ಕೊಳ್ಳೇಗಾಲ ಪಟ್ಟಣದ ಮುಡಿಗುಂಡ ಹಾಗೂ ಶಂಕನ ಪುರ ಬಡಾವಣೆಗಳಲ್ಲಿರುವ ಕೊಳಗೇರಿ ಅಭಿವೃದ್ಧಿ ಮಂಡಳಿ ( ಸ್ಲಮ್ ಬೋರ್ಡ್) ಗೆ ಸೇರಿದ ಮನೆಗಳಿಗೆ ಇ-ಸ್ವತ್ತು ಮತ್ತು ರಿಜಿಸ್ಟರ್ ಮಾಡಿಕೊಡಬೇಕು ಎಂದು ಆಗ್ರಹಿಸಿ ಮಹಿಳೆಯರು ನಗರಸಭೆಯಲ್ಲಿ ಪ್ರತಿ ಭಟನೆ ನಡೆಸಿದರು 
ರಾಜ್ಯ

ಇ-ಸ್ವತ್ತು ಮಾಡಿಕೊಡಲು ಒತ್ತಾಯ

ಕೊಳ್ಳೇಗಾಲ: ಪಟ್ಟಣದ ಮುಡಿಗುಂಡ ಹಾಗೂ ಶಂಕನಪುರ ಬಡಾವಣೆಗಳಲ್ಲಿರುವ ಕೊಳಗೇರಿ ಅಭಿವೃದ್ಧಿ ಮಂಡಳಿ(ಸ್ಲಮ್ ಬೋರ್ಡ್)ಗೆ ಸೇರಿದ ಮನೆಗಳಿಗೆ ಇ-ಸ್ವತ್ತು ಮತ್ತು ರಿಜಿಸ್ಟರ್ ಮಾಡಿಕೊಡಬೇಕು ಎಂದು ಆಗ್ರಹಿಸಿ ಮಹಿಳೆಯರು ಪ್ರತಿಭಟನೆ ನಡೆಸಿದರು.

ಸೋಮವಾರ ಪಟ್ಟಣದ ನಗರಸಭೆ ಕಾರ್ಯಾಲಯದ ಪೌರಾಯುಕ್ತರ ಕೊಠಡಿ ಮುಂಭಾಗ ಮುಡಿಗುಂಡ ಹಾಗೂ ಶಂಕನಪುರ ಬಡಾವಣೆಯ ಮಹಿಳೆಯರು ಸಮಾವೇಶಗೊಂಡು ಕೊಳಗೇರಿ ಅಭಿವೃದ್ಧಿ ಮಂಡಲಿಗೆ ಸೇರಿದ ಮನೆಗಳಿಗೆ ಇ-ಸ್ವತ್ತು ನೀಡುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಅಕ್ರೋಶ ಹೊರಹಾಕಿದರು.

ಈ ವೇಳೆ ಮುಡಿಗುಂಡ ಬಡಾವಣೆ ನಿವಾಸಿ ಕವಿತಾ ಮಾತನಾಡಿ, ಕೊಳಗೇರಿ ಅಭಿವೃದ್ಧಿ ಮಂಡಲಿಗೆ ಸೇರಿದ ಮನೆಗಳಿಗೆ ಅಸಮರ್ಪಕವಾಗಿ ಹಕ್ಕು ಪತ್ರ ನೀಡಲಾಗಿದೆ. ಇನ್ನು ಕೊಟ್ಟಿರುವ ಹಕ್ಕು ಪತ್ರಗಳಿಗೆ 2 ವರ್ಷಗಳಿಂದ ರಿಜಿಸ್ಟರ್ ಪ್ರಕ್ರಿಯೆ ನಡೆಸಿ ಇ-ಸ್ವತ್ತು ನೀಡಲಾಗುತ್ತಿಲ್ಲ. ಈ ವೇಳೆ ಕೆಲವರು ರಿಜಿಸ್ಟರ್ ಮಾಡಿಸಿಕೊಂಡು ಇ-ಸ್ವತ್ತು ಪಡೆಯಲು ನಗರಸಭೆಗೆ ಬಂದಾಗ ಸಮಸ್ಯೆ ಎದುರಾಗಿದೆ. ಮೊದಲು ಸ್ಲಂ ಬೋರ್ಡ್ ಅವರು ರಿಜಿಸ್ಟರ್ ಮಾಡಿದ ಬಳಿಕ ನಗರಸಭೆ ಇ-ಸ್ವತ್ತು ನೀಡುವ ಪ್ರಕ್ರಿಯೆ ಇತ್ತು. ಆದರೀಗ ಈ ಪ್ರಕ್ರಿಯೆ ನಗರಸಭೆಯಿಂದ ಇ-ಸ್ವತ್ತು ಮಾಡಿಸಿದ ಬಳಿಕ ಸ್ಲಮ್ ಬೋರ್ಡ್‌ನಿಂದ ರಿಜಿಸ್ಟರ್ ಮಾಡಿಕೊಡುವಂತಾಗಿದೆ. ಇದರಿಂದ ಬಹಳ ಸಮಸ್ಯೆಯಾಗಿದ್ದು, ಜನರಿಗೆ ಇ-ಸ್ವತ್ತು ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನಿಡಿದ ನಗರಸಭೆ ಪ್ರಭಾರ ಪೌರಾಯುಕ್ತ ನಟರಾಜ್ ಪ್ರತಿಭಟನಾಕಾರರ ಸಮಸ್ಯೆ ಆಲಿಸಿ ಮಾತನಾಡಿ, ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮಂಜೂರಾದ ಮನೆಗಳಿಗೆ ಇ- ಸ್ವತ್ತು ಕೋರಿ ನೂರಾರು ಅರ್ಜಿಗಳು ಈ ಹಿಂದೆಯೇ ಬಂದಿದೆ. ಈ ನಡುವೆ ಇ-ಸ್ವತ್ತು ಕೊಡುವ ವಿಚಾರದಲ್ಲಿ ಗೊಂದಲ ಏರ್ಪಟ್ಟಿದ್ದರಿಂದ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಗರಸಭೆಗೆ ಪತ್ರ ಬಂದಿದ್ದು, ಈ ಪತ್ರದಲ್ಲಿ ನಗರಸಭೆ ಕೊಳಗೇರಿ ಅಭಿವೃದ್ಧಿ ಮಂಡಳಿ ಹೆಸರಿಗೆ ಖಾತೆ ಮಾಡಿಕೊಡುವಂತೆ ನಿರ್ದೇಶನವಿದೆ. ಈ ನಿಟ್ಟಿನಲ್ಲಿ ಪ್ರತಿನಿತ್ಯ 5 ರಿಂದ 10 ಇ-ಸ್ವತ್ತುಗಳನ್ನು ಮಾಡಲಾಗುವುದು ಎಂದರು. ಬಳಿಕ ಮಹಿಳೆಯರು ಪ್ರತಿಭಟನೆ ಕೈಬಿಟ್ಟರು.

ಈ ಸಂದರ್ಭದಲ್ಲಿ ಮಹಿಳಾ ಹೋರಾಟಗಾರ್ತಿ ಶಿವಮ್ಮ, ನಿವಾಸಿಗಳಾದ ಕವಿತಾ, ಸುಮಾ, ನಿಂಗಮ್ಮ, ರಾಧ, ಪುಟ್ಟ ನಂಜಮ್ಮ, ನಾಗವೇಣಿ, ದೀಪಾ, ಜಯಮ್ಮ, ಮಹದೇವ, ನಿಂಗರಾಜು ಇತರರು ಇದ್ದರು.