CM Yediyurappa 
ರಾಜ್ಯ

ಮೇ 9ರಂದು ಮಾಜಿ ಸಿಎಂ ಯಡಿಯೂರಪ್ಪ ಅಭಿಮಾನೋತ್ಸವ: ಪೆಂಡಾಲ್ ನಿರ್ಮಾಣಕ್ಕೆ ಭೂಮಿ ಪೂಜೆ | 10 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಎಂದ ವಿಜಯೇಂದ್ರ

ಚಿತ್ರದುರ್ಗಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸುದೀರ್ಘ 50 ವರ್ಷಗಳ ರಾಜಕಾರಣದ ಅವಧಿಯಲ್ಲಿ ಏಳು ಬೀಳುಗಳಿಗೆ ಬೆನ್ನು ತೋರಿಸದೆ ಹಲವು ಸವಾಲು ಎದುರಿಸಿದರು. ದಕ್ಷಿಣದ ಹೆಬ್ಬಾಗಿಲು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದ ಛಲದಂಕಮಲ್ಲ ಅವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶ್ಲಾಘಿಸಿದರು.
ಚಿತ್ರದುರ್ಗದಲ್ಲಿ ಮೇ 9ರಂದು ಆಯೋಜಿಸಿರುವ ಬಿಎಸ್​ವೈ ಅಭಿಮಾನೋತ್ಸವಕ್ಕೆ ನಗರದ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಳಿ ಭಾನುವಾರ ಬೃಹತ್​ಪೆಂಡಾಲ್ ನಿರ್ವಣಕ್ಕೆ ಭೂಮಿ ಪೂಜೆ ಸಮಾರಂಭದಲ್ಲಿ ಮಾತನಾಡಿದರು. ಸಮಾಜಕ್ಕಾಗಿ ತಮ್ಮ ಜೀವನದ 50 ವರ್ಷ ಮೀಸಲಿಟ್ಟ ಏಕೈಕ ನಾಯಕ. ಛಲ, ಹೋರಾಟ ಹಾಗೂ ಜನಸೇವೆಗೆ ಮತ್ತೊಂದು ಹೆಸರೇ ಯಡಿಯೂರಪ್ಪ. ಅವರು ಎಂದಿಗೂ ಅಧಿಕಾರಕ್ಕಾಗಿ ಹೋರಾಟ ಮಾಡದೆ ಪ್ರಾಮಾಣಿಕವಾಗಿ ಬಡವರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ. ದಲಿತರು, ಬಡವರು, ರೈತರು, ಕೃಷಿ ಕಾರ್ವಿುಕರು ಮಹಿಳೆಯರು ಹಾಗೂ ನೊಂದವರ ಧ್ವನಿಯಾಗಿ ಕೆಲಸ ಮಾಡಿದ್ದಾರೆ ಎಂದರು.
ಪ್ರಭಾವ, ಹಣದಿಂದ ಅಧಿಕಾರ ಹಿಡಿಯಲಾಗದು. ಜನರ ಪ್ರೀತಿ-ವಿಶ್ವಾಸದಿಂದ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದ ಬಿಎಸ್​ವೈ, ರಾಜ್ಯದ ಮನೆ, ಮನಗಳಿಗೆ ಮುಟ್ಟುವ ಮೂಲಕ ಬಿಜೆಪಿ ಬಡ ಜನರ ಪಕ್ಷವೆಂದು ಸಾಬೀತು ಮಾಡಿದ್ದಾರೆ. ಅವರ ಈ ಹೋರಾಟ, ರಾಜಕೀಯ ತಪಸ್ಸು ನವ ಪೀಳಿಗೆಗೆ ಪ್ರೇರಣೆ ಆಗಬೇಕು. ನುಡಿದಂತೆ ನಡೆಯುವ ಯಡಿಯೂರಪ್ಪರ ರಾಜಕೀಯ ಹೆಜ್ಜೆಗಳನ್ನು ಸ್ಮರಿಸಿ ಸಂಭ್ರಮಿಸುವ ಸಮಾರಂಭವನ್ನು ಗಂಡುಮೆಟ್ಟಿದ ನಾಡು ಚಿತ್ರದುರ್ಗದಲ್ಲಿ ಆಯೋಜಿಸುತ್ತಿರುವುದು ರಾಜ್ಯದ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ ಎಂದರು.
ಸಮಾರಂಭಕ್ಕೆ ನಾಡಿನ ಹರ-ಗುರು ಚರಮೂರ್ತಿಗಳು, ಮಠಾಧೀಶರು, ಧಾರ್ವಿುಕ ಗುರುಗಳನ್ನು ಆಹ್ವಾನಿಸಲಾಗುತ್ತಿದೆ. ದೂರದ ಜಿಲ್ಲೆಗಳಿಂದ ಬರುವಂಥವರ ಅನುಕೂಲಕ್ಕಾಗಿ ಮಧ್ಯಾಹ್ನ 2.30ಕ್ಕೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ. 3 ಗಂಟೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗಮಿಸಲಿದ್ದಾರೆ. 10 ಲಕ್ಷಕ್ಕೂ ಹೆಚ್ಚು ಜನರು ಸಮಾರಂಭಕ್ಕೆ ಆಗಮಿಸಲಿದ್ದಾರೆ. 1.50 ಲಕ್ಷ ಜನರು ಏಕಕಾಲಕ್ಕೆ ಕುಳಿತು ಊಟ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ. ಬಿಸಿಲಿನ ಕಾರಣಕ್ಕೆ ಅಲ್ಲಲ್ಲಿ ಟೆಂಟ್​ಗಳನ್ನು ನಿರ್ವಿುಸಲಾಗುತ್ತದೆ ಎಂದರು.
ಸಮಾರಂಭದ ಮುನ್ನಾ ದಿನ ಮೇ 8 ರಂದು ಸಂಜೆ 5 ಕ್ಕೆ ಯಡಿಯೂರಪ್ಪ ಅವರು ಚಿತ್ರದುರ್ಗಕ್ಕೆ ಪುರ ಪ್ರವೇಶ ಮಾಡಲಿದ್ದಾರೆ. ಅಂದು ಇಡೀ ನಗರ ಅಲಕೃಂತಗೊಂಡಿರುತ್ತದೆ. ಮೆರವಣಿಗೆಯಲ್ಲಿ ನಾನಾ ಕಲಾ ತಂಡಗಳು ಪಾಲ್ಗೊಳ್ಳಲಿದ್ದು, ಅಭಿಮಾನೋತ್ಸವವನ್ನು ಐತಿಹಾಸಿಕ ಸಮಾರಂಭವನ್ನಾಗಿ ಮಾಡಬೇಕೆಂದು ರಾಜ್ಯದ ಜನರಿಗೆ ಮನವಿ ಮಾಡಿದರು.
ಸ್ವಾಗತ ಸಮಿತಿ ಅಧ್ಯಕ್ಷ, ಸಂಸದ ಗೋವಿಂದ ಎಂ.ಕಾರಜೋಳ ಅವರು ಮಾತನಾಡಿ, ಸಮಾರಂಭವನ್ನು ಚಿತ್ರದುರ್ಗದಲ್ಲೇ ಮಾಡಬೇಕೆಂಬ ನಮ್ಮೆಲ್ಲರ ಒತ್ತಾಸೆ ಈಡೇರಿದೆ. ಯಡಿಯೂರಪ್ಪ ಏಕಾಂಗಿಯಾಗಿ ರೈತರು, ದೀನ ದಲಿತರ ಅಭಿವೖದ್ಧಿಗಾಗಿ ಹೋರಾಟ ಮಾಡಿದ್ದಾರೆ. ಅವರ ಸುದೀರ್ಘ ಸಮಾಜ ಸೇವೆ, ಪಕ್ಷ ಸಂಘಟನೆ ಹಿನ್ನೆಲೆ ಹಮ್ಮಿಕೊಂಡಿರುವ ಅಭಿಮಾನೋತ್ಸವದಲ್ಲಿ ರಾಜ್ಯದ 29 ಸಾವಿರ ಹಳ್ಳಿಗಳಿಂದಲೂ ಹೆಚ್ಚು ಜನರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸಮಿತಿ ಕಾರ್ಯಾಧ್ಯಕ್ಷ, ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಸರಿಯಾದ ರಸ್ತೆ, ವಾಹನ ಸೌಕರ್ಯ ಇಲ್ಲದ ಕಾಲದಲ್ಲೇ ಯಡಿಯೂರಪ್ಪ ರಾಜ್ಯ ಸುತ್ತಿ ಪಕ್ಷ ಕಟ್ಟಿದ್ದಾರೆ. ಬಿಜೆಪಿಯಿಂದ ಇಬ್ಬರೇ ಶಾಸಕರಿದ್ದಾಗಲೂ ಅವರು ಎಂದಿಗೂ ಹೋರಾಟದಿಂದ ಹಿಂದೆ ಸರಿದ ವರಲ್ಲ. ನಭೂತೋ, ನಭವಿಷ್ಯತೆ ಎಂಬಂತೆ ಈ ಸಮಾರಂಭ ಜರುಗಬೇಕು ಎಂದು ಕೋರಿದರು. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ವೀರ ವನಿತೆ ಓನಕೆ ಓಬವ್ವ, ಮದಕರಿ ನಾಯಕರಿಗೆ ಜನ್ಮ ನೀಡಿದ ಈ ಐತಿಹಾಸಿಕ ನಾಡಿನಲ್ಲಿ ನಡೆಯುವ ಅಭಿಮಾನೋತ್ಸವ ಬಿಜೆಪಿಗೆ ಶಕ್ತಿ ಕೊಡಲಿ ಎಂದು ಆಶಿಸಿದರು. ಮಾಜಿ ಸಚಿವ ಕಟ್ಟಾ ಸುಬ್ರಮಣ್ಯನಾಯ್ಡು, ಕೇಂದ್ರದ ಮಾಜಿ ಸಚಿವರಾದ ಜಿ.ಎಂ.ಸಿದ್ದೇಶ್ವರ್, ಎ.ನಾರಾಯಣಸ್ವಾಮಿ, ಮಾಜಿ ಸಚಿವರಾದ ಬಿ.ಸಿ.ಪಾಟೀಲ್, ರೇಣುಕಾಚಾರ್ಯ, ಮುನಿರತ್ನ, ಹರತಾಳು ಹಾಲಪ್ಪ, ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಎಂಎಲ್​ಸಿ ಎನ್.ರವಿಕುಮಾರ್ ಇತರರು ಮಾತನಾಡಿದರು.

ಮಠಾಧೀಶರ ಸಾನ್ನಿಧ್ಯ

ಮೈದಾನದ ಸಮೀಪದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪಕ್ಷದ ನಾಯಕರು ವಿಶೇಷ ಪೂಜೆ ಸಲ್ಲಿಸಿದರು. ಗೋಪೂಜೆ, ಧ್ವಜಸ್ತಂಭ ಪೂಜೆ, ಧ್ವಜಾರೋಹಣ ನಂತರ ಭೂಮಿ ಪೂಜೆ ನೆರವೇರಿಸಲಾಯಿತು. ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಬಸವಪ್ರಭು ಸ್ವಾಮೀಜಿ ಮತ್ತಿತರ ಮಠಾಧೀಶರು ಪೂಜಾಧಿ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಿದ್ದರು.

ಇದು ಪಕ್ಷಾತೀತ ಕಾರ್ಯಕ್ರಮ

ಚಿತ್ರದುರ್ಗದಲ್ಲಿ ಮೇ.9ರಂದು ನಡೆಯಲಿರುವ ಬಿಎಸ್​ವೈ ಅಭಿಮಾನೋತ್ಸವ ಪಕ್ಷಾತೀತ ಕಾರ್ಯಕ್ರಮ ಎಂದು ವಿಧಾನಸಭೆ ಪ್ರತಿ ಪಕ್ಷ ನಾಯಕ ಆರ್.ಅಶೋಕ್ ಹೇಳಿದರು. ಇದು ಪಕ್ಷದಿಂದ ಆಯೋಜಿಸಿದ ಕಾರ್ಯಕ್ರಮವಲ್ಲ. ಜೆಡಿಎಸ್ ಸೇರಿ ಯಾರ್ಯಾರನ್ನು ಆಹ್ವಾನಿಸಬೇಕೆಂದು ಯಡಿಯೂರಪ್ಪ ಕುಟುಂಬಸ್ಥರು ತೀಮಾನಿಸುತ್ತಾರೆ ಎಂದರು. ಒಳ ಮೀಸಲಾತಿ ನೀಡುವುದಾಗಿ ಪರಿಶಿಷ್ಟ ಜಾತಿಯವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ. ಬಿಜೆಪಿ ಆಡಳಿತದಲ್ಲಿ ಎಸ್ಸಿಗೆ ಶೇ.17 ಮೀಸಲಾತಿ ನೀಡಲಾಗಿತ್ತು. ಆದರೆ ಈ ಸರ್ಕಾರ ಹಿಂದಕ್ಕೆ ಹೋಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಮುಖ್ಯವಾದ ಸಂಪುಟ ಸಭೆಗೆ ಗೈರಾಗಿದ್ದಾರೆ ಎಂದು ತಿಳಿಸಿದರು. ಡಿಕೆಶಿ ಇಲ್ಲದೆ ಒಳಮೀಸಲಾತಿ ಕುರಿತು ನಿರ್ಧರಿಸಲಾಗಿದೆ. ಸಿಎಂ ಕುರ್ಚಿಗಾಗಿ ಹೊಸದಿಲ್ಲಿಗೆ ಹೋಗಿದ್ದಾರೆ. ಅವರು ದಲಿತ ಸಮುದಾಯದ ವಿರೋಧಿ ಎಂದು ಬಿಂಬಿಸಲು ಸಂಪುಟ ಸಭೆ ನಡೆಸುವ ಪ್ಲ್ಯಾನ್​ಅನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ಕುರ್ಚಿ ಕಾಳಗದಲ್ಲಿ ಈ ಸರ್ಕಾರ ಪತನ ಆಗೋದು ನಿಶ್ಚಿತ ಎಂದರು.