರ ಹೂಡದಳ್ಳಿ ಸರ್ಕಾರಿ ಶಾಲೆಗೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂಬುದು ಸ್ಥಳಿಯರ ಒತ್ತಾಯವಾಗಿದೆ.
"

ಹೂಡದಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಮಸ್ಯೆ ನನ್ನ ಗಮನಕ್ಕೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಮುಖ್ಯಗುರುಗಳಿಂದ ಲಿಖಿತವಾಗಿ ಮನವಿ ಸ್ವೀಕರಿಸಿ, ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದೆ. ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹಾರಕ್ಕೆ ಶ್ರಮಿಸುತ್ತೇನೆ.

— > ಚಂದ್ರಶೇಖರ ಪಾಟೀಲ್​, ಕ್ಷೇತ್ರ ಶಿಣಾಧಿಕಾರಿ, ಚಿಂಚೋಳಿ