K.J. George 
ರಾಜ್ಯ

ಗೃಹಜ್ಯೋತಿ ನಿಲ್ಲುತ್ತಾ? ವಿದ್ಯುತ್ ಖಾಸಗೀಕರಣ ಆಗುತ್ತಾ? ಸಚಿವ ಕೆ.ಜೆ. ಜಾರ್ಜ್ ಕೊಟ್ಟ ಉತ್ತರ ಹೀಗಿದೆ

ಬೆಂಗಳೂರು: ಗೃಹಜ್ಯೋತಿ ಯೋಜನೆಯ ಪರಿಷ್ಕರಣೆ ವೇಳೆ ಫಲಾನುಭವಿಗಳಿಂದ ಜಾತಿ ಪ್ರಮಾಣಪತ್ರ ಕೇಳುತ್ತಿಲ್ಲ. ಸರ್ಕಾರದ ದಾಖಲೆಗಾಗಿ ಕೇವಲ ಜಾತಿ ಮಾಹಿತಿ ಮಾತ್ರ ಪಡೆಯಲಾಗುತ್ತಿದ್ದು, ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್( K.J. George) ಸ್ಪಷ್ಟಪಡಿಸಿದರು.
"ಗೃಹಜ್ಯೋತಿ ಯೋಜನೆ ಪರಿಷ್ಕರಣೆಯಲ್ಲಿ ಜಾತಿ ಪ್ರಮಾಣಪತ್ರ ಕೇಳುತ್ತಿಲ್ಲ. ಸರ್ಕಾರದ ಬಳಿ ಮಾಹಿತಿ ಇರುವುದು ಒಳ್ಳೆಯದೇ. ಅನಗತ್ಯವಾಗಿ ಯಾರೂ ಗೊಂದಲಕ್ಕೆ ಒಳಗಾಗಬಾರದು. ಯಾವುದೇ ಗ್ಯಾರಂಟಿ ಯೋಜನೆಯನ್ನು ರದ್ದು ಮಾಡುವ ವಿಚಾರ ಸರ್ಕಾರದ ಮುಂದಿಲ್ಲ," ಎಂದು ಅವರು ಬೆಂಗಳೂರಿನಲ್ಲಿ ಹೇಳಿದರು.

'ಅರ್ಹರಲ್ಲದವರು ಸೇರಿರುವ ಬಗ್ಗೆ ದೂರು ಬಂದಿದೆ'

"ಕೆಲವರು ಅರ್ಹರಲ್ಲದವರೂ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಅದಕ್ಕಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಎಲ್ಲ ಅರ್ಜಿಗಳಲ್ಲೂ ಜಾತಿ ಮಾಹಿತಿ ಕೇಳಲಾಗುತ್ತದೆ. ಜನಗಣತಿಯಲ್ಲೂ ಜಾತಿ ಕೇಳುತ್ತಾರೆ. ಜಾತಿ ಕೇಳುವುದು ತಪ್ಪೇ? ನಾವು ಜಾತಿ ಪ್ರಮಾಣಪತ್ರ ಕೇಳುತ್ತಿಲ್ಲ. ಕೇವಲ ಜಾತಿ ವಿವರ ತಿಳಿಸಿದರೆ ಸಾಕು," ಎಂದು ಸಚಿವರು ಹೇಳಿದರು.
'ವಿದ್ಯುತ್ ಖಾಸಗೀಕರಣ ಕುರಿತು ಇನ್ನೂ ತೀರ್ಮಾನ ಆಗಿಲ್ಲ'
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಸೇರಿದಂತೆ ಎಸ್ಕಾಂಗಳ ವಿದ್ಯುತ್ ವಿತರಣೆಯನ್ನು ಖಾಸಗೀಕರಣಕ್ಕೆ ನೀಡುವ ಕುರಿತು ಸರ್ಕಾರ ಇನ್ನೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. "ಈ ವಿಷಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ. ಅಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಸರ್ಕಾರದ ಹಿತಾಸಕ್ತಿಯಿಂದ ಯಾವುದೇ ನಿರ್ಧಾರ ಕೈಗೊಂಡಿಲ್ಲ," ಎಂದು ಹೇಳಿದರು.

ಎಸ್ಕಾಂಗಳೇ ಆಕ್ಷೇಪ ವ್ಯಕ್ತಪಡಿಸಿವೆ

"ಬೆಸ್ಕಾಂ ಸೇರಿದಂತೆ ಎಲ್ಲ ಎಸ್ಕಾಂಗಳು ಖಾಸಗೀಕರಣಕ್ಕೆ ವಿರೋಧ ವ್ಯಕ್ತಪಡಿಸಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಆಕ್ಷೇಪ ಸಲ್ಲಿಸಿವೆ. ಟಾಟಾ ಸಂಸ್ಥೆ ಪ್ರಸ್ತಾಪ ಸಲ್ಲಿಸಿದೆ. ಆದರೆ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ. ಸಚಿವ ಸಂಪುಟದಲ್ಲಿ ಚರ್ಚೆಯಾದ ಬಳಿಕವೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು," ಎಂದು ಕೆ.ಜೆ. ಜಾರ್ಜ್ ತಿಳಿಸಿದರು.