High court 
ರಾಜ್ಯ

ಅರೆಸ್ಟ್​ ಮಾಡುವುದೆಂದರೆ ಪೊಲೀಸರಿಗೆ ಆಟವಾಗಿದೆ| High court

ಪ್ರಮುಖ ಮುಖ್ಯಾಂಶಗಳು

  • ನಿಯಮ ಮೀರಿದ ಬಂಧನಕ್ಕೆ ಹೈಕೋರ್ಟ್​ ಅಸಮಾಧಾನ
  • ಮಹಿಳೆ ಬಿಡುಗಡೆಗೊಳಿಸಿ ಆದೇಶ
ಬೆಂಗಳೂರು: ಅರೆಸ್ಟ್​ ಮಾಡುವುದೆಂದರೆ ಪೊಲೀಸರಿಗೆ ಆಟವಾಡುವ ರೀತಿ ಆಗಿದೆ. ಇದು ವ್ಯವಸ್ಥೆಯ ವ್ಯಂಗ್ಯವನ್ನು ತೋರಿಸುತ್ತದೆ. ಇಲ್ಲಿ ಕಾನೂನಿನ ಆಡಳಿತ ಅಲ್ಲ, ಬದಲಾಗಿ ಅರಾಜಕತೆ ಇದ್ದಂತೆ ಪೊಲೀಸರು ವರ್ತಿಸುತ್ತಿದ್ದಾರೆ ಎಂದು ಹೈಕೋರ್ಟ್​ ಕಿಡಿಕಾರಿದೆ.
ಅಕ್ರಮ ನ್ಯಾಯಾಂಗ ಬಂಧನದಿಂದ ತನ್ನನ್ನು ಮುಕ್ತಗೊಳಿಸಬೇಕು ಎಂದು ಕೋರಿ ಮಹಿಳೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಬೇಸರಿಸಿತು. ಪೊಲೀಸರು ಯಾವುದೇ ವಿವೇಚನೆಯಿಲ್ಲದೆ ಆರೋಪಿಗಳನ್ನು ಬಂಧಿಸುತ್ತಿದ್ದಾರೆ. 7 ವರ್ಷಕ್ಕಿಂತ ಕಡಿಮೆ ಶಿೆಯಿರುವ ಪ್ರಕರಣಗಳಲ್ಲಿ ಬಂಧನವು ಅಂತಿಮ ಆಯ್ಕೆಯಾಗಿರಬೇಕು ಎಂದು ಸುಪ್ರೀಂ ಕೋರ್ಟ್​ ನಿರ್ದೇಶನ ನೀಡಿದ್ದರೂ, ಪೊಲೀಸರು ಅದನ್ನು ಪಾಲಿಸುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಮಹಿಳೆಯನ್ನು ಬಂಧಮುಕ್ತಗೊಳಿಸಿದ ನ್ಯಾಯಪೀಠ, ಆಕೆಗೆ ಯಾವುದೇ ಕಿರುಕುಳ ನೀಡದಂತೆ ಪೊಲೀಸರಿಗೆ ನಿರ್ದೆಶನ ನೀಡಿತಲ್ಲದೆ, ಕಾನೂನು ಪ್ರಕಾರ ತನಿಖೆ ಮುಂದುವರಿಸಲು ಅನುಮತಿ ನೀಡಿತು. ಪೊಲೀಸರಿಂದ ಕಿರುಕುಳ ಎದುರಾದರೆ ನ್ಯಾಯಾಲಯವನ್ನು ಸಂಪರ್ಕಿಸುವ ಸ್ವಾತಂತ್ರ್ಯವನ್ನು ಮಹಿಳೆಗೆ ನೀಡಲಾಗಿದ್ದು, ಮುಂದಿನ ವಿಚಾರಣೆ ಆ.5ಕ್ಕೆ ನಿಗದಿಯಾಗಿದೆ. 

ಪತಿಯೊಂದಿಗೆ ಪತ್ನಿಗೂ ಜೈಲು:

ಅರ್ಜಿದಾರರ ಪರ ವಕೀಲ ಸುಯೋಗ್​ ಹೇರಳೆ ವಾದಿಸಿ, ಅರ್ಜಿದಾರರ ಪತಿಗೆ ಪ್ರಕರಣದ ದೂರುದಾರ ಮಹಿಳೆ ಜತೆ ಅಕ್ರಮ ಸಂಬಂಧ ಇತ್ತು. ಇದನ್ನು ತಿಳಿದ ನಂತರ ಆಕ್ರೋಶಗೊಂಡಿದ್ದ ಅರ್ಜಿದಾರರು ಆ ಮಹಿಳೆಗೆ ವಾಟ್ಸ್​ಆ್ಯಪ್​ನಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. "ನನ್ನ ಗಂಡನ ಜತೆ ಸಂಬಂಧವಿಟ್ಟುಕೊಳ್ಳುವುದಾದರೆ, ಆತನನ್ನೇ ಮದುವೆಯಾಗು' ಎಂದು ಆಕ್ರೋಶದಿಂದ ಹೇಳಿದ್ದಾರೆಯೇ ಹೊರತು ದೂರುದಾರ ಮಹಿಳೆಗೆ ಮದುವೆಯಾಗುವಂತೆ ಒತ್ತಾಯ ಮಾಡಿಲ್ಲ. ಆದರೆ, ಈ ಸಂಬಂಧ ಆ ಮಹಿಳೆ ನೀಡಿದ ದೂರಿನಲ್ಲಿ ಪತಿ, ಪತ್ನಿ ಇಬ್ಬರನ್ನೂ ಆರೋಪಿಗಳಾಗಿ ಮಾಡಿ ಇಬ್ಬರನ್ನೂ ಬಂಧಿಸಿದ್ದಾರೆ. ಪತಿ ಪೊಲೀಸರ ಕಸ್ಟಡಿಯಲ್ಲಿದ್ದರೆ, ಪತ್ನಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇಲ್ಲಿ ಪತ್ನಿಯನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ವಾದಿಸಿದರು.

ಪೊಲೀಸರ ವಾದವೇನು?:

ಪೊಲೀಸರ ಪರ ವಾದಿಸಿದ ವಕೀಲರು, ಈ ಪ್ರಕರಣ ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿಲ್ಲ. ಪತಿ, ಪತ್ನಿ ಇಬ್ಬರೂ ಸಮಾನವಾಗಿ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಪತ್ನಿಯಿಂದ ವಿಚ್ಚೇದನ ಪಡೆಯುತ್ತೇನೆ ಎಂದಿದ್ದ ಪತಿಯು ತನ್ನ ಸಹೋದ್ಯೋಗಿ ಮಹಿಳೆಗೆ ಮದುವೆಯ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ವಿಡಿಯೋಗಳನ್ನು ಇಟ್ಟುಕೊಂಡು ಆರೋಪಿಗಳು ಹಣ ವಸೂಲಿ ಮಾಡಿದ್ದಾರೆ. ಅಲ್ಲದೆ, ಈ ಟನೆಗಳಿಂದ ಮಹಿಳೆಯ ಮದುವೆ ಕೂಡ ನಿಂತು ಹೋಗಿದೆ. ಆದ್ದರಿಂದ ತನಿಖೆಯ ಅಗತ್ಯಕ್ಕಾಗಿ ಪತ್ನಿಯನ್ನೂ ಬಂಧಿಸಲಾಗಿದೆ ಎಂದು ಸಮರ್ಥಿಸಿಕೊಂಡರು. 

ತಪ್ಪಾದ ಸೆಕ್ಷನ್​ಗಳಡಿ ಕೇಸ್​

ಪ್ರಾಸಿಕ್ಯೂಷನ್​ ವಾದವನ್ನು ಒಪ್ಪದ ನ್ಯಾಯಪೀಠ, ಪತಿಯ ಮೇಲಿರುವ ಆರೋಪದ ಆಧಾರದಲ್ಲಿ ಪತ್ನಿಯನ್ನು ಬಂಧಿಸಲು ಸಾಧ್ಯವಿಲ್ಲ. ಮದುವೆಯ ಭರವಸೆಯಲ್ಲಿ ಲೈಂಗಿಕ ಸಂಪರ್ಕ ಸೆಕ್ಷನ್​ ಅಡಿ ಪತ್ನಿಯ ಬಂಧನ ಹೇಗೆ ಸಾಧ್ಯ? ಸುಲಿಗೆ ಆರೋಪಗಳಿಗೆ ಯಾವುದೇ ಸಾಕ್ಷ$್ಯವಿಲ್ಲ. ಪತಿಯನ್ನು ತನ್ನಿಂದ ದೂರು ಮಾಡಿದ ಕೋಪದಲ್ಲಿ ಪತ್ನಿ ಆಡಿದ ಮಾತುಗಳು ಬಿಎನ್​ಎಸ್​ ಅಡಿ ಬೆದರಿಕೆಗೆ ಸಂಬಂಧಿಸಿದ ಸೆಕ್ಷನ್​ಗಳು ಬರುತ್ತವೆಯೇ ಹೊರತು, ಸುಲಿಗೆ ಆರೋಪವಾಗುವುದಿಲ್ಲ. ಆದ್ದರಿಂದ ಸೂಕ್ತ ಕಾರಣಗಳಿಲ್ಲದೆ, ಅರ್ಜಿದಾರರನ್ನು ನ್ಯಾಯಾಂಗ ಬಂಧನಕ್ಕೆ ನೀಡಿರುವ ಮ್ಯಾಜಿಸ್ಟ್ರೆಟ್​ ಆದೇಶ ಕಾನೂನುಬಾಹಿರ ಎಂದು ಘೋಷಿಸಿತು.