ಎಚ್.ಡಿ.ಕೋಟೆ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಶಾಸಕ ಅನಿಲ್ ಚಿಕ್ಕಮಾದು ಬೇಟಿ ನೀಡಿ ಆಸ್ಪತ್ರೆಯಲ್ಲಿ ವೈದ್ಯರು ನೀಡುತ್ತಿರುವ ಸೇವೆಯ ಬಗ್ಗೆ ರೋಗಿಗಳಿಂದ ಮಾಹಿತಿ ಪಡೆದರು.
ವೈದ್ಯರ ನಡುವಿನ ಭಿನ್ನಾಭಿಪ್ರಾಯ, ರೋಗಿಗಳ ಮೇಲೆ ಪರಿಣಾಮ ಬೀರಬಾರದು ಉತ್ತಮ ಸೇವೆ ನೀಡಿ ತಾಲೂಕಿಗೆ ಗೌರವ ತರಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ವೈದ್ಯರ ಕಚೇರಿಯಲ್ಲಿ ಶುಕ್ರವಾರ ವೈದ್ಯರು, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿದರು.
ವೈದ್ಯರ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯವನ್ನು ಮಾತುಕತೆಯ ಮೂಲಕ ಬಗೆಹರಿಸಲಾಗಿದ್ದು, ಇನ್ನುಮುಂದೆ ರೋಗಿಗಳ ಸೇವೆಗೆ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ಎಲ್ಲ ವೈದ್ಯರೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಆಸ್ಪತ್ರೆಗೆ ಪ್ರತಿದಿನ ಸುಮಾರು 700 ರಿಂದ 800 ಹೊರರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಿದ್ದು, ಅವರಿಗೆ ಯಾವುದೇ ತೊಂದರೆಯಾಗದಂತೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ವೈದ್ಯರ ಜವಾಬ್ದಾರಿಯಾಗಿದೆ. ಆಸ್ಪತ್ರೆಯಲ್ಲಿ ವೈದ್ಯರು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಿ ಸಾರ್ವಜನಿಕರ ವಿಶ್ವಾಸ ಉಳಿಸಬೇಕು ಎಂದು ಅವರು ಹೇಳಿದರು.
ಆಸ್ಪತ್ರೆಯಲ್ಲಿ ಆಗಾಗ್ಗೆ ಎದುರಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ 50 ಸಾವಿರ ಲೀಟರ್ ಸಾಮರ್ಥ್ಯದ ನೀರು ಸಂಗ್ರಹ ಟ್ಯಾಂಕ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಆಸ್ಪತ್ರೆಯಲ್ಲಿ ನೀರಿನ ಕೊರತೆ ಉಂಟಾಗುವುದಿಲ್ಲ ಎಂದು ಶಾಸಕರು ತಿಳಿಸಿದರು.
ಆಂಬುಲೆನ್ಸ್ ಕೊರತೆ ನೀಗಿಸಲು ಕ್ರಮ:
ಪ್ರಸ್ತುತ ಆಸ್ಪತ್ರೆಯಲ್ಲಿ ಮೂರು ಆಂಬುಲೆನ್ಸ್‌ಗಳಿದ್ದು, ರೋಗಿಗಳ ಅವಶ್ಯಕತೆಗೆ ಇನ್ನೂ ಎರಡು ಆಂಬುಲೆನ್ಸ್ ಅಗತ್ಯವಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಹೆಚ್ಚುವರಿ ವಾಹನಗಳನ್ನು ಮಂಜೂರು ಮಾಡಿಸಿಕೊಳ್ಳಲಾಗುವುದು ಎಂದು ಶಾಸಕರು ಹೇಳಿದರು.
ಇದಲ್ಲದೆ ಆಸ್ಪತ್ರೆಯಲ್ಲಿ ಕೆಲವು ಅಗತ್ಯ ಔಷಧಗಳ ಕೊರತೆ ಇರುವುದನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು, ಶೀಘ್ರದಲ್ಲೇ ಔಷಧ ಪೂರೈಕೆ ಸುಧಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ತಾಲೂಕಿನಲ್ಲಿ 39 ಮಂದಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಸಮರ್ಪಕ ಸೇವೆ ನೀಡಲು ಒಟ್ಟು ಏಳು ಡಯಾಲಿಸಿಸ್ ಯಂತ್ರಗಳು ಅಗತ್ಯವಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಐದು ಯಂತ್ರಗಳಿದ್ದು, ಉಳಿದ ಎರಡು ಯಂತ್ರಗಳನ್ನು ಶೀಘ್ರದಲ್ಲೇ ಅಳವಡಿಸಿ ರೋಗಿಗಳಿಗೆ ಉತ್ತಮ ಸೇವೆ ಕಲ್ಪಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆ ಪಕ್ಕದಲ್ಲಿರುವ ಪ್ರಯೋಗಾಲಯ ಕಟ್ಟಡ ಉದ್ಘಾಟನೆಗೊಂಡು ಎರಡು ವರ್ಷ ಕಳೆದಿದ್ದರೂ ಕಾರ್ಯಾರಂಭವಾಗಿಲ್ಲ. ಪೈಪ್‌ಲೈನ್ ಸೇರಿದಂತೆ ಕೆಲವು ಕಾಮಗಾರಿಗಳು ಅಪೂರ್ಣವಾಗಿರುವ ಕಾರಣ ಪ್ರಯೋಗಾಲಯ ಬಳಕೆಗೆ ಬಂದಿಲ್ಲ. ಈ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಪ್ರಯೋಗಾಲಯವನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಶಾಸಕರು ನಿರ್ದೇಶನ ನೀಡಿದರು.
ಗೈರಾದ ವೈದ್ಯರ ವಿರುದ್ಧ ಕ್ರಮ:
ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಗೈರಾಗುವ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಯಾವುದೇ ನಿರ್ಲಕ್ಷೃವನ್ನು ಸಹಿಸಲಾಗುವುದಿಲ್ಲ ಎಂದು ಶಾಸಕ ಅನಿಲ್ ಚಿಕ್ಕಮಾದು ಎಚ್ಚರಿಕೆ ನೀಡಿದರು.
ಚರ್ಮರೋಗ ತಜ್ಞೆ ಡಾ. ಸಹನಾ ಮಾತನಾಡಿ,ಭಿನ್ನಾಭಿಪ್ರಾಯವನ್ನು ಮರೆತು ಸಮನ್ವಯದಿಂದ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ತಹಸೀಲ್ದಾರ್ ಶ್ರೀನಿವಾಸ್, ಇಒ ರವಿಚಂದ್ರ, ಪೊಲೀಸ್ ಇನ್ಸ್‌ಪೆಕ್ಟರ್ ಗಂಗಾಧರ್, ನಾಗೇಶ್, ಎಚ್.ಸಿ. ನರಸಿಂಹಮೂರ್ತಿ, ಆನಂದ್, ರವಿ, ಟಿಎಚ್‌ಒ ಡಾ. ರವಿಕುಮಾರ್, ಆಡಳಿತಾಧಿಕಾರಿ ಡಾ.ಪೂರ್ಣಿಮಾ, ಪುರಸಭೆ ಮುಖ್ಯಾಧಿಕಾರಿ ಸುರೇಶ್ ಹಾಗೂ ವೈದ್ಯರಾದ ಡಾ. ಶ್ರೀನಿವಾಸಮೂರ್ತಿ, ಡಾ. ನಾಗೇಶ್, ಡಾ. ಪ್ರಜ್ವಲ್, ಡಾ. ಪ್ರಶಾಂತಕುಮಾರ್, ಡಾ. ರಶ್ಮಿ, ಡಾ. ಪುರುಷೋತ್ತಮ್, ಡಾ. ಸೋಮಣ್ಣ, ಡಾ. ಮಹಾಲಕ್ಷ್ಮೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಾರ್ಡ್‌ಗಳ ಶುಚಿತ್ವ ಪರಿಶೀಲನೆ:
ಸಭೆಗೂ ಮುನ್ನಾ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು, ಆವರಣದಲ್ಲಿ ಶುಚಿತ್ವದ ಬಗ್ಗೆ ಪರಿಶೀಲನೆ ನಡೆಸಿದರು. ನಂತರ ಹೆರಿಗೆ ವಾರ್ಡ್‌ಗೆ ಭೇಟಿ ನೀಡಿ ವೈದ್ಯರು ಚಿಕಿತ್ಸೆ ನೀಡುತ್ತಿರುವ ಬಗ್ಗೆ ಬಾಣಂತಿಯರು ಹಾಗೂ ಅವರ ಸಂಬಂಧಿಕರಲ್ಲಿ ವಿಚಾರಿಸಿದರು. ತದನಂತರ ತಾಯಿ ಮಕ್ಕಳ ಜನರಲ್ ವಾರ್ಡ್‌ಗೆ ಭೇಟಿ ನೀಡಿ ರಾತ್ರಿ ವೇಳೆ ಆಸ್ಪತ್ರೆಯಲ್ಲಿ ಕರೆಂಟ್ ಇರುವ ಬಗ್ಗೆ ಹಾಗೂ ಫ್ಯಾನ್‌ಗಳು ಸರಿಯಾಗಿ ಕೆಲಸ ಮಾಡುತ್ತಿರುವ ಬಗ್ಗೆ, ವೈದ್ಯರು ಸೇವೆ ಸಲ್ಲಿಸುತ್ತಿರುವ ಬಗ್ಗೆ ರೋಗಿಗಳಿಂದ ಮಾಹಿತಿ ಪಡೆದರು.