ನೆಲಮಂಗಲದಲ್ಲಿ ಆಯೋಜಿಸಿದ್ದ ಡಾ.ಅಂಬೇಡ್ಕರ್ ಜಯಂತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ನೆಲಮಂಗಲ : ಅಂಬೇಡ್ಕರ್ ತತ್ವಾದರ್ಶ, ದೂರದೃಷ್ಟಿ ಚಿಂತನೆಗಳು ಸಮಾಜದ ಶ್ರೇಯೋಭಿವೃದ್ಧಿಗೆ ಸಹಕಾರಿ ಎಂದು ಶಾಸಕ ಎನ್.ಶ್ರೀನಿವಾಸ್ ಹೇಳಿದರು.
ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಡಾ.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾವ್ ಜಯಂತಿಯಲ್ಲಿ ಮಾತನಾಡಿದರು. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾವ್ ಸಮಾನತೆ ನೆಲೆಸಲು, ನ್ಯಾಯ ಸಿಗುವಂತೆ ಮಾಡಿರುವುದನ್ನು ಮರೆಯುವಂತಿಲ್ಲ. ಆದರೆ ಅಂಬೇಡ್ಕರ್ ಅವರ ಹೆಸರಿನಲ್ಲಿ ಸಮಾಜ ಘಾತಕ ಕೆಲಸಗಳನ್ನು ಮಾಡುವುದು, ಸಮಾಜದ ಜನರ ಬಗ್ಗೆ ಕೆಟ್ಟ ಆಲೋಚನೆ ಮಾಡಿ ಸಮಾಜ ಹೊಡೆಯುವ ಕೆಲಸ ಮಾಡಬಾರದು ಎಂದರು.
ಬೃಹತ್ ಮೆರವಣಿಗೆ : ನಗರದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿಯವರೆಗೂ ತಮಟೆ, ದೇವರ ಕುಣಿತ, ವೀರಗಾಸೆ, ಗೊಂಬೆ ಕುಣಿತ, ಕರಡಿ ಕುಣಿತ ಸೇರಿ ವಿವಿಧ ಕಲಾತಂಡಗಳ ಜತೆ ಬೆಳ್ಳಿ ರಥದಲ್ಲಿ ಡಾ.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾವ್ ಭಾವಚಿತ್ರಗಳ ಹಾಗೂ ಬೃಹತ್ ಪುತ್ಥಳಿಯ ಮೆರವಣಿಗೆಯನ್ನು ನಗರದ ಮುಖ್ಯರಸ್ತೆಯಲ್ಲಿ ಮಾಡಲಾಯಿತು.ಸಾವಿರಾರು ಮುಖಂಡರು, ವಿವಿಧ ಸಮುದಾಯಗಳ ಮುಖಂಡರು, ದಲಿತ ಸಂಘಟನೆಗಳು, ಕನ್ನಡಪರ, ರೈತಪರ ಸಂಘಟನೆಗಳು, ಅಧಿಕಾರಿಗಳು, ಶಿಕ್ಷಕರು ಭಾಗವಹಿಸುವ ಮೂಲಕ ಅಂಬೇಡ್ಕರ್ ಜಯಂತಿಯ ಬೃಹತ್ ಮೆರವಣಿಗೆ ನೆಲಮಂಗಲ ತಾಲೂಕಿನಲ್ಲಿ ಹೊಸ ಇತಿಹಾಸ ಸೃಷ್ಟಿಮಾಡಿತ್ತು.
