ಆಹಾರ ಸಚಿವ ರಿಜ್ವಾನ್ ಅರ್ಷದ್ 
ರಾಜ್ಯ

ಆಹಾರ ಭದ್ರತೆ ಕಾಂಗ್ರೆಸ್ ಪ್ರತೀಕ: ಸಚಿವ ರಿಜ್ವಾನ್ ಅರ್ಷದ್ ಹೇಳಿಕೆ- Rizwan Arshad

ಬೆಂಗಳೂರು:ಆಹಾರ ಭದ್ರತಾ ಕಾಯ್ದೆ(Food security),ಅನ್ನಭಾಗ್ಯ ಕಾರ್ಯಕ್ರಮಗಳು ಬರೀ ಸರ್ಕಾರಿ ಯೋಜನೆಗಳಲ್ಲ. ಬದಲಾಗಿ ಬಡವರ ಅನ್ನದ ಹಕ್ಕು ರಕ್ಷಿಸುವ ಮೂಲಕ ಪ್ರತಿ ಅರ್ಹ ಕುಟುಂಬಕ್ಕೂ ಆಹಾರ ಭದ್ರತೆ ಒದಗಿಸುವ ನಮ್ಮ ಸರ್ಕಾರದ ಪ್ರತೀಕವಾಗಿದೆ ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ಹೇಳಿದ್ದಾರೆ.
ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘವು ಕಬ್ಬನ್‌ಪಾರ್ಕ್‌ನ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ‘ಅಭಿನಂದನಾ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಎಂಬ ಆಶಯದೊಂದಿಗೆ ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್, ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದಿದ್ದರು. ಈ ಕಾಯ್ದೆ ಮೂಲಕ ಬಡವರು ಹಾಗೂ ದುರ್ಬಲ ವರ್ಗದವರಿಗೆ ಆಹಾರ ಹಕ್ಕು ಖಾತ್ರಿಪಡಿಸಿ ದೇಶದ ಆಹಾರ ಭದ್ರತೆಗೆ ಮಹತ್ವದ ಕೊಡುಗೆ ನೀಡಲಾಯಿತು. ಅದೇ ಜನಪರ ಆಶಯವನ್ನು ಕರ್ನಾಟಕದಲ್ಲಿಯೂ ಮುಂದುವರಿಸಿದ ಆಗಿನ ಸಿಎಂ ಸಿದ್ದರಾಮಯ್ಯ, ಇದನ್ನು ಅನುಷ್ಠಾನಕ್ಕೆ ತಂದರು ಎಂದರು.
ಫಲಾನುಭವಿಗಳಿಗೆ ಸಮರ್ಪಕವಾಗಿ ಪಡಿತರ ವಿತರಿಸುವುದು ನ್ಯಾಯಬೆಲೆ ಅಂಗಡಿಯವರ ಮಹತ್ವದ ಜವಾಬ್ದಾರಿಯಾಗಿದೆ. ಪಡಿತರ ವಿತರಣೆಯಲ್ಲಿ ಯಾವುದೇ ಲೋಪ, ಅಕ್ರಮ ಅಥವಾ ವ್ಯತ್ಯಾಸ ಕಂಡುಬಂದರೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಿತರಣಾ ವ್ಯವಸ್ಥೆಯಲ್ಲಿ ಎದುರಾಗುತ್ತಿರುವ ಸರ್ವರ್ ಸಮಸ್ಯೆ ನಿವಾರಣೆಗೆ ಇ-ಪಾಸ್(ಇ-ಪಿಒಎಸ್) ಯಂತ್ರಗಳ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು.
ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ಸೇರಿ ನೂರಾರು ನ್ಯಾಯಬೆಲೆ ಅಂಗಡಿ ಮಾಲೀಕರು ಉಪಸ್ಥಿತರಿದ್ದರು.