Siddaramaiah | ಚುನಾವಣಾ ರಾಜಕೀಯಕ್ಕೆ ಗುಡ್‌ಬೈ ಹೇಳಿದ ಮಾಜಿ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ರಾಜಕೀಯ ಕ್ಷೇತ್ರ ಇಂದು ಕಲುಷಿತಗೊಂಡಿರುವುದರಿಂದ ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸ್ಪಷ್ಟಪಡಿಸಿದ್ದಾರೆ. ಆದರೆ, ಸಕ್ರಿಯ ರಾಜಕಾರಣದಲ್ಲಿದ್ದು ಜನರ ಕಷ್ಟ-ಸುಖಗಳಿಗೆ ಸದಾ ಧ್ವನಿಯಾಗಿ ನಿಲ್ಲುವುದಾಗಿ ತಿಳಿಸಿದ್ದಾರೆ.
ಶನಿವಾರ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯಲ್ಲಿ ಆಯೋಜಿಸಲಾಗಿದ್ದ ಖಾಸಗಿ ಸಮಾರಂಭವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ವರುಣ ಕ್ಷೇತ್ರದ ಜನರು ತಮ್ಮನ್ನು ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದರು. ಆದರೆ ತಾವು ಇನ್ನು ಮುಂದೆ ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸಬಾರದು ಎಂದು ಅಂದುಕೊಂಡಿರುವುದಾಗಿ ತಿಳಿಸಿದರು. ಈ ಹಿಂದೆ ತಾವು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದಾಗ ಕ್ಷೇತ್ರದ ಜನರೇ ದುಡ್ಡುಕೊಟ್ಟು ಗೆಲ್ಲಿಸಿಕೊಂಡು ಬರುತ್ತಿದ್ದರು ಎಂಬುದನ್ನು ನೆನಪಿಸಿಕೊಂಡ ಅವರು, ಇಂದು ಅಂತಹ ಪರಿಸ್ಥಿತಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಮಗೆ ಸದ್ಯ 79 ವರ್ಷ ವಯಸ್ಸಾಗಿದ್ದು, ಪ್ರಸ್ತುತ ಸರ್ಕಾರದ ಅವಧಿ ಇನ್ನು ಒಂದೂವರೆ ವರ್ಷ ಬಾಕಿ ಇದೆ. ಆ ಸಮಯಕ್ಕೆ ತಮಗೆ 81 ರಿಂದ 82 ವರ್ಷವಾಗಿರುತ್ತದೆ ಎಂದ ಸಿದ್ದರಾಮಯ್ಯ ಅವರು, ಆಗ ಈಗಿನಂತೆ ಆರೋಗ್ಯವೂ ಸದೃಢವಾಗಿ ಇರುವುದಿಲ್ಲ ಮತ್ತು ಹಿಂದಿನಂತೆ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ವಿವರಿಸಿದರು.
2028ರ ವೇಳೆಗೆ ತಮಗೆ 82 ವರ್ಷ ಪೂರ್ಣಗೊಳ್ಳಲಿದ್ದು, ಆಗ ತಮ್ಮ ರಾಜಕೀಯ ಜೀವನಕ್ಕೂ 50 ವರ್ಷಗಳು ಭರ್ತಿಯಾಗುತ್ತವೆ. 1978ರಲ್ಲಿ ತಾಲೂಕು ಮಂಡಳಿ ಸದಸ್ಯನಾಗಿ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದಾಗಿ ತಿಳಿಸಿದ ಸಿದ್ದರಾಮಯ್ಯ, ಈ ಸುದೀರ್ಘ ಪಯಣದಲ್ಲಿ ಸೋಲು ಮತ್ತು ಗೆಲುವು ಎರಡನ್ನೂ ಕಂಡಿದ್ದೇನೆ, ಆದಾಗ್ಯೂ, ತಾವು ನಂಬಿದ ಸಿದ್ಧಾಂತಕ್ಕೆ ಎಂದಿಗೂ ವಿರುದ್ಧವಾಗಿ ನಡೆದಿಲ್ಲ ಮತ್ತು ಆತ್ಮಸಾಕ್ಷಿಗೆ ದ್ರೋಹ ಬಗೆದಿಲ್ಲ ಎನ್ನುವ ದೊಡ್ಡ ಸಂತೃಪ್ತಿ ತಮಗಿದೆ ಎಂದು ಹಳೆ ನೆನಪುಗಳನ್ನು ಮೆಲುಕು ಹಾಕಿದರು.
ಇಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಜನರಿಗೆ ತಾವೇ ದುಡ್ಡುಕೊಡಬೇಕಾದ ಕಾಲ ಬಂದಿದೆ ಎಂದಿರುವ ಮಾಜಿ ಸಿಎಂ, ಇಂದು ರಾಜಕಾರಣ ಸಾಕಷ್ಟು ಕಲುಷಿತವಾಗಿದೆ ಹಾಗೂ ಪ್ರಾಮಾಣಿಕ ರಾಜಕಾರಣಕ್ಕೆ ಉಳಿಗಾಲವಿಲ್ಲದಂತಾಗಿದೆ, ಈ ಹಿನ್ನೆಲೆಯಲ್ಲಿಯೇ ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎನ್ನುವ ದೃಢ ನಿರ್ಧಾರಕ್ಕೆ ಬಂದಿರುವುದಾಗಿ ಪ್ರಕಟಿಸಿದರು.
ಐದು ದಶಕಗಳ ಕಾಲ ರಾಜ್ಯದ ಜನತೆ ತಮ್ಮಲ್ಲೊಬ್ಬ ಎಂಬಂತೆ ಕಂಡು ಅತ್ಯಂತ ಪ್ರೀತಿಯಿಂದ ಸಲಹಿದ್ದಾರೆ ಎಂದು ಸ್ಮರಿಸಿದ ಅವರು, ಈ ಋಣಭಾರ ತಮ್ಮ ಮೇಲಿದೆ ಎಂದರು. ಹೀಗಾಗಿ ತಮ್ಮ ಮುಂದಿನ ಸಂಪೂರ್ಣ ಜೀವನವೂ ಜನಸೇವೆಗೆ ಮುಡಿಪಾಗಿರುತ್ತದೆ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು.