ಕಾಡ್ಗಿಚ್ಚಿನಿಂದ ಪರಿಸರ ವ್ಯವಸ್ಥೆ ನಾಶ Forest
- ಅರಣ್ಯ ಉಪವಲಯಾಧಿಕಾರಿ ನಾಗೇಶ್ ಹೇಳಿಕೆ
ಬೂದಿಕೋಟೆ: ನಾವು ಉಸಿರಾಡುವುದಕ್ಕೆ ಕಾಡಿನ ಮರಗಳೇ ಕಾರಣ. ಕಾಡನ್ನು ಸುಡುವುದು ಎಂದರೆ ನಮ್ಮ ಉಸಿರಾಟದ ಮೂಲವನ್ನೇ ನಾವೇ ಕೈಯಾರೆ ಕತ್ತರಿಸಿಕೊಂಡಂತೆ ಎಂದು ಅರಣ್ಯ ಉಪವಲಯಾಧಿಕಾರಿ ನಾಗೇಶ್ ತಿಳಿಸಿದರು. Forest
ಬಂಗಾರಪೇಟೆ ತಾಲೂಕು ತೊಪ್ಪನಹಳ್ಳಿ ಗ್ರಾಪಂ ವ್ಯಾಪ್ತಿಯ ಕಳವಂಚಿ ವೃತ್ತದಲ್ಲಿ ಅರಣ್ಯ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಅರಣ್ಯ ರಕ್ಷಣೆ ಕುರಿತು ಶನಿವಾರ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಕಾಡ್ಗಿಚ್ಚು ತಡೆಗಟ್ಟುವುದು ಇಂದಿನ ತುರ್ತು ಅಗತ್ಯಗಳಲ್ಲಿ ಒಂದಾಗಿದೆ. ಕಾಡ್ಗಿಚ್ಚಿನಿಂದ ಕೇವಲ ಮರಗಳು ಮಾತ್ರವಲ್ಲದೆ, ಇಡೀ ಪರಿಸರ ವ್ಯವಸ್ಥೆಯೇ ನಾಶವಾಗುತ್ತದೆ ಎಂದರು.
ಬೆಂಕಿಯಿಂದಾಗಿ ಓಡಲಾರದ ಸಣ್ಣ ಪ್ರಾಣಿಗಳು, ಹಕ್ಕಿಗಳು ಮತ್ತು ಅವುಗಳ ಮೊಟ್ಟೆಗಳು ಬೆಂಕಿಯಲ್ಲಿ ಬೆಂದು ಕರಕಲಾಗುತ್ತವೆ. ಕಾಡ್ಗಿಚ್ಚಿನಿಂದ ಹರಡುವ ಹೊಗೆ ಹತ್ತಿರದ ಹಳ್ಳಿಗಳ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕಾಡಿನಲ್ಲಿರುವ ಅಮೂಲ್ಯ ಔಷಧೀಯ ಸಸ್ಯಗಳು ಮತ್ತು ಶ್ರೀಗಂಧದಂತಹ ಮರಗಳು ಸುಟ್ಟು ಬೂದಿಯಾಗುತ್ತವೆ. ಆದ್ದರಿಂದ ಕಾಡಿಗೆ ಬೆಂಕಿ ಹಚ್ಚುವುದು ಶಿಕ್ಷಾರ್ಹ ಅಪರಾಧ, ಜೈಲು ಶಿಕ್ಷೆ ಮತ್ತು ಭಾರಿ ದಂಡ ತೆರಬೇಕಾಗುತ್ತದೆ ಎಂದು ತಿಳಿಸಿದರು.
ಕಾಡಿನಂಚಿನ ಗ್ರಾಮಗಳಲ್ಲಿನ ರೈತರು ಜಮೀನುಗಳಲ್ಲಿ ಕಸ&ಕಡ್ಡಿ ಸುಡುವಾಗ ಜಾಗರೂಕರಾಗಿರಬೇಕು. ಅಂದರೆ ಕಾಡಿಗೆ ಹರಡದಂತೆ ನೋಡಿಕೊಳ್ಳಬೇಕು. ಕಾಡಿನಲ್ಲಿ ಚಾರಣ ಮಾಡುವವರು ಅಡುಗೆಗಾಗಿ ಬೆಂಕಿ ಹಚ್ಚುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಕಾಡಿನಲ್ಲಿ ಎಲ್ಲಾದರೂ ಸಣ್ಣ ಕಿಡಿ ಅಥವಾ ಹೊಗೆ ಕಂಡರೆ ತಕ್ಷಣವೇ ಅರಣ್ಯ ಇಲಾಖೆಯ ಉಚಿತ ಸಹಾಯವಾಣಿ ಸಂಖ್ಯೆ 1926ಕ್ಕೆ ಕರೆ ಅಥವಾ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಮೈಸೂರಿನ ರಂಗಭೂಮಿ ಕಲಾವಿದರಾದ ಅಸ್ಮಾ ಭಾನು ಮತ್ತು ತಂಡದವರು ಬೀದಿ ನಾಟಕದ ಮೂಲಕ ಕಾಡ್ಗಿಚ್ಚಿನ ಅನಾಹುತಗಳ ಬಗ್ಗೆ ಅರಿವು ಮೂಡಿಸಿದರು.