ಎನ್ಪಿಎ ಅಧ್ಯಕ್ಷ ಎಂ.ಕೆ.ನಾಗರಾಜು, ಮಾಜಿ ಅಧ್ಯಕ್ಷ ನಾರಾಯಣಗೌಡ, ನಗರಸಭೆ ಅಧ್ಯಕ್ಷ ಎನ್.ಗಣೇಶ್, ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್, ಇಒ ಡಾ.ಬಿಂದು, ಬಿಇಒ ಕೆ.ಸಿ.ರಮೇಶ್, ಪೌರಾಯುಕ್ತ ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪ್ರದಿಪ್, ಮಂಜುನಾಥ್, ಹನುಮಂತೇಗೌಡ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವಾಣಿ, ಟಿಎಪಿಸಿಎಂಎಸ್ ಅಧ್ಯಕ್ಷ ಹನುಮಂತರಾಜು, ಗ್ಯಾರಂಟಿ ಸಮಿತಿ ಅಧ್ಯೆ ನಾಗರತ್ನಮ್ಮ ಇದ್ದರು.
ಸಾಧಕರಿಗೆ ಸನ್ಮಾನ : ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಲೆಕ್ಯಾತನಹಳ್ಳಿ ಉಮೇಶ್, ಮೆಳೆಕತ್ತಿಗನೂರು ಭೂಪಾಲಯ್ಯ, ಬ್ಯಾಡರಹಳ್ಳಿ ನಿತಿನ್, ಶ್ರೀನಿವಾಸಪುರ ಗಿರಿಯಪ್ಪ, ಹನುಮಂತೇಗೌಡ, ಸೊಂಪುರ ವೀರಯ್ಯ ಹಾಗೂ ಅಂಬೇಡ್ಕರ್ ಜಯಂತಿ ಹಿನ್ನಲೆ ಕಾನೂನು ವಿಭಾಗದಲ್ಲಿ ಗಣೇಶ್ ಮೂರ್ತಿ, ದಿಲೀಪಕುಮಾರ್, ಸುಮಾ, ಪ್ರಶಾಂತ್, ಸಮಾಜ ಸೇವೆಯಲ್ಲಿ ಜಯರಾಮಯ್ಯ ಅವರಿಗೆ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಪ್ರಶಸ್ತಿ ನೀಡಿ ಶಾಸಕರು ಸನ್ಮಾನಿಸಿದರು.
ಪುಷ್ಪ ನಮನ : ತಾಲೂಕು ಕಚೇರಿ ಸಮೀಪ ಡಾ.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾವ್ ಬೃಹತ್ ಭಾವಚಿತ್ರಕ್ಕೆ ಶಾಸಕ ಎನ್.ಶ್ರೀನಿವಾಸ್ ಸೇರಿ ಮುಖಂಡರು ಪುಷ್ಪನಮನ ಸಲ್ಲಿಸಿದರು. ಅಂಬೇಡ್ಕರ್ ವೇಷ ಧರಿಸಿದ ವಿದ್ಯಾರ್ಥಿಗೆ ಶಾಸಕರು ಅಭಿನಂದನೆ ಸಲ್ಲಿಸಿದರು. ಹಿರಿಯ ಸಾಹಿತಿ ಡಾ.ಚೌಡಯ್ಯ ಅವರು ಅಂಬೇಡ್ಕರ್, ಕುವೆಂಪು, ಬಸವಣ್ಣನವರ ವಿಚಾರವಾಗಿ ರಚಿಸಿದ ಈ ನೆಲದ ಗುಣಗಳು ಪುಸ್ತಕವನ್ನು ಶಾಸಕರು ಹಾಗೂ ಗಣ್ಯರು ಬಿಡುಗಡೆ ಮಾಡಿದರು.
ತಮಟೆ ಬಾರಿಸಿದ ಶಾಸಕರು : ಶಾಸಕ ಎನ್.ಶ್ರೀನಿವಾಸ್ ಅವರು ಬಸ್ನಿಲ್ದಾಣದ ಸಮೀಪ ತಮಟೆ ಭಾರಿಸುವ ಮೂಲಕ ಗಮನ ಸೆಳೆದರು. ಶಾಸಕರು ತಮಟೆ ಬಾರಿಸುತ್ತಿದ್ದಂತೆ ಮುಖಂಡರು, ಜನರು ಕುಣಿದು ಕುಪ್ಪಣಿಸಿದರು.