ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ದೊಡ್ಡಬಳ್ಳಾಪುರದ ತಾಲೂಕು ಕಚೇರಿ ವೃತ್ತದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಕನ್ನಡಪರ ಹೋರಾಟಗಾರ ತ.ನ.ಪ್ರಭುದೇವ್​, ಕನ್ನಡ ಪಕ್ಷದ ಉಪಾಧ್ಯಕ್ಷ ಸಂಜೀವನಾಯಕ್​, ಕನ್ನಡ ಜಾಗೃತ ಪರಿಷತ್​ ಕಾರ್ಯದರ್ಶಿ ಡಿ.ಪಿ.ಆಂಜನೇಯ, ಕರವೇ ಕಾರ್ಯದರ್ಶಿ ರಾಜಘಟ್ಟ ರವಿ, ರೈತಸಂಘದ ಕಾರ್ಯದರ್ಶಿ ಮುತ್ತೇಗೌಡ, ಹನುಮಂತರಾಯಪ್ಪ, ವಾಸು, ಡಾ.ರಾಜ್​ ಕುಮಾರ್​ ಅಭಿಮಾನಿಗಳ ಸಂಘದ ಉಪಾಧ್ಯಕ್ಷ ವಿ.ಪರಮೇಶ್​, ಕನ್ನಡ ಪಕ್ಷದ ಅಧ್ಯಕ್ಷ ವೆಂಕಟೇಶ್​, ಕರವೇ ಶಿವರಾಮೇಗೌಡರ ಬಣದ ಅಧ್ಯಕ್ಷ ಮರುಳಾರಾಧ್ಯ, ಕರವೇ ಪ್ರವಿಣ್​ಶೆಟ್ಟಿ ಬಣದ ಅಧ್ಯಕ್ಷ ಹಮಾಮ್​ ವೆಂಕಟೇಶ್​ ಇತರರು ಇದ್ದರು. 
ರಾಜ್ಯ

ಮಾನವ ಸರಪಳಿ ನಿರ್ಮಿಸಿ ಹೋರಾಟ / DODABALLAPUR

ಬೆಂಗಳೂರು ಗ್ರಾಮಾಂತರ ಡೆಸ್ಕ್

ದೊಡ್ಡಬಳ್ಳಾಪುರ :

ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕೆಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನ ವಿರೋಧಿಸಿ ರೈತಸಂಘ, ಕರವೇ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ನಗರದ ತಾಲೂಕು ಕಚೇರಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಕರವೇ ಕಾರ್ಯದರ್ಶಿ ರಾಜಟ್ಟ ರವಿ, ನಮಗೆ ಇಲ್ಲಿ ಕೃಷಿಗೆ ನೀರಿಲ್ಲ. ಕುಡಿಯುವ ನೀರಿಗೂ ಮುಂದೆ ತೊಂದರೆಯಾಗುತ್ತಿದೆ. ಇಂತಹ ಸಮಯದಲ್ಲಿ ತಮಿಳುನಾಡಿಗೆ ನೀರು ಬಿಡುವ ತೀರ್ಪು ಸರಿಯಲ್ಲ. ಜೀವಜಲವಾಗಿರುವ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸದಂತೆ ರಾಜ್ಯ ಸರ್ಕಾರಕ್ಕೆ ಪ್ರತಿಭಟನೆ ಮೂಲಕ ಎಚ್ಚರಿಸುತ್ತಿದ್ದೇವೆ ಎಂದರು.

ಕನ್ನಡ ಪಕ್ಷದ ಉಪಾಧ್ಯಕ್ಷ ಸಂಜೀವನಾಯಕ್​ ಮಾತನಾಡಿ, ಈ ವರ್ಷ ವಾಡಿಕೆಗಿಂತ ಅತಿ ಕಡಿಮೆ ಮಳೆಯಾಗಿ ಕೆಆರ್​ಎಸ್​ ಅಣೆಕಟ್ಟಿನಲ್ಲಿ ನೀರು ಸಂಗ್ರಹವಿಲ್ಲ. ಆದರೂ ತಮಿಳುನಾಡಿಗೆ ನೀರು ಬಿಡಬೇಕೆಂಬ ಆದೇಶವನ್ನು ಪಾಲಿಸುವುದು ಬೇಡ. ಕೆಆರ್​ಎಸ್​ ಅಣೆಕಟ್ಟು ಬರಿದಾದರೆ ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ರೈತರ ಕೃಷಿಗೆ ತೊಂದರೆಯಾಗುತ್ತದೆ.ಕಾವೇರಿ ನೀರಿಗೆ ಅವಲಂಬಿತವಾಗಿರುವ ಬೆಂಗಳೂರಿಗೆ ಕುಡಿಯುವ ನೀರು ಸಹ ಸಿಗುವುದಿಲ್ಲ ಎಂದು ಹೇಳಿದರು.

ಕರವೇ ಶಿವರಾಮೇಗೌಡರ ಬಣದ ಅಧ್ಯಕ್ಷ ಮರುಳಾರಾಧ್ಯ ಮಾತನಾಡಿ, ಮಳೆ ಪ್ರಾಕೃತಿಕ ವಿದ್ಯಮಾನ. ಮಳೆ ನೀರನ್ನು ಕಾನೂನಿನ ವ್ಯಾಪ್ತಿಗೆ ತರುವುದು ಮತ್ತು ಹಂಚಿಕೆ ಮಾಡುವುದು ಅವೈಜ್ಞಾನಿಕ ಕ್ರಮ. ಕಾವೇರಿ ನೀರು ಹಂಚಿಕೆ ಸಂಬಂಧ ಪ್ರಾಧಿಕಾರ ರಚಿಸಿರುವುದು ಪ್ರಕೃತಿ ನಿಯಮಕ್ಕೆ ವಿರುದ್ಧವಾದುದು. ಹಾಗಾಗಿ ಪ್ರಾಧಿಕಾರವನ್ನು ರದ್ದುಪಡಿಸಬೇಕು. ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸಬಾರದು. ನೀರು ಹರಿಸಿದರೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್​ ಯಲ್ಲಪ್ಪ ಕೆ.ಯರಗೋಳ ಅವರು ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು.