ಚಿತ್ತಾಪುರದ ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಮಾಡುತ್ತಿರುವ ಕಂದಾಯ ಇಲಾಖೆ ಸಿಬ್ಬಂದಿ.
- ಚಿತ್ತಾಪುರದಲ್ಲಿ ನಾಗಾವಿ ದೇವಸ್ಥಾನದಲ್ಲಿ ಕಾಣಿಕೆ ಎಣಿಕೆ
- 16.32 ಲಕ್ಷ ರೂ. ಸಂಗ್ರಹ
ಚಿತ್ತಾಪುರ: ಐತಿಹಾಸಿಕ ನಾಗಾವಿ ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ 16,32,025 ರೂ. ಸಂಗ್ರಹವಾಗಿದೆ. ಹುಂಡಿ ಎಣಿಕೆ ವೇಳೆ ವಿವಿಧ ದೇಶಗಳ ಕರೆನ್ಸಿ ಹಾಗೂ ವಿದೇಶಿ ಕಾಯಿನ್ಗಳು ಪತ್ತೆಯಾಗಿದ್ದು, ಜನರಲ್ಲಿ ಕುತೂಹಲ ಮೂಡಿಸಿದೆ.
ದೇವಸ್ಥಾನ ಸಮಿತಿ ಅಧ್ಯಕ್ಷ ಹಾಗೂ ತಹಸೀಲ್ದಾರ್ ನಾಗಯ್ಯ ಹಿರೇಮಠ ನೇತೃತ್ವದಲ್ಲಿ ಗುರುವಾರ ಹುಂಡಿ ಎಣಿಕೆ ನಡೆಯಿತು. 2026ರ ಫೆ.22ರಿಂದ ಆ.27ರ ಅವಧಿಯಲ್ಲಿ ಭಕ್ತರು ಹುಂಡಿಗೆ ಹಾಕಿದ್ದ ಕಾಣಿಕೆ ಹಣ ಎಣಿಕೆ ಮಾಡಲಾಯಿತು. ಈ ವೇಳೆ ಕೊರಿಯಾ, ಕೆನಡಾ, ಯುಎಇ ಹಾಗೂ ಅಮೆರಿಕ ದೇಶಗಳ ಕರೆನ್ಸಿಗಳು ಪತ್ತೆಯಾಗಿವೆ. ವಿದೇಶಿ ಹಣದ ಜತೆಗೆ ಅಮೆರಿಕದ ಕಾಯಿನ್ಗಳೂ ದೊರೆತಿವೆ.
ಕೊರಿಯಾದ 10 ಸಾವಿರ ವನ್, ಕೆನಡಾದ 5 ಸಿಂಗಾಪುರ ಡಾಲರ್ಗೆ ಸಮನಾದ ವಿದೇಶಿ ಕರೆನ್ಸಿ, ಯುಎಇಯ 5 ಹಾಗೂ 10 ದಿರಹಂ ಮತ್ತು ಅಮೆರಿಕದ ವಿವಿಧ ಮುಖಬೆಲೆಯ ನೋಟುಗಳು ಹುಂಡಿಯಲ್ಲಿ ಪತ್ತೆಯಾಗಿವೆ. ಇವುಗಳ ಭಾರತೀಯ ಮೌಲ್ಯವನ್ನು ಲೆಕ್ಕ ಹಾಕಿದಾಗ ವಿದೇಶಿ ಕರೆನ್ಸಿಯ ಮೌಲ್ಯ 17,140.91 ರೂ. ಆಗಿದೆ. ಅಮೆರಿಕದ ಕಾಯಿನ್ಗಳ ಮೌಲ್ಯ ಅಂದಾಜು 1 ಸಾವಿರ ರೂ.ನಷ್ಟಿದೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ನಡೆದ ಹುಂಡಿ ಎಣಿಕೆ ಸಂದರ್ಭದಲ್ಲಿಯೂ ವಿದೇಶಿ ಕರೆನ್ಸಿ ಪತ್ತೆಯಾಗಿತ್ತು. ಈ ಬಾರಿಯೂ ನಾಲ್ಕೆದು ದೇಶಗಳ ಕರೆನ್ಸಿ ಹಾಗೂ ಕಾಯಿನ್ಗಳು ದೊರೆತಿರುವುದು ಚರ್ಚೆಗೆ ಕಾರಣವಾಗಿದೆ. ವಿದೇಶಗಳಲ್ಲಿಯೂ ಯಲ್ಲಮ್ಮ ದೇವಿಯ ಭಕ್ತರಿದ್ದು, ಅಲ್ಲಿಂದಲೂ ದೇವಸ್ಥಾನಕ್ಕೆ ಕಾಣಿಕೆ ಸಲ್ಲಿಕೆಯಾಗುತ್ತಿರುವುದಕ್ಕೆ ಇದು ಸಾಯಾಗಿದೆ ಎಂದು ಭಕ್ತರು ಅಭಿಪ್ರಾಯಪಟ್ಟಿದ್ದಾರೆ.