ನಾಡಹಬ್ಬದ ಇತಿಹಾಸದಲ್ಲೇ ಪ್ರಥಮ ಬಾರಿಗೆ ವಜ್ರಮುಷ್ಟಿ ಕಾಳಗ ಅಧಿಕೃತವಾಗಿ ರದ್ದು! ಐತಿಹಾಸಿಕ ಸಂಪ್ರದಾಯಕ್ಕೆ ಚ್ಯುತಿ | Mysuru Dasara  
ರಾಜ್ಯ

ನಾಡಹಬ್ಬದ ಇತಿಹಾಸದಲ್ಲೇ ಪ್ರಥಮ ಬಾರಿಗೆ ವಜ್ರಮುಷ್ಟಿ ಕಾಳಗ ಅಧಿಕೃತವಾಗಿ ರದ್ದು! ಐತಿಹಾಸಿಕ ಸಂಪ್ರದಾಯಕ್ಕೆ ಚ್ಯುತಿ | Mysuru Dasara

ಅರಮನೆಯ ಸಂಪ್ರದಾಯದಂತೆ ವಿಜಯದಶಮಿ ದಿನ ನಡೆಯಬೇಕಿದ್ದ ಸಾಂಪ್ರದಾಯಿಕ ಮುಷ್ಟಿಕಾಳಗಕ್ಕೆ ಪೊಲೀಸರ ನಿರ್ಬಂಧದಿಂದ ಅಡಚಣೆ ಉಂಟಾಗಿದ್ದು, ಕಾಳಗ ನಡೆಯದೆಯೇ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಜಯಯಾತ್ರೆ ಹೊರಟರು.

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಐತಿಹಾಸಿಕ ಸಂಪ್ರದಾಯಗಳಲ್ಲಿ ಒಂದಾದ ದೇವಮಲ್ಲ ಜಟ್ಟಿಗಳ ವಜ್ರಮುಷ್ಟಿ ಕಾಳಗ ಇತಿಹಾಸದಲ್ಲೇ ಮೊದಲ ಬಾರಿಗೆ ರದ್ದಾಗಿರುವುದು ಸದ್ಯ ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ದಸರಾ ಸಂಪ್ರದಾಯಕ್ಕೆ ಚ್ಯುತಿ ಆಗಿರುವುದು ನಾಡಹಬ್ಬದ ಇತಿಹಾಸದಲ್ಲೇ ಮೊದಲು ಎಂಬುದು ಅತೀವ ಬೇಸರ, ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಅರಮನೆಯ ಸಂಪ್ರದಾಯದಂತೆ ವಿಜಯದಶಮಿ ದಿನ ನಡೆಯಬೇಕಿದ್ದ ಸಾಂಪ್ರದಾಯಿಕ ಮುಷ್ಟಿಕಾಳಗಕ್ಕೆ ಪೊಲೀಸರ ನಿರ್ಬಂಧದಿಂದ ಅಡಚಣೆ ಉಂಟಾಗಿದ್ದು, ಕಾಳಗ ನಡೆಯದೆಯೇ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಜಯಯಾತ್ರೆ ಹೊರಟರು.

ಪೊಲೀಸರು ಅವಕಾಶ ನೀಡಲಿಲ್ಲ

ಅರಮನೆಯಿಂದ ನೀಡಲಾಗಿದ್ದ ಪ್ರವೇಶ ಪಾಸ್‌ಗಳನ್ನು ಹೊಂದಿದ್ದ ಜಟ್ಟಿ ಪೈಲ್ವಾನರು ಹಾಗೂ ಉಸ್ತಾದ್‌ಗಳಿಗೆ ಅರಮನೆಯೊಳಗೆ ಪ್ರವೇಶಿಸಲು ಪೊಲೀಸರು ಅವಕಾಶ ನೀಡಲಿಲ್ಲ ಎನ್ನಲಾಗಿದೆ. ಇದರಿಂದ ನಿಗದಿತ ಮುಹೂರ್ತದೊಳಗೆ ಅರಮನೆ ಪ್ರವೇಶಿಸಿ ಕಾಳಗಕ್ಕೆ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗದೆ, ಸಾಂಪ್ರದಾಯಿಕ ವಜ್ರಮುಷ್ಟಿ ಕಾಳಗ ರದ್ದುಗೊಂಡಿತು.

ವಜ್ರಮುಷ್ಟಿ ಕಾಳಗದ ಬಳಿಕ ನಡೆಯಬೇಕಿದ್ದ ವಿಜಯಯಾತ್ರೆಗೆ ಮುನ್ನವೇ ಈ ಬೆಳವಣಿಗೆ ಸಂಭವಿಸಿದ್ದು, ದಸರಾ ಸಂಪ್ರದಾಯಕ್ಕೆ ಚ್ಯುತಿ ಉಂಟಾದಂತಾಗಿದೆ. ಸರ್ಕಾರ ಮತ್ತು ಅರಮನೆ ಆಡಳಿತದ ನಡುವೆ ಸಮನ್ವಯದ ಕೊರತೆ ಹಾಗೂ ಪ್ರವೇಶ ವ್ಯವಸ್ಥೆಯಲ್ಲಿನ ಗೊಂದಲವೇ ಈ ಪರಿಸ್ಥಿತಿಗೆ ಕಾರಣ ಎಂಬ ಆರೋಪಗಳು ಕೇಳಿಬಂದಿವೆ.

2 ಜೋಡಿಗಳ ಮಧ್ಯೆ ಕಾಳಗ ನಿಗದಿಯಾಗಿತ್ತು

ಈ ಬಾರಿಯ ವಜ್ರಮುಷ್ಟಿ ಕಾಳಗದಲ್ಲಿ ಎರಡು ಜೋಡಿಗಳ ನಡುವೆ ಸೆಣಸಾಟ ನಡೆಯಬೇಕಿತ್ತು. ಮೊದಲ ಜೋಡಿಯಲ್ಲಿ ಮೈಸೂರಿನ ಬಲರಾಮ ಜಟ್ಟಿ ಅವರ ಪುತ್ರ ಬಿ.ಆರ್. ಮಹೇಶ್ ಜಟ್ಟಿ ಹಾಗೂ ಬೆಂಗಳೂರಿನ ಜಿತೇಂದ್ರ ಜಟ್ಟಿ ಅವರ ಪುತ್ರ ಚೇತನ್ ಜೆ. ಜಟ್ಟಿ ನಡುವೆ ಕಾಳಗ ನಿಗದಿಯಾಗಿತ್ತು.

ಎರಡನೇ ಜೋಡಿಯಲ್ಲಿ ಚನ್ನಪಟ್ಟಣದ ಟಿ. ಸುರೇಶ್ ಜಟ್ಟಿ ಅವರ ಪುತ್ರ ಎಸ್. ತೇಜಸ್ ಜಟ್ಟಿ ಹಾಗೂ ಚಾಮರಾಜನಗರದ ಮಾಲಕರ್ ಜಟ್ಟಪ್ಪ ಅವರ ಪುತ್ರ ಸತೀಶ್ ಜಟ್ಟಿ ನಡುವೆ ಕಾಳಗ ನಡೆಯಬೇಕಿತ್ತು. ಆದರೆ, ಪ್ರವೇಶಕ್ಕೆ ಸಂಬಂಧಿಸಿದ ಅಡಚಣೆಯಿಂದಾಗಿ ಈ ಜಟ್ಟಿಗಳಿಗೆ ಸಾಂಪ್ರದಾಯಿಕ ಕಾಳಗದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ.

ಶ್ವೇತ ವರಾಹಸ್ವಾಮಿ ದೇವಸ್ಥಾನದಲ್ಲಿ ಸಿದ್ಧತೆ

ಕಾಳಗದಲ್ಲಿ ಭಾಗವಹಿಸಲು ಜಟ್ಟಿ ಪೈಲ್ವಾನರು ಶ್ವೇತ ವರಾಹಸ್ವಾಮಿ ದೇವಸ್ಥಾನದಲ್ಲಿ ಸಿದ್ಧರಾಗಿ ಕಾಯುತ್ತಿದ್ದರು. ಅರಮನೆಯಿಂದ ನೀಡಿದ್ದ ಪಾಸ್‌ಗಳಿದ್ದರೂ ಪ್ರವೇಶಕ್ಕೆ ಅಡ್ಡಿಯುಂಟಾದ ಕಾರಣ, ಜಟ್ಟಿಗಳು ಹಾಗೂ ಉಸ್ತಾದ್‌ಗಳು ಅಸಮಾಧಾನಗೊಂಡರು ಎನ್ನಲಾಗಿದೆ. ಮುಹೂರ್ತದೊಳಗೆ ಅರಮನೆಯೊಳಗೆ ಪ್ರವೇಶಿಸಿ ಕಾಳಗಕ್ಕೆ ಸಿದ್ಧತೆ ನಡೆಸಲು ಅವಕಾಶ ಸಿಗದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿತು.

ರಾಜವಂಶಸ್ಥರ ಸಂಪ್ರದಾಯಕ್ಕೆ ಅನುಗುಣವಾಗಿ ನಡೆಯಬೇಕಿದ್ದ ಕಾರ್ಯಕ್ರಮಕ್ಕೆ ವ್ಯವಸ್ಥೆ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಜತೆಗೆ ಒಳಗೆ ಬಿಡಲು ಜಟ್ಟಿಗಳಿಗೆ ಹಾಗೂ ಕುಟುಂಬ ಸದಸ್ಯರಿಗೂ ತೊಂದರೆ ನೀಡಿದಾರೆ ಎಂಬ ಆಕ್ಷೇಪವೂ ವ್ಯಕ್ತವಾಗಿದೆ. ಪೊಲೀಸರ ನಿರ್ಬಂಧ ಹಾಗೂ ಪ್ರವೇಶದ ಗೊಂದಲದಿಂದಾಗಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದ್ದ ಸಂಪ್ರದಾಯಕ್ಕೆ ಈ ಬಾರಿ ಅಡ್ಡಿಯಾಗಿದೆ.

5000 ವರ್ಷಗಳ ಇತಿಹಾಸದ ಸಮರಕಲೆ

ವಜ್ರಮುಷ್ಟಿ ಕಾಳಗವು ಪ್ರಾಚೀನ ಸಮರಕಲೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಮೈಸೂರು ಅರಮನೆಯ ದಸರಾ ಸಂಪ್ರದಾಯದಲ್ಲಿ ಈ ಕಾಳಗಕ್ಕೆ ವಿಶೇಷ ಸ್ಥಾನವಿದೆ. ಪ್ರತಿವರ್ಷ ವಿಜಯದಶಮಿ ದಿನ ಬನ್ನಿಮರಕ್ಕೆ ಪೂಜೆ ಸಲ್ಲಿಸುವ ಮುನ್ನ ದೇವಮಲ್ಲ ಜಟ್ಟಿಗಳ ನಡುವೆ ವಜ್ರಮುಷ್ಟಿ ಕಾಳಗ ನಡೆಯುವುದು ವಾಡಿಕೆ.

ಈ ಬಾರಿ ಕಾಳಗ ನಡೆಯದಿರುವುದು ದಸರಾ ಸಂಪ್ರದಾಯದ ಇತಿಹಾಸದಲ್ಲೇ ಹಿಂದೆಂದೂ ನಡೆದಿರಲಿಲ್ಲ. ಅರಮನೆಯ ಸಂಪ್ರದಾಯದಂತೆ ನಡೆಯಬೇಕಿದ್ದ ಕಾಳಗ ರದ್ದಾಗಿರುವುದಕ್ಕೆ ಪ್ರವೇಶ ನಿರ್ಬಂಧವೇ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಈ ಘಟನೆ ಸರ್ಕಾರ ಮತ್ತು ಅರಮನೆ ನಡುವಿನ ಸಮನ್ವಯದ ಕುರಿತು ಭಾರಿ ಚರ್ಚೆಗೆ ಗ್ರಾಸವಾಗಿದೆ